ಬೆಂಗಳೂರು, ಸೆ.24 www.bengaluruwire.com: ಐತಿಹಾಸಿಕ ಪಾರಂಪರಿಕ ತಾಣವಾದ ಲಾಲ್ಬಾಗ್ ಸಸ್ಯತೋಟದ ಪಶ್ಚಿಮ ದ್ವಾರದ ಮುಂಭಾಗದಲ್ಲಿ ನಿಯಮಬಾಹಿರವಾಗಿ ‘ನಂದಿನಿ ಹಾಲು ಉತ್ಪನ್ನಗಳ ಮಾರಾಟ ಮಳಿಗೆ’ ಸ್ಥಾಪಿಸಲು ಅನುಮತಿ ನೀಡಲಾಗಿದ್ದು, ಕೂಡಲೇ ಅದನ್ನು ತೆರವುಗೊಳಿಸಬೇಕು ಎಂದು ಹಿಂದಿನ ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್. ರಮೇಶ್ ಆಗ್ರಹಿಸಿದ್ದಾರೆ.
ಒಂದು ವೇಳೆ ಅನಧಿಕೃತ ಮಳಿಗೆಯನ್ನು ತೆರವು ಮಾಡದಿದ್ದರೆ ರಾಷ್ಟ್ರೀಯ ಹಸಿರು ನ್ಯಾಯಾಲಯ (NGT) ಹಾಗೂ ಹೈಕೋರ್ಟ್ ಮೊರೆ ಹೋಗುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ.
ಪಾರಂಪರಿಕ ತಾಣಕ್ಕೆ ಧಕ್ಕೆ: ನಿಯಮ ಗಾಳಿಗೆ ತೂರಿದ ಪಾಲಿಕೆ:
ಸುಮಾರು 490 ವರ್ಷಗಳ ನಾಡಪ್ರಭು ಕೆಂಪೇಗೌಡರ ಕಾಲದ ಸಿದ್ಧಾಪುರ ಕೆರೆ, ಗಡಿ ಗೋಪುರ ಹಾಗೂ 1760 ರಲ್ಲಿ ಹೈದರಾಲಿ ನಿರ್ಮಿಸಿದ 240 ಕ್ಕೂ ಹೆಚ್ಚು ಎಕರೆ ವಿಸ್ತೀರ್ಣದ ಲಾಲ್ಬಾಗ್ ಪಾರಂಪರಿಕ ಮಹತ್ವ ಹೊಂದಿದೆ. ಇಂತಹ ಅಮೂಲ್ಯ ಉದ್ಯಾನವನಗಳನ್ನು ರಕ್ಷಿಸಲು 1979ರ ‘ಕರ್ನಾಟಕ ವೃಕ್ಷ ಸಂರಕ್ಷಣಾ ಕಾಯ್ದೆ’ ಜಾರಿಯಲ್ಲಿದೆ.

ಆದರೆ, ಲಾಲ್ಬಾಗ್ ಪಶ್ಚಿಮ ದ್ವಾರದ ಬಳಿ ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ (KMF) ಮಳಿಗೆ ಸ್ಥಾಪಿಸಲು ಬಂದ ಪ್ರಸ್ತಾವನೆಯನ್ನು ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರು 2025ರ ಆಗಸ್ಟ್ 22ರಂದೇ ತಿರಸ್ಕರಿಸಿದ್ದರು. ಆದರೂ, ಬೆಂಗಳೂರು ಕೇಂದ್ರ ನಗರ ಪಾಲಿಕೆಯು ರಾಜಕೀಯ ಪ್ರಭಾವಕ್ಕೆ ಒಳಗಾಗಿ 2026ರ ಏಪ್ರಿಲ್ 22ರಂದು ಮಳಿಗೆಗೆ ಅನುಮೋದನೆ ನೀಡಿ, ಜುಲೈ 22ರಂದು 100 ಚದರ ಅಡಿ ಜಾಗವನ್ನು ಅಕ್ರಮವಾಗಿ ಕೆಎಂಎಫ್ ಗೆ ಹಸ್ತಾಂತರಿಸಿದೆ ಎಂದು ರಮೇಶ್ ಗಂಭೀರ ಆರೋಪ ಮಾಡಿದ್ದಾರೆ.
ಆದೇಶವಿದ್ದರೂ ಮಣಿಯದ ಅಧಿಕಾರಿಗಳು:
ಈ ಕಾನೂನುಬಾಹಿರ ನಿರ್ಮಾಣವನ್ನು ಕೂಡಲೇ ತೆರವುಗೊಳಿಸುವಂತೆ ತೋಟಗಾರಿಕೆ ಇಲಾಖೆ ನಿರ್ದೇಶಕರು 2026ರ ಆಗಸ್ಟ್ 10ರಂದು ಆದೇಶ ಹೊರಡಿಸಿದ್ದಾರೆ. ಅಲ್ಲದೆ, ‘ಲಾಲ್ಬಾಗ್ ನಡಿಗೆದಾರರ ಒಕ್ಕೂಟ’ ಕೂಡ ನೂರಾರು ಜನರ ಸಹಿಯೊಂದಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಮತ್ತು ಕೇಂದ್ರ ನಗರ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿತ್ತು.
ಆದಾಗ್ಯೂ, ಆಡಳಿತ ಪಕ್ಷದ ಪ್ರಭಾವಿ ರಾಜಕಾರಣಿಗಳ ಒತ್ತಡಕ್ಕೆ ಮಣಿದಿರುವ ಅಧಿಕಾರಿಗಳು ಮಳಿಗೆಯನ್ನು ತೆರವುಗೊಳಿಸಲು ಮೀನಮೇಷ ಎಣಿಸುತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಠಿಣ ಕಾನೂನು ಹೋರಾಟದ ಎಚ್ಚರಿಕೆ:
ಪಾರಂಪರಿಕ ತಾಣದ ಅಸ್ಮಿತೆಗೆ ಧಕ್ಕೆ ತರುತ್ತಿರುವ ಈ ಮಳಿಗೆಯನ್ನು ತಕ್ಷಣವೇ ನೆಲಸಮಗೊಳಿಸಬೇಕು ಎಂದು ಒತ್ತಾಯಿಸಿ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಹಾಗೂ ಜಿಬಿಎ ಮುಖ್ಯ ಆಯುಕ್ತರಿಗೆ ಸಮಗ್ರ ದಾಖಲೆಗಳನ್ನು ಸಲ್ಲಿಸಲಾಗಿದೆ. ಈ ಅಕ್ರಮದ ವಿರುದ್ಧ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ, ನಗರದ ಹೆಚ್ಚುವರಿ ಮುಖ್ಯ ಮಹಾನಗರ ಮ್ಯಾಜಿಸ್ಟ್ರೇಟ್ ನ್ಯಾಯಾಲಯ (ACMM) ಹಾಗೂ ಹೈಕೋರ್ಟ್ನಲ್ಲಿ ಮೊಕದ್ದಮೆ ಹೂಡಲಾಗುವುದು ಎಂದು ಎನ್.ಆರ್. ರಮೇಶ್ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.



















