ಬೆಂಗಳೂರು, ನ.05 www.bengaluruwire.com: ತಮಿಳು ಚಿತ್ರರಂಗದ ಸೂಪರ್ಸ್ಟಾರ್ ರಜನಿಕಾಂತ್ ಅವರು ಗುರುವಾರ ದಿಢೀರನೆ ಬೆಂಗಳೂರಿಗೆ ಆಗಮಿಸಿದ್ದು, ರಾಜರಾಜೇಶ್ವರಿ ನಗರದಲ್ಲಿರುವ ಜಯದೇವ್ ಮೆಮೋರಿಯಲ್ ರಾಷ್ಟ್ರೋತ್ಥಾನ ಆಸ್ಪತ್ರೆಗೆ ಭೇಟಿ ನೀಡಿ ತೀವ್ರ ನಿಗಾ ಘಟಕದಲ್ಲಿ (ICU) ಚಿಕಿತ್ಸೆ ಪಡೆಯುತ್ತಿರುವ ತಮ್ಮ ಹಿರಿಯ ಸಹೋದರ ಸತ್ಯನಾರಾಯಣ ರಾವ್ ಗಾಯಕ್ವಾಡ್ ಅವರ ಆರೋಗ್ಯ ವಿಚಾರಿಸಿದ್ದಾರೆ.
ವಿಜಯದಶಮಿ ಹಬ್ಬದ ದಿನದಂದು ಮನೆಯಲ್ಲಿ ಪೂಜೆ ನೆರವೇರಿಸುವ ವೇಳೆ ಸ್ಟೂಲ್ನಿಂದ ಆಯತಪ್ಪಿ ಕೆಳಗೆ ಬಿದ್ದಿದ್ದ ಸತ್ಯನಾರಾಯಣ ರಾವ್ ಅವರಿಗೆ ತಲೆಯ ಭಾಗದಲ್ಲಿ ತೀವ್ರ ಪೆಟ್ಟಾಗಿತ್ತು. ಅಪಾರ ಪ್ರಮಾಣದ ರಕ್ತಸ್ರಾವವಾದ ಹಿನ್ನೆಲೆಯಲ್ಲಿ ಅವರನ್ನು ತಕ್ಷಣವೇ ಕುಟುಂಬಸ್ಥರು ಆರ್.ಆರ್. ನಗರದ ರಾಷ್ಟ್ರೋತ್ಥಾನ ಆಸ್ಪತ್ರೆಗೆ ದಾಖಲಿಸಿದ್ದರು. ತಪಾಸಣೆ ವೇಳೆ ಮೆದುಳಿನ ಭಾಗದಲ್ಲಿ ರಕ್ತ ಹೆಪ್ಪುಗಟ್ಟಿರುವುದು (ಬ್ಲಡ್ ಕ್ಲಾಟ್) ಕಂಡುಬಂದಿದ್ದರಿಂದ, ಸೋಮವಾರ ನುರಿತ ವೈದ್ಯರ ತಂಡ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ (ಸರ್ಜರಿ) ನಡೆಸಿತ್ತು.

ಶಸ್ತ್ರಚಿಕಿತ್ಸೆ ಬಳಿಕ ಮೆದುಳಿನಲ್ಲಿದ್ದ ರಕ್ತ ಹೆಪ್ಪುಗಟ್ಟುವಿಕೆ ಸಮಸ್ಯೆಗೆ ಪರಿಹಾರ ದೊರೆತಿದ್ದರೂ, ಸತ್ಯನಾರಾಯಣ ರಾವ್ ಅವರು ಸದ್ಯ ಅರೆ ಕೋಮಾ ಸ್ಥಿತಿಯಲ್ಲಿದ್ದು, ಇನ್ನೂ ಕಣ್ಣು ಬಿಟ್ಟಿಲ್ಲ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ವೈದ್ಯರು ಅವರ ಆರೋಗ್ಯದ ಮೇಲೆ ನಿರಂತರ ನಿಗಾ ಇರಿಸಿದ್ದಾರೆ.
ತಮ್ಮ ಬಹುನಿರೀಕ್ಷಿತ ‘ಧರ್ಮನ್’ ಚಿತ್ರದ ಚಿತ್ರೀಕರಣದ ಬಿಡುವಿಲ್ಲದ ವೇಳಾಪಟ್ಟಿಯ ನಡುವೆಯೂ ಅಣ್ಣನ ಅಸ್ವಸ್ಥತೆಯ ಸುದ್ದಿ ತಿಳಿಯುತ್ತಿದ್ದಂತೆ ಚೆನ್ನೈನಿಂದ ವಿಮಾನದ ಮೂಲಕ ಬೆಂಗಳೂರಿಗೆ ಆಗಮಿಸಿದ ರಜನಿಕಾಂತ್, ಆಸ್ಪತ್ರೆಯ ಐಸಿಯು ವಿಭಾಗಕ್ಕೆ ತೆರಳಿ ಅಣ್ಣನನ್ನು ವೀಕ್ಷಿಸಿದರು. ಬಳಿಕ ಚಿಕಿತ್ಸೆ ನೀಡುತ್ತಿರುವ ತಜ್ಞ ವೈದ್ಯರೊಂದಿಗೆ ಸಮಾಲೋಚನೆ ನಡೆಸಿ ಆರೋಗ್ಯ ಸ್ಥಿತಿಗತಿಯ ಸಂಪೂರ್ಣ ವಿವರ ಪಡೆದುಕೊಂಡರು. ಇಷ್ಟು ದೊಡ್ಡ ತಾರೆಯಾಗಿದ್ದರೂ ಯಾವುದೇ ಅಬ್ಬರವಿಲ್ಲದೆ ಸಾಮಾನ್ಯರಂತೆ ಆಸ್ಪತ್ರೆಗೆ ಭೇಟಿ ನೀಡಿ ಅಣ್ಣನ ಯೋಗಕ್ಷೇಮ ವಿಚಾರಿಸಿದ ತಲೈವಾ ಅವರ ಸರಳತೆಗೆ ಸಾರ್ವಜನಿಕರು ಹಾಗೂ ಅಭಿಮಾನಿಗಳಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಆಸ್ಪತ್ರೆ ಭೇಟಿಯ ನಂತರ ರಜನಿಕಾಂತ್ ಅವರು ಕನಕಪುರ ರಸ್ತೆಯಲ್ಲಿರುವ ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರ ಆಶ್ರಮಕ್ಕೆ ತೆರಳಿ ಕೆಲಕಾಲ ಧ್ಯಾನದಲ್ಲಿ ಪಾಲ್ಗೊಂಡಿದ್ದಾರೆ. ಗುರುವಾರ ರಾತ್ರಿಯೇ ಅವರು ಮತ್ತೆ ಚೆನ್ನೈಗೆ ವಾಪಸ್ಸಾಗಲಿದ್ದು, ಶೀಘ್ರದಲ್ಲೇ ಕುಟುಂಬ ಸಮೇತರಾಗಿ ಬೆಂಗಳೂರಿಗೆ ಮರಳಿ ಅಣ್ಣನ ಶುಶ್ರೂಷೆಯಲ್ಲಿ ಭಾಗಿಯಾಗಲಿದ್ದಾರೆ ಎಂದು ಅವರ ಆಪ್ತ ಮೂಲಗಳು ಖಚಿತಪಡಿಸಿವೆ.
















