ಬೆಂಗಳೂರು, ಸೆ.24 www.bengaluruwire.com: ನಾಗರಿಕರ ಸಕ್ರಿಯ ಸಹಕಾರ ಮತ್ತು ಸಹಭಾಗಿತ್ವವಿಲ್ಲದೆ ಬೆಂಗಳೂರಿನ ತ್ಯಾಜ್ಯ ವಿಲೇವಾರಿ ವ್ಯವಸ್ಥೆಯನ್ನು ಶಾಶ್ವತವಾಗಿ ಸುಧಾರಿಸಲು ಸಾಧ್ಯವಿಲ್ಲ ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಸ್ಪಷ್ಟಪಡಿಸಿದ್ದಾರೆ.
ನಗರದ ಪ್ರತಿಯೊಂದು ಮನೆಗೂ ಕಸ ಸಂಗ್ರಹಣಾ ವಾಹನ ತಲುಪುವಂತೆ ಮಾಡುವುದು ಸರ್ಕಾರದ ಹೊಣೆ, ಆದರೆ ಕಸವನ್ನು ರಸ್ತೆಗೆ ಎಸೆಯದೆ ವಾಹನಗಳಿಗೇ ನೀಡುವುದು ಜನರ ಕರ್ತವ್ಯ ಎಂದು ಅವರು ಕರೆ ನೀಡಿದ್ದಾರೆ.
ಜವಾಹರಲಾಲ್ ನೆಹರು ತಾರಾಲಯದಲ್ಲಿ ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ಕುರಿತು ಆಯೋಜಿಸಲಾಗಿದ್ದ ಪಾಲುದಾರರ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.
ಮನೆಬಾಗಿಲಿಗೆ ಕಸದ ವಾಹನ: ಸಚಿವರ ಭರವಸೆ:

ಹಿಂದಿನ ಟೆಂಡರ್ ನಿಯಮಗಳು ಮತ್ತು ಹಳೆಯ ವಾಹನಗಳ ಮಿತಿಗಳಿಂದಾಗಿ ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಸೇವೆ ನೀಡಲು ತೊಡಕಾಗಿದೆ ಎಂಬುದನ್ನು ಒಪ್ಪಿಕೊಂಡ ಸಚಿವರು, ಶೀಘ್ರದಲ್ಲೇ ಈ ನ್ಯೂನ್ಯತೆಗಳನ್ನು ಸರಿಪಡಿಸಲಾಗುವುದು ಎಂದರು. “ವಾಹನ ಬಂದಾಗ ಮನೆಯಲ್ಲಿ ಯಾರೂ ಇಲ್ಲದಿದ್ದರೆ, ವಿಂಗಡಿಸಿದ ತ್ಯಾಜ್ಯದ ಡಬ್ಬಿಯನ್ನು ಕಾಂಪೌಂಡ್ ಅಥವಾ ಗೋಡೆಗೆ ತೂಗುಹಾಕಿ. ಅದನ್ನು ಪೌರಕಾರ್ಮಿಕರು ತಪ್ಪದೇ ಸಂಗ್ರಹಿಸುವಂತೆ ನೋಡಿಕೊಳ್ಳುವುದು ನನ್ನ ಹೊಣೆಗಾರಿಕೆ” ಎಂದು ನಿವಾಸಿಗಳಿಗೆ ಅಭಯ ನೀಡಿದರು.
ಕಸ ಸಾಗಣೆ ಸಾಮರ್ಥ್ಯ 9,000 ಟನ್‌ಗೆ ಹೆಚ್ಚಳ:
ನಗರದಲ್ಲಿ ಪ್ರಸ್ತುತ ದಿನವೊಂದಕ್ಕೆ ಉತ್ಪತ್ತಿಯಾಗುತ್ತಿರುವ 6,500 ಟನ್ ತ್ಯಾಜ್ಯವನ್ನು ಸುಲಭವಾಗಿ ನಿರ್ವಹಿಸಲು ಸಂಗ್ರಹಣಾ ಸಾಮರ್ಥ್ಯವನ್ನು ಹೆಚ್ಚಿಸಲಾಗುತ್ತಿದೆ:
* 27 ವಿಧಾನಸಭಾ ಕ್ಷೇತ್ರಗಳನ್ನು 33 ಪ್ಯಾಕೇಜ್‌ಗಳಾಗಿ ಪುನರ್ ವಿಂಗಡಿಸಲಾಗಿದೆ.
* 2 ಮತ್ತು 3 ಟನ್ ಸಾಮರ್ಥ್ಯದ ವಾಹನಗಳು ಸೇರಿದಂತೆ ಒಟ್ಟು 4,500 ವಾಹನಗಳನ್ನು ಹೊಸ ವ್ಯವಸ್ಥೆಯಲ್ಲಿ ನಿಯೋಜಿಸಲಾಗುತ್ತದೆ.
* ನಗರದ ಒಟ್ಟಾರೆ ಕಸ ಸಾಗಣೆ ಸಾಮರ್ಥ್ಯವನ್ನು 5,200 ಟನ್‌ಗಳಿಂದ 9,000 ಟನ್‌ಗಳಿಗೆ ಹೆಚ್ಚಿಸಲಾಗುವುದು.
* ಕಸದ ವಾಹನಗಳು ನಿಗದಿತ ಮಾರ್ಗದಲ್ಲಿ ಸಂಚರಿಸುವುದನ್ನು ಖಚಿತಪಡಿಸಿಕೊಳ್ಳಲು ಜಿಪಿಎಸ್ (GPS) ಕಡ್ಡಾಯಗೊಳಿಸಲಾಗಿದೆ.
ಬೃಹತ್ ತ್ಯಾಜ್ಯ ಉತ್ಪಾದಕರ ವಿರುದ್ಧ ಕಠಿಣ ಎಚ್ಚರಿಕೆ:
ನಗರದಲ್ಲಿರುವ ಸುಮಾರು 50,000 ಬೃಹತ್ ತ್ಯಾಜ್ಯ ಉತ್ಪಾದಕರ (Bulk Waste Generators) ಪೈಕಿ ಕೇವಲ 2,000 ಮಂದಿ ಮಾತ್ರ ಅಧಿಕೃತ ವೆಂಡರ್‌ಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಉಳಿದವರು ಅನಧಿಕೃತವಾಗಿ ಮನೆಮನೆ ಕಸ ಸಂಗ್ರಹಿಸುವ ವಾಹನಗಳಿಗೆ ತ್ಯಾಜ್ಯ ನೀಡಿ ವ್ಯವಸ್ಥೆಯ ಮೇಲೆ 1,000 ಟನ್‌ಗಳಷ್ಟು ಹೆಚ್ಚುವರಿ ಹೊರೆ ತರುತ್ತಿದ್ದಾರೆ ಎಂದು ಸಚಿವರು ಅಸಮಾಧಾನ ವ್ಯಕ್ತಪಡಿಸಿದರು. ನಿಯಮಾನುಸಾರ ಮೂಲದಲ್ಲೇ ಕಾಂಪೋಸ್ಟ್ ಮಾಡುವವರಿಗೆ ಮುಂದಿನ ವಿಲೇವಾರಿಗೆ ಉಚಿತ ಸೇವೆ ಒದಗಿಸಲಾಗುವುದು, ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಕಸ ವಿಂಗಡಣೆ ಹಾಗೂ ಸಾರ್ವಜನಿಕರ ಸಲಹೆ:
ಮೂಲದಲ್ಲೇ ಹಸಿ ಮತ್ತು ಒಣ ಕಸ ವಿಂಗಡಿಸುವುದರಿಂದ ಲ್ಯಾಂಡ್‌ಫಿಲ್‌ಗೆ ಹೋಗುವ ತ್ಯಾಜ್ಯದ ಪ್ರಮಾಣವನ್ನು ಕಡಿಮೆ ಮಾಡಬಹುದು. ಈ ಹಿಂದೆ 4,000 ಟನ್ ಕಸ ಲ್ಯಾಂಡ್‌ಫಿಲ್‌ಗೆ ಹೋಗುತ್ತಿದ್ದು, ಈಗ ಅದನ್ನು 2,500 ಟನ್‌ಗಳಿಗೆ ಇಳಿಸಲಾಗಿದೆ ಎಂದು ವಿವರಿಸಿದರು. ಸಭೆಯಲ್ಲಿ ನಾಗರಿಕರು ಮತ್ತು ಪಾಲುದಾರರು ನೀಡಿದ ಸಲಹೆಗಳನ್ನು ಮುಂದಿನ 3–4 ತಿಂಗಳುಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಿ ಮೌಲ್ಯಮಾಪನ ನಡೆಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್, ಪಾಲಿಕೆ ಆಯುಕ್ತರಾದ ಪೊಮ್ಮಲ ಸುನೀಲ್ ಕುಮಾರ್, ಜಿ. ಜಗದೀಶ್, ಬಿಎಸ್‌ಡಬ್ಲ್ಯುಎಂಎಲ್ ಸಿಇಒ ಕರೀಗೌಡ ಹಾಗೂ ಜನಾಗ್ರಹ ಸಂಸ್ಥೆಯ ಪ್ರತಿನಿಧಿಗಳು ಉಪಸ್ಥಿತರಿದ್ದರು.




















