ನವದೆಹಲಿ, ಸೆ.24 www.bengaluruwire.com: ಮುಂಬರುವ ಸಾಲು ಸಾಲು ಹಬ್ಬಗಳ ಹಿನ್ನೆಲೆಯಲ್ಲಿ ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ತಪ್ಪಿಸಲು ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.
ದಿನಬಳಕೆಯ ವಿವಿಧ ಖಾದ್ಯ ತೈಲಗಳ (ಅಡುಗೆ ಎಣ್ಣೆ) ಮೇಲಿನ ಮೂಲ ಕಸ್ಟಮ್ಸ್ ಸುಂಕವನ್ನು (ಆಮದು ಸುಂಕ) ಕೇಂದ್ರ ಸರ್ಕಾರ ಗಣನೀಯವಾಗಿ ಕಡಿತಗೊಳಿಸಿದ್ದು, ಪರಿಷ್ಕೃತ ದರಗಳು ಇಂದಿನಿಂದಲೇ (ಸೆಪ್ಟೆಂಬರ್ 24) ಜಾರಿಗೆ ಬಂದಿವೆ.
ಕಳೆದ ಒಂದು ವರ್ಷದ ಅವಧಿಯಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಖಾದ್ಯ ತೈಲಗಳ ಬೆಲೆ ಸರಿಸುಮಾರು ಶೇಕಡಾ 20ರಷ್ಟು ಏರಿಕೆಯಾಗಿತ್ತು. ಇದು ಜನಸಾಮಾನ್ಯರ ಮಾಸಿಕ ಬಜೆಟ್ ಮೇಲೆ ನೇರ ಹೊರೆ ಬೀರಿತ್ತು. ಈಗ ಹಬ್ಬದ ದಿನಗಳು ಆರಂಭವಾಗುತ್ತಿದ್ದು, ಎಣ್ಣೆಯ ಬೇಡಿಕೆ ದುಪ್ಪಟ್ಟಾಗುವ ಹೊತ್ತಲ್ಲೇ ಸರ್ಕಾರ ಸುಂಕ ಕಡಿತದ ಆದೇಶ ಹೊರಡಿಸಿರುವುದು ಗ್ರಾಹಕರಿಗೆ ದೊಡ್ಡ ನಿರಾಳತೆ ತಂದಿದೆ.
ಯಾವ ಎಣ್ಣೆಯ ಮೇಲೆ ಎಷ್ಟು ಸುಂಕ ಕಡಿತ?:

ಕೇಂದ್ರ ಹಣಕಾಸು ಸಚಿವಾಲಯ ಹೊರಡಿಸಿರುವ ಅಧಿಸೂಚನೆಯ ಪ್ರಕಾರ ಸುಂಕ ಪರಿಷ್ಕರಣೆಯ ವಿವರ ಇಂತಿದೆ:
ಕಚ್ಚಾ ಸೋಯಾಬೀನ್ ಮತ್ತು ಪಾಮ್ ಆಯಿಲ್: ಕಚ್ಚಾ ಸೋಯಾಬೀನ್ ಹಾಗೂ ಕಚ್ಚಾ ಪಾಮ್ ಎಣ್ಣೆಯ ಮೇಲಿನ ಸುಂಕವನ್ನು ಶೇ. 10ರಿಂದ ಶೇ. 5ಕ್ಕೆ ಇಳಿಸಲಾಗಿದೆ.
ಸಂಸ್ಕರಿಸಿದ ಸೋಯಾಬೀನ್ ಮತ್ತು ಪಾಮ್ ಆಯಿಲ್: ಇವುಗಳ ಮೇಲಿನ ಆಮದು ಸುಂಕವನ್ನು ಶೇ. 32.5ರಿಂದ ಶೇ. 27.5ಕ್ಕೆ ತಗ್ಗಿಸಲಾಗಿದೆ.
ಸೂರ್ಯಕಾಂತಿ ಎಣ್ಣೆ (Sunflower Oil): ಸೂರ್ಯಕಾಂತಿ ಎಣ್ಣೆ ಬಳಸುವ ಗ್ರಾಹಕರಿಗೆ ಭರ್ಜರಿ ಕೊಡುಗೆ ಸಿಕ್ಕಿದೆ. ಕಚ್ಚಾ ಸೂರ್ಯಕಾಂತಿ ಎಣ್ಣೆಯ ಮೇಲಿದ್ದ ಶೇ. 10ರಷ್ಟು ಸುಂಕವನ್ನು ಸಂಪೂರ್ಣವಾಗಿ ರದ್ದುಪಡಿಸಲಾಗಿದೆ (ಶೇ. 0). ಸಂಸ್ಕರಿಸಿದ ಸೂರ್ಯಕಾಂತಿ ಎಣ್ಣೆಯ ಮೇಲಿನ ಸುಂಕವನ್ನು ಶೇ. 32.5ರಿಂದ ಶೇ. 22.5ಕ್ಕೆ ಇಳಿಸಲಾಗಿದೆ.
ಬೆಲೆ ಇಳಿಕೆಗೆ ಕಾರಣವೇನು?:
ಭಾರತವು ತನ್ನ ಒಟ್ಟು ಖಾದ್ಯ ತೈಲ ಬಳಕೆಯ ಸುಮಾರು ಮೂರನೇ ಎರಡರಷ್ಟು (2/3) ಭಾಗವನ್ನು ವಿದೇಶಗಳಿಂದಲೇ ಆಮದು ಮಾಡಿಕೊಳ್ಳುತ್ತದೆ. ಮುಖ್ಯವಾಗಿ ಮಲೇಷ್ಯಾ ಮತ್ತು ಇಂಡೋನೇಷ್ಯಾದಿಂದ ಪಾಮ್ ಆಯಿಲ್, ಅರ್ಜೆಂಟೀನಾ ಹಾಗೂ ಅಮೆರಿಕದಿಂದ ಸೋಯಾಬೀನ್, ಹಾಗೆಯೇ ರಷ್ಯಾ ಮತ್ತು ಉಕ್ರೇನ್ ದೇಶಗಳಿಂದ ಸೂರ್ಯಕಾಂತಿ ಎಣ್ಣೆಯನ್ನು ಆಮದು ಮಾಡಿಕೊಳ್ಳಲಾಗುತ್ತದೆ.
ಈಗ ಕೇಂದ್ರ ಸರ್ಕಾರ ಕಸ್ಟಮ್ಸ್ ಸುಂಕವನ್ನು ತಗ್ಗಿಸಿರುವುದರಿಂದ ದೇಶೀಯ ಕಂಪನಿಗಳು ಕಡಿಮೆ ವೆಚ್ಚದಲ್ಲಿ ಎಣ್ಣೆ ತರಿಸಿಕೊಳ್ಳಲು ಸಾಧ್ಯವಾಗಲಿದೆ. ಇದರ ನೇರ ಪ್ರಯೋಜನ ಮುಂಬರುವ ದಿನಗಳಲ್ಲಿ ಚಿಲ್ಲರೆ ಮಾರುಕಟ್ಟೆಯ ಗ್ರಾಹಕರಿಗೆ ಸಿಗಲಿದ್ದು, ಪ್ರತಿ ಲೀಟರ್ ಅಡುಗೆ ಎಣ್ಣೆಯ ಬೆಲೆಯಲ್ಲಿ ಇಳಿಕೆಯಾಗುವ ನಿರೀಕ್ಷೆಯಿದೆ.
ಸೆಪ್ಟೆಂಬರ್‌ನಿಂದ ನವೆಂಬರ್‌ವರೆಗಿನ ದಸರಾ ಮತ್ತು ದೀಪಾವಳಿ ಹಬ್ಬದ ದಿನಗಳಲ್ಲಿ ದೇಶಾದ್ಯಂತ ಖಾದ್ಯ ತೈಲಕ್ಕೆ ಭಾರಿ ಬೇಡಿಕೆ ಇರುತ್ತದೆ. ಸರ್ಕಾರದ ಈ ಕ್ರಮವು ಮಾರುಕಟ್ಟೆಯಲ್ಲಿ ಹಣದುಬ್ಬರ ನಿಯಂತ್ರಣಕ್ಕೆ ನೆರವಾಗುವುದರ ಜತೆಗೆ, ಜನಸಾಮಾನ್ಯರ ಉಳಿತಾಯಕ್ಕೂ ದಾರಿಯಾಗಲಿದೆ.



















