ಬೆಂಗಳೂರು, ನ.06 www.bengaluruwire.com: ರಾಜಧಾನಿ ಬೆಂಗಳೂರಿನ ರಾಜಾಜಿನಗರ ಮತ್ತು ಶ್ರೀರಾಂಪುರ ವ್ಯಾಪ್ತಿಯಲ್ಲಿ ಇಡೀ ರಾಜ್ಯವೇ ಬೆಚ್ಚಿಬೀಳುವಂತಹ ಭೀಕರ ಸಾಮೂಹಿಕ ಸರಣಿ ಹತ್ಯಾಕಾಂಡ ಬೆಳಕಿಗೆ ಬಂದಿದೆ.
ಕೌಟುಂಬಿಕ ಕಲಹ, ಆಸ್ತಿ ವಿವಾದ ಹಾಗೂ ತೀವ್ರ ದ್ವೇಷದ ಹಿನ್ನೆಲೆಯಲ್ಲಿ ಕ್ಯಾಬ್ ಚಾಲಕ ಇಂದುಶೇಖರ್ (ಶೇಖರ್) ಎಂಬಾತ ತನ್ನ ಪತ್ನಿ ಸೇರಿದಂತೆ ಆಕೆಯ ತವರು ಮನೆಯ 7 ಜನರನ್ನು ಸುಮಾರು 20 ದಿನಗಳ ಅಂತರದಲ್ಲಿ ಒಬ್ಬೊಬ್ಬರನ್ನಾಗಿ ಮನೆಗೆ ಕರೆಸಿಕೊಂಡು ರುಬ್ಬುಗುಂಡಿನಿಂದ ಜಜ್ಜಿ ಅತ್ಯಂತ ಬರ್ಬರವಾಗಿ ಕೊಲೆ ಮಾಡಿದ್ದಾನೆ.
ಪ್ರಕರಣ ಸಂಬಂಧ ಶ್ರೀರಾಂಪುರ ಹಾಗೂ ರಾಜಾಜಿನಗರ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ನಂದಿಬೆಟ್ಟದ ತಪ್ಪಲಿನಲ್ಲಿ 7 ವರ್ಷದ ಬಾಲಕ ಪುನೀತ್‌ನ ಶವವನ್ನು ವಶಪಡಿಸಿಕೊಂಡಿದ್ದಾರೆ. ಉಳಿದ ಆರು ಮೃತದೇಹಗಳ ಪತ್ತೆಗಾಗಿ ನಂದಿಬೆಟ್ಟ, ಚಾರ್ಮಾಡಿ ಘಾಟ್ ಹಾಗೂ ಇತರೆ ಕಂದಕ ಪ್ರದೇಶಗಳಲ್ಲಿ ತೀವ್ರ ಶೋಧ ನಡೆಸಲಾಗುತ್ತಿದೆ.
ಕೊಲೆಯಾದ ದುರ್ದೈವಿಗಳ ವಿವರ:

ಆರೋಪಿ ಇಂದುಶೇಖರ್ ನಡೆಸಿದ ಈ ರಕ್ತಪಿಪಾಸು ಕೃತ್ಯಕ್ಕೆ ಒಂದೇ ಕುಟುಂಬದ 7 ಮಂದಿ ಬಲಿಯಾಗಿದ್ದಾರೆ:
ಸುನೀತಾ (40): ಆರೋಪಿಯ ಪತ್ನಿ
ರೂಪವತಿ (65): ಅತ್ತೆ
ಶಿವಕುಮಾರ್ (30): ಬಾಮೈದ
ದಿವ್ಯಾ: ಶಿವಕುಮಾರ್‌ನ ಪತ್ನಿ
ಪುನೀತ್ (7): ಶಿವಕುಮಾರ್-ದಿವ್ಯಾ ದಂಪತಿಯ ಪುತ್ರ
ಶಂಕರ್ (40): ಮತ್ತೊಬ್ಬ ಬಾಮೈದ
ನಳಿನಿ: ಶಂಕರ್‌ನ ಪತ್ನಿ
ಮಟನ್ ಊಟ, ಪಾರ್ಟಿ ನೆಪದಲ್ಲಿ ನರಮೇಧ:
ರಾಜಾಜಿನಗರದ ಭಾಷ್ಯಂ ವೃತ್ತದ ಸಮೀಪದ ಬಾಡಿಗೆ ಮನೆಯಲ್ಲಿ ಆರೋಪಿ ವಾಸವಾಗಿದ್ದನು. ಅಕ್ಟೋಬರ್ 16ರಿಂದಲೇ ಈ ಸರಣಿ ಹತ್ಯಾಕಾಂಡ ಆರಂಭಿಸಿದ್ದ ಇಂದುಶೇಖರ್, ಮೊದಲು ತನ್ನ ಪತ್ನಿ ಸುನೀತಾಳನ್ನು ರುಬ್ಬುಗುಂಡಿನಿಂದ ಹೊಡೆದು ಹತ್ಯೆ ಮಾಡಿದ್ದನು. ನೆರೆಹೊರೆಯವರಿಗೆ ಆಕೆ ಸ್ನೇಹಿತೆಯರೊಂದಿಗೆ ಟ್ರಿಪ್ ಹೋಗಿದ್ದಾಳೆ ಎಂದು ಸುಳ್ಳು ಹೇಳಿ ನಂಬಿಸಿದ್ದನು.
ಬಳಿಕ ಅತ್ತೆ ರೂಪವತಿ, ಬಾಮೈದರಾದ ಶಿವಕುಮಾರ್ ಹಾಗೂ ಶಂಕರ್ ದಂಪತಿಯನ್ನು “ಮನೆಯಲ್ಲಿ ಮಟನ್ ಅಡುಗೆ ಮಾಡಲಾಗಿದೆ, ಪಾರ್ಟಿ ಮಾಡೋಣ ಬನ್ನಿ” ಎಂದು ಪ್ರತ್ಯೇಕ ದಿನಗಳಲ್ಲಿ ಮನೆಗೆ ಕರೆಸಿಕೊಂಡಿದ್ದಾನೆ. ಕೆಲವರಿಗೆ ಊಟದಲ್ಲಿ ನಿದ್ರೆ ಮಾತ್ರೆ ಬೆರೆಸಿ, ಅವರು ಪ್ರಜ್ಞೆ ತಪ್ಪಿ ಬೀಳುತ್ತಿದ್ದಂತೆ ಹಿಂದಿನಿಂದ ರುಬ್ಬುವ ಕಲ್ಲಿನಿಂದ ತಲೆ ಜಜ್ಜಿ ಕೊಲೆ ಮಾಡಿದ್ದಾನೆ. ಮನೆಯ ಹಾಲ್, ಬೆಡ್‌ರೂಂ ಹಾಗೂ ಅಡುಗೆ ಕೋಣೆಯಲ್ಲಿ ಈ ಕೃತ್ಯ ನಡೆದಿದ್ದು, ಲೂಮಿನಲ್ ಟೆಸ್ಟ್ ವೇಳೆ ಮನೆ ತುಂಬ ರಕ್ತದ ಕಲೆಗಳಿರುವುದು ದೃಢಪಟ್ಟಿದೆ.
ರಾಸಾಯನಿಕ ಬಳಸಿ ಸಾಕ್ಷ್ಯ ನಾಶ: ಚೀಲಗಳಲ್ಲಿ ಶವ ಸಾಗಾಟ:
ಪ್ರತಿಯೊಂದು ಕೊಲೆಯ ನಂತರ ಆರೋಪಿ ಇಂದುಶೇಖರ್ ಮನೆಯಲ್ಲಿದ್ದ ರಕ್ತದ ಕಲೆಗಳನ್ನು ಹಾಗೂ ಕೊಲೆಗೆ ಬಳಸಿದ ರುಬ್ಬುಗುಂಡನ್ನು ರಾಸಾಯನಿಕಗಳಿಂದ ತೊಳೆದು ಸ್ವಚ್ಛಗೊಳಿಸುತ್ತಿದ್ದನು. ಇದಕ್ಕಾಗಿಯೇ ಮುಂಚಿತವಾಗಿ 15ಕ್ಕೂ ಹೆಚ್ಚು ಗೋಣಿಚೀಲ ಹಾಗೂ ಪ್ಲಾಸ್ಟಿಕ್ ಚೀಲಗಳನ್ನು ತಂದಿಟ್ಟುಕೊಂಡಿದ್ದನು. ಶವಗಳನ್ನು ಚೀಲಗಳಲ್ಲಿ ಪ್ಯಾಕ್ ಮಾಡಿ, ತನ್ನದೇ ಕಾರಿನ ಡಿಕ್ಕಿಯಲ್ಲಿಟ್ಟುಕೊಂಡು ನಂದಿಬೆಟ್ಟದ ರಸ್ತೆ ಬದಿ, ಚಾರ್ಮಾಡಿ ಘಾಟ್ ಹಾಗೂ ಶಿರಾಡಿ ಘಾಟ್ ಕಂದಕಗಳಲ್ಲಿ ಎಸೆದು ಬಂದಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಈ ಕೃತ್ಯದ ವೇಳೆ ಹಾಗೂ ಶವಗಳನ್ನು ಸಾಗಿಸುವ ಸಂದರ್ಭದಲ್ಲಿ ಆರೋಪಿ ತನ್ನ ಅಪ್ರಾಪ್ತ ಮಗಳಿಗೂ ಬ್ರೈನ್ ವಾಶ್ ಮಾಡಿ ಸಾಥ್ ಪಡೆದಿದ್ದಾನೆ ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದ್ದು, ಪೊಲೀಸರು ಆಕೆಯನ್ನೂ ವಿಚಾರಣೆಗೆ ಒಳಪಡಿಸಿದ್ದಾರೆ.
ಸಾವಿನ ದವಡೆಯಿಂದ ಬಚಾವಾದ 10 ವರ್ಷದ ಬಾಲಕ:
ಶಂಕರ್ ಮತ್ತು ನಳಿನಿ ದಂಪತಿಯ 10 ವರ್ಷದ ಪುತ್ರ ಈ ನರಮೇಧದಿಂದ ಅದೃಷ್ಟವಶಾತ್ ಬದುಕುಳಿದಿದ್ದಾನೆ. ಕೊಲೆಯಾದ ಎಲ್ಲರ ಮೊಬೈಲ್ ಫೋನ್‌ಗಳನ್ನು ಇಂದುಶೇಖರ್ ತನ್ನ ಬಳಿಯೇ ಇಟ್ಟುಕೊಂಡಿದ್ದನು. ಸಂಬಂಧಿಕರು ಕರೆ ಮಾಡಿದರೆ ತಂದೆ-ತಾಯಿ ಟ್ರಿಪ್ ಹೋಗಿದ್ದಾರೆ ಎಂದು ಹೇಳಿಸಲು ಈ ಬಾಲಕನನ್ನು ಕಾರಿನಲ್ಲೇ ತನ್ನೊಂದಿಗೆ ಇರಿಸಿಕೊಂಡಿದ್ದನು. ಕಾರಿನಲ್ಲಿ ಚೀಲಗಳನ್ನು ನೋಡಿದ ಬಾಲಕ “ಅದರಲ್ಲಿ ಏನಿದೆ?” ಎಂದು ಕೇಳಿದಾಗ “ಕಸದ ಚೀಲ” ಎಂದು ನಂಬಿಸಿ ಶವಗಳನ್ನು ವಿಲೇವಾರಿ ಮಾಡಿದ್ದನು.
ಸತ್ಯ ಬಯಲಾಗಿದ್ದು ಹೇಗೆ?:
ಶಂಕರ್ ಪತ್ನಿ ನಳಿನಿ ಕೆಲಸ ಮುಗಿಸಿ ಮನೆಗೆ ಬಾರದೆ ಮೊಬೈಲ್ ಸ್ವಿಚ್ಡ್ ಆಫ್ ಆದಾಗ ಆಕೆಯ ತಾಯಿ ಶ್ರೀರಾಂಪುರ ಪೊಲೀಸ್ ಠಾಣೆಗೆ ನಾಪತ್ತೆ ದೂರು ನೀಡಿದ್ದರು. ಪೊಲೀಸರು ಮೊಬೈಲ್ ನೆಟ್‌ವರ್ಕ್ ಟವರ್ ಲೊಕೇಶನ್ ಪರಿಶೀಲಿಸಿದಾಗ, ನಾಪತ್ತೆಯಾದ ಎಲ್ಲರ ಮೊಬೈಲ್ ಸಿಗ್ನಲ್‌ಗಳು ಇಂದುಶೇಖರ್ ಇರುವ ಸ್ಥಳದಲ್ಲೇ ಇರುವುದು ಪತ್ತೆಯಾಯಿತು. ಹಲಸೂರು ಸಮೀಪ ಕಾರನ್ನು ಅಡ್ಡಗಟ್ಟಿ ಪರಿಶೀಲಿಸಿದಾಗ ಕಾರಿನಿಂದ ತೀವ್ರ ದುರ್ವಾಸನೆ ಬರುತ್ತಿತ್ತು. ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ 7 ಜನರ ಭೀಕರ ಕೊಲೆಯ ಕರಾಳ ಸತ್ಯವನ್ನು ಆತ ಬಾಯ್ಬಿಟ್ಟಿದ್ದಾನೆ.
ಪ್ರಕರಣದ ಗಂಭೀರತೆ ಹಿನ್ನೆಲೆಯಲ್ಲಿ ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತರು ಹಾಗೂ ಉತ್ತರ ವಿಭಾಗದ ಡಿಸಿಪಿ ನೇತೃತ್ವದಲ್ಲಿ ಮೂವರು ಎಸಿಪಿಗಳ ವಿಶೇಷ ತಂಡ ರಚನೆಯಾಗಿದ್ದು, ಉಳಿದ ಶವಗಳ ಪತ್ತೆಗಾಗಿ ಕಾರ್ಯಾಚರಣೆ ಚುರುಕುಗೊಳಿಸಲಾಗಿದೆ.















