ನವದೆಹಲಿ, ನ.10 www.bengaluruwire.com: ಪೆಟ್ರೋಲ್ನಲ್ಲಿ ನಿಗದಿತ ಮಿತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಎಥನಾಲ್ ಬೆರೆಸಲಾಗುತ್ತಿದೆ ಎಂಬ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಆರೋಪಕ್ಕೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದು, ಅಧಿಕೃತ ಅಂಕಿಅಂಶಗಳ ಮೂಲಕ ಆರೋಪಗಳನ್ನು ತಳ್ಳಿಹಾಕಿದ್ದಾರೆ.
ಸಚಿವ ರಿಜ್ವಾನ್ ಅರ್ಷದ್ ನಡೆಸಿದ ಪತ್ರಿಕಾಗೋಷ್ಠಿಯ ಹೇಳಿಕೆಗಳನ್ನು “ದುರುದ್ದೇಶಪೂರಿತ ಹಾಗೂ ದಾರಿತಪ್ಪಿಸುವ ಪ್ರಯತ್ನ” ಎಂದು ಕರೆದಿರುವ ಜೋಶಿ, ರಾಜ್ಯ ಸರ್ಕಾರದ ಪರೀಕ್ಷಾ ವಿಧಾನದ ನಂಬಿಕಾರ್ಹತೆಯನ್ನೇ ಪ್ರಶ್ನಿಸಿದ್ದಾರೆ.
ಆರೋಪಕ್ಕೆ ಆಧಾರವಿಲ್ಲ: ಲ್ಯಾಬ್ ಪರೀಕ್ಷೆಯ ಲೋಪಗಳಿವು:
ಪೆಟ್ರೋಲ್ನಲ್ಲಿ ಶೇ. 26 ರಿಂದ 31 ರಷ್ಟು ಎಥನಾಲ್ ಇದೆ ಎಂದು ಹೇಳುತ್ತಿರುವುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ಗಾಬರಿ ಸೃಷ್ಟಿಸುವ ಬದಲು ರಾಜ್ಯ ಸರ್ಕಾರ ಅಧಿಕೃತ ತಪಾಸಣಾ ವರದಿಗಳನ್ನು ಪರಿಶೀಲಿಸಬೇಕಿತ್ತು ಎಂದು ಜೋಶಿ ಸ್ಪಷ್ಟಪಡಿಸಿದ್ದಾರೆ.

ಅಧಿಕೃತ OMC ವರದಿ: ದೇಶದ 27 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪರೀಕ್ಷಿಸಲಾದ ಎಲ್ಲಾ 893 ಮಾದರಿಗಳು ನಿಗದಿತ ಶೇ. 19–21 ರ ಮಿತಿಯೊಳಗಿವೆ. ತೈಲ ಮಾರಾಟ ಸಂಸ್ಥೆಗಳು (OMCs) ಕರ್ನಾಟಕದಲ್ಲಿ ಸಂಗ್ರಹಿಸಿದ 56 ಮಾದರಿಗಳಲ್ಲಿ ಸರಾಸರಿ ಶೇ. 19.30 ರಷ್ಟು (ಶೇ. 19–20 ರ ವ್ಯಾಪ್ತಿಯಲ್ಲಿ) ನಿಯಮಾವಳಿಗೆ ಬದ್ಧವಾಗಿರುವುದು ದೃಢಪಟ್ಟಿದೆ.
ಅಪೂರ್ಣ ಪ್ರಮಾಣಪತ್ರ: ಕರ್ನಾಟಕದ ಲ್ಯಾಬ್ ಪ್ರಮಾಣಪತ್ರಗಳಲ್ಲಿ ಕೇವಲ “ಗ್ಯಾಸ್ ಕ್ರೊಮ್ಯಾಟೋಗ್ರಫಿ ಮೂಲಕ ಎಥನಾಲ್ %” ಎಂದು ಮಾತ್ರ ನಮೂದಿಸಲಾಗಿದೆ. ಪರೀಕ್ಷಾ ವಿಧಾನ, ಮಾಪನಾಂಕ ನಿರ್ಣಯ (calibration), ವಿಲೀನಗೊಳಿಸುವಿಕೆ (dilution) ಅಥವಾ ಉಲ್ಲೇಖಿತ ಮಾದರಿಯ (reference sample) ಬಗ್ಗೆ ಯಾವುದೇ ಸ್ಪಷ್ಟತೆಯಿಲ್ಲ.
ಸಾಂದ್ರತೆಯ ಲೆಕ್ಕಾಚಾರವೇ ತಪ್ಪು: ಶೇ. 26–31 ರಷ್ಟು ಎಥನಾಲ್ ಇದೆ ಎಂದು ಹೇಳಲಾದ ಮಾದರಿಗಳ ಸಾಂದ್ರತೆ (Density) ಕೇವಲ 0.742–0.749 g/cc ನಷ್ಟಿತ್ತು. ನಿಯಮಬದ್ಧ E20 ಪೆಟ್ರೋಲ್ ಸಾಂದ್ರತೆಯೇ 0.752–0.760 g/cc ಇರುತ್ತದೆ. ಎಥನಾಲ್ ಪ್ರಮಾಣ ಹೆಚ್ಚಿದ್ದರೆ ಸಾಂದ್ರತೆಯು E20 ಗಿಂತ ಹೆಚ್ಚಿರಬೇಕಿತ್ತು, ಆದರೆ ಇಲ್ಲಿ ಕಡಿಮೆ ದಾಖಲಾಗಿದೆ.
ಅನಧಿಕೃತ ಲ್ಯಾಬ್: ಈ ಮಾದರಿಗಳನ್ನು ಪರೀಕ್ಷಿಸಿದ ಯಾವುದೇ ಪ್ರಯೋಗಾಲಯಗಳು ಅಧಿಕೃತ ಗೆಜೆಟ್ನಲ್ಲಿ ಅಧಿಸೂಚಿಸಲಾದ ‘ಶೆಡ್ಯೂಲ್ 3’ ಅನುಮೋದಿತ ಪ್ರಯೋಗಾಲಯಗಳ ಪಟ್ಟಿಯಲ್ಲಿಲ್ಲ. ಮಾದರಿ ಸಂಗ್ರಹಣೆ ಹಾಗೂ ಕಾಯ್ದಿರಿಸಿದ ಮಾದರಿಗಳ (retention samples) ಪ್ರಕ್ರಿಯೆಯೇ ನಿಯಮಬಾಹಿರವಾಗಿದೆ.
ಕಾಂಗ್ರೆಸ್ಗೆ ಸ್ವಂತ ಇತಿಹಾಸ ಮರೆತುಹೋಗಿದೆಯೇ?:
ಎಥನಾಲ್ ಮಿಶ್ರಣ ಯೋಜನೆಯನ್ನು ಕಾಂಗ್ರೆಸ್ ಈಗ ವಿರೋಧಿಸುತ್ತಿರುವುದು ವಿಪರ್ಯಾಸ ಎಂದು ಜೋಶಿ ಟೀಕಿಸಿದ್ದಾರೆ. 2005 ರಲ್ಲಿ ಅಂದಿನ ಯುಪಿಎ ಸರ್ಕಾರದ ಪೆಟ್ರೋಲಿಯಂ ಸಚಿವ ಮಣಿ ಶಂಕರ್ ಅಯ್ಯರ್ ಅವರೇ ಎಥನಾಲ್ ಲಭ್ಯತೆ ಹೆಚ್ಚಿದಂತೆ ಮಿಶ್ರಣ ಪ್ರಮಾಣವನ್ನು ಹೆಚ್ಚಿಸುವುದಾಗಿ ಘೋಷಿಸಿದ್ದರು. ಈಗ ಅದೇ ಕಾಂಗ್ರೆಸ್ ಇದಕ್ಕೆ ತದ್ವಿರುದ್ಧ ನಿಲುವು ತಾಳಿದೆ.
2014-15 ರಿಂದ ಈ ಯೋಜನೆಯ ಮೂಲಕ ದೇಶದ ರೈತರಿಗೆ ₹1.66 ಲಕ್ಷ ಕೋಟಿಗೂ ಅಧಿಕ ಹಣ ನೇರವಾಗಿ ತಲುಪಿದೆ. ಸಕ್ಕರೆ ಕಾರ್ಖಾನೆಗಳ ಆರ್ಥಿಕ ಸ್ಥಿತಿ ಸುಧಾರಿಸಿದ್ದು, 2025-26 ರ ಹಂಗಾಮಿನ ಸುಮಾರು ಶೇ. 97 ರಷ್ಟು ಕಬ್ಬಿನ ಬಾಕಿ ಹಣವನ್ನು ಆಗಸ್ಟ್ 2026 ರ ವೇಳೆಗೆ ಪಾವತಿಸಲಾಗಿದೆ.
ಕರ್ನಾಟಕದ ಅಂಕಿಅಂಶಗಳಲ್ಲೇ ಅಡಗಿದೆ ಸತ್ಯ:
ಕರ್ನಾಟಕ ಸರ್ಕಾರ ಎತ್ತುತ್ತಿರುವ ಪ್ರಶ್ನೆಗಳಿಗೂ ರಾಜ್ಯದ ವಾಸ್ತವಕ್ಕೂ ಸಂಬಂಧವೇ ಇಲ್ಲ ಎಂದು ಜೋಶಿ ವಿವರಿಸಿದ್ದಾರೆ: “2025–26 ರಲ್ಲಿ ಕರ್ನಾಟಕದ ಡಿಸ್ಟಿಲರಿಗಳಿಗೆ 165.89 ಕೋಟಿ ಲೀಟರ್ ಎಥನಾಲ್ ಹಂಚಿಕೆ ಮಾಡಲಾಗಿದ್ದು, ಇದರಲ್ಲಿ 97.54 ಕೋಟಿ ಲೀಟರ್ ಕಬ್ಬು ಆಧಾರಿತ ಕಚ್ಚಾವಸ್ತುವಿನಿಂದ ಬಂದಿದೆ”.
ದೇಶಾದ್ಯಂತ ಎಥನಾಲ್ ಉತ್ಪಾದನೆಗೆ ಬಳಕೆಯಾದ 30 ಲಕ್ಷ ಮೆಟ್ರಿಕ್ ಟನ್ ಸಕ್ಕರೆಯಲ್ಲಿ, ಕರ್ನಾಟಕವೊಂದೇ 11.92 ಲಕ್ಷ ಮೆಟ್ರಿಕ್ ಟನ್ (ಸುಮಾರು ಶೇ. 40 ರಷ್ಟು) ಬಳಸಿದೆ. ಎಥನಾಲ್ ಮಿಶ್ರಣ ರೈತರಿಗೆ ಮಾರಕ ಎಂದಾದರೆ ರಾಜ್ಯ ಸರ್ಕಾರ ತನ್ನ ಸಕ್ಕರೆ ಉದ್ಯಮಕ್ಕೆ ಹೆಚ್ಚಿನ ಕೋಟಾ ಏಕೆ ಕೇಳುತ್ತಿದೆ ಎಂದು ಜೋಶಿ ಪ್ರಶ್ನಿಸಿದ್ದಾರೆ.
ರಾಷ್ಟ್ರದ ಹಿತಾಸಕ್ತಿ ಮತ್ತು ಪರಿಸರ ರಕ್ಷಣೆ:
ಎಥನಾಲ್ ಯೋಜನೆಯಿಂದ ದೇಶಕ್ಕೆ ₹1.97 ಲಕ್ಷ ಕೋಟಿಗೂ ಅಧಿಕ ವಿದೇಶಿ ವಿನಿಮಯ ಉಳಿತಾಯವಾಗಿದ್ದು, 316 ಲಕ್ಷ ಮೆಟ್ರಿಕ್ ಟನ್ ಕಚ್ಚಾ ತೈಲ ಆಮದು ತಗ್ಗಿದೆ. ಜೊತೆಗೆ 952 ಲಕ್ಷ ಮೆಟ್ರಿಕ್ ಟನ್ ಇಂಗಾಲದ (CO₂) ಹೊರಸೂಸುವಿಕೆ ನಿಯಂತ್ರಣಕ್ಕೆ ಬಂದಿದೆ. ಕರ್ನಾಟಕದ ಕಾಂಗ್ರೆಸ್ ಸರ್ಕಾರ ರೈತರ ಆರ್ಥಿಕ ಹಿತಾಸಕ್ತಿಯನ್ನು ಬದಿಗೊತ್ತಿ ಕೇವಲ ರಾಜಕೀಯ ಗಿಮಿಕ್ ಮಾಡುತ್ತಿದೆಯೇ ಎಂದು ಪ್ರಲ್ಹಾದ ಜೋಶಿ ಕಿಡಿಕಾರಿದ್ದಾರೆ.




















