ನವದೆಹಲಿ/ಬೆಂಗಳೂರು, ನ.09 www.bengaluruwire.com: ಕ್ಯಾನ್ಸರ್ನಂತಹ ಮಾರಕ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳಿಗೆ ಮತ್ತು ಅವರ ಕುಟುಂಬಗಳಿಗೆ ಕೇಂದ್ರ ಸರ್ಕಾರ ಭಾರಿ ಆರ್ಥಿಕ ನಿರಾಳತೆ ನೀಡಿದೆ.
ದೇಶಾದ್ಯಂತ ಚಾಲ್ತಿಯಲ್ಲಿರುವ ಬರೋಬ್ಬರಿ 1,364 ಕ್ಯಾನ್ಸರ್ ನಿಗ್ರಹ ಔಷಧ ಸೂತ್ರಗಳ (Anti-Cancer Formulations) ಪರಿಷ್ಕೃತ ಗರಿಷ್ಠ ಮಾರಾಟ ಬೆಲೆ (ಎಂಆರ್ಪಿ) ಇಂದಿನಿಂದಲೇ (ನವೆಂಬರ್ 9) ಅಧಿಕೃತವಾಗಿ ಜಾರಿಗೆ ಬಂದಿದೆ. ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯದ ಅಡಿಯಲ್ಲಿ ಬರುವ ಔಷಧ ಇಲಾಖೆ ಹಾಗೂ ರಾಷ್ಟ್ರೀಯ ಔಷಧ ಬೆಲೆ ಪ್ರಾಧಿಕಾರ (NPPA) ಜಂಟಿಯಾಗಿ ಈ ಮಹತ್ವದ ಕ್ರಮ ಕೈಗೊಂಡಿವೆ.
ಕೇಂದ್ರ ಸರ್ಕಾರದ ಈ ಜನಪರ ನಿರ್ಧಾರದಿಂದಾಗಿ ದೇಶದ ಲಕ್ಷಾಂತರ ಕ್ಯಾನ್ಸರ್ ರೋಗಿಗಳಿಗೆ ವಾರ್ಷಿಕವಾಗಿ ಅಂದಾಜು ₹3,540.38 ಕೋಟಿ ರೂಪಾಯಿ ಉಳಿತಾಯವಾಗಲಿದೆ. ಹಲವು ಪ್ರಮುಖ ಜೀವರಕ್ಷಕ ಕ್ಯಾನ್ಸರ್ ಔಷಧಗಳ ಮೇಲಿನ ಬೆಲೆಯಲ್ಲಿ ಶೇಕಡಾ 20 ರಿಂದ 70 ರಷ್ಟು, ಕೆಲವೊಂದರಲ್ಲಿ ಶೇಕಡಾ 90ಕ್ಕೂ ಹೆಚ್ಚು ಕಡಿತ ಕಂಡುಬಂದಿದೆ.
ನಿಯಮ ಮೀರಿದರೆ ಕಠಿಣ ಕ್ರಮ: ಪರಿಷ್ಕೃತ ದರಗಳಿಗಿಂತ ಹೆಚ್ಚಿನ ಮೊತ್ತವನ್ನು ಯಾವುದೇ ಔಷಧಿ ಮಾರಾಟಗಾರರು (Chemist) ಅಥವಾ ಆಸ್ಪತ್ರೆಯ ಔಷಧಾಲಯಗಳು (Hospital Pharmacies) ಗ್ರಾಹಕರಿಂದ ವಸೂಲಿ ಮಾಡುವಂತಿಲ್ಲ ಎಂದು ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಆದೇಶ ನೀಡಿದೆ. ಪರಿಷ್ಕೃತ ದರಪಟ್ಟಿಯನ್ನು ಎಲ್ಲಾ ಔಷಧ ಅಂಗಡಿಗಳು ಮತ್ತು ಆಸ್ಪತ್ರೆಗಳು ತಮ್ಮ ಸೂಚನಾ ಫಲಕಗಳಲ್ಲಿ ಹಾಗೂ ಜಾಲತಾಣಗಳಲ್ಲಿ ಪ್ರದರ್ಶಿಸುವುದನ್ನು ಕಡ್ಡಾಯಗೊಳಿಸಲಾಗಿದೆ.

ಒಂದು ವೇಳೆ ನಿಗದಿತ ದರಕ್ಕಿಂತ ಹೆಚ್ಚಿನ ಹಣ ವಸೂಲಿ ಮಾಡಿದರೆ ಅಥವಾ ಔಷಧಗಳ ಬೆಲೆಗೆ ಸಂಬಂಧಿಸಿದಂತೆ ಯಾವುದೇ ದೂರುಗಳಿದ್ದರೆ, ನಾಗರಿಕರು NPPA ಯ ಟೋಲ್ಫ್ರೀ ಸಹಾಯವಾಣಿ ಸಂಖ್ಯೆ 1800-111-255 ಗೆ ಕರೆ ಮಾಡಬಹುದು ಅಥವಾ ‘ಫಾರ್ಮಾ ಜನ್ ಸಮಾಧಾನ್’ (Pharma Jan Samadhan) ಪೋರ್ಟಲ್ ಮೂಲಕ ದೂರು ದಾಖಲಿಸಬಹುದು ಎಂದು ತಿಳಿಸಲಾಗಿದೆ.



















