ಬೆಂಗಳೂರು, ನ.06 www.bengaluruwire.com: ಭಾರತದ ಹೆಮ್ಮೆಯ ಸೌರ ವೀಕ್ಷಣಾಲಯ ‘ಆದಿತ್ಯ-L1’ ಬಾಹ್ಯಾಕಾಶ ನೌಕೆ ಸೂರ್ಯನ ಅಂತರಾಳದ ವಿಸ್ಮಯವನ್ನು ಬಯಲಿಗೆಳೆದಿದೆ.
ಸೂರ್ಯನಿಂದ ಹೊರಚಿಮ್ಮುವ ಬೃಹತ್ ಪ್ಲಾಸ್ಮಾ ಸ್ಫೋಟಗಳು (ಕರೋನಲ್ ಮಾಸ್ ಎಜೆಕ್ಷನ್ – CME) ಈವರೆಗೆ ವಿಜ್ಞಾನಿಗಳು ಊಹಿಸಿದ್ದಂತೆ ಸಮಾನಾಂತರ ಗಾಳಿಗುಳ್ಳೆಯಂತೆ ಇರುವುದಿಲ್ಲ, ಬದಲಿಗೆ ಅವು ಅಸಮಾನವಾಗಿ ಮತ್ತು ವಾಲಿಕೊಂಡು (Asymmetric Tilt) ವಿಸ್ತರಿಸುತ್ತವೆ ಎಂಬುದನ್ನು ಆದಿತ್ಯ-L1 ಮೊದಲ ಬಾರಿಗೆ 3D ಆಯಾಮದಲ್ಲಿ ಪತ್ತೆಹಚ್ಚಿದೆ.
ಬೆಂಗಳೂರು ವಿಜ್ಞಾನಿಗಳ ಮಹತ್ವದ ಪಾತ್ರ: ಆದಿತ್ಯ-L1: ನೌಕೆಯಲ್ಲಿರುವ ಪ್ರಮುಖ ವೈಜ್ಞಾನಿಕ ಉಪಕರಣ ‘ವಿಸಿಬಲ್ ಎಮಿಷನ್ ಲೈನ್ ಕರೋನಾಗ್ರಾಫ್’ (VELC) ಅನ್ನು ಬೆಂಗಳೂರಿನ ಭಾರತೀಯ ಖಭೌತಶಾಸ್ತ್ರ ಸಂಸ್ಥೆ (IIA) ಇಸ್ರೋ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿದೆ. 2024ರ ಆಗಸ್ಟ್ 5ರಂದು ಸಂಭವಿಸಿದ ಪ್ರಬಲ ಸೌರ ಸ್ಫೋಟವನ್ನು VELC ಉಪಕರಣವು ಡಾಪ್ಲರ್ ಸ್ಪೆಕ್ಟ್ರೋಸ್ಕೋಪಿ ತಂತ್ರಜ್ಞಾನದ ಮೂಲಕ ನಿಖರವಾಗಿ ಸೆರೆಹಿಡಿದಿದೆ.
ಸಾಮಾನ್ಯವಾಗಿ ಉಪಗ್ರಹಗಳು ಕೇವಲ 2D ಫೋಟೋಗಳನ್ನು ಮಾತ್ರ ತೆಗೆಯುತ್ತವೆ. ಆದರೆ VELC ಉಪಕರಣವು ಪ್ಲಾಸ್ಮಾ ಅನಿಲವು ನಮ್ಮ ಕಡೆಗೆ ಬರುತ್ತಿದೆಯೇ ಅಥವಾ ದೂರ ಸರಿಯುತ್ತಿದೆಯೇ ಎಂಬುದನ್ನು ಬೆಳಕಿನ ತರಂಗಾಂತರದ ಆಧಾರದಲ್ಲಿ (Red-shift ಮತ್ತು Blue-shift) ಗುರುತಿಸಿ, ಮೂರನೇ ಆಯಾಮದ ಚಲನೆಯನ್ನು ಸಾಬೀತುಪಡಿಸಿದೆ.

ಭೂಮಿಗೆ ಇದರಿಂದಾಗುವ ಪ್ರಯೋಜನವೇನು?: ಸೂರ್ಯನಿಂದ ಹೊರಹೊಮ್ಮುವ ಇಂತಹ ಪ್ರಬಲ ಸೌರ ಜ್ವಾಲೆಗಳು ಮತ್ತು ಪ್ಲಾಸ್ಮಾ ಭೂಮಿಯ ಕಡೆಗೆ ಅಪ್ಪಳಿಸಿದಾಗ, ಅವು ಉಪಗ್ರಹ ಸಂವಹನ, ಜಿಪಿಎಸ್ ವ್ಯವಸ್ಥೆ, ವಿದ್ಯುತ್ ಗ್ರಿಡ್ಗಳು ಹಾಗೂ ವಿಮಾನಯಾನ ಸಂಪರ್ಕಕ್ಕೆ ತೀವ್ರ ಅಡ್ಡಿ ಉಂಟುಮಾಡುತ್ತವೆ. ಈ ಸ್ಫೋಟಗಳ ನಿಜವಾದ ಆಕಾರ ಮತ್ತು ವೇಗ ತಿಳಿಯುವುದರಿಂದ, ಬಾಹ್ಯಾಕಾಶ ಹವಾಮಾನದ ಮುನ್ಸೂಚನೆಯನ್ನು (Space Weather Forecast) ಮೊದಲೇ ಅಂದಾಜಿಸಿ ಭೂಮಿಯ ಮೇಲಿನ ತಾಂತ್ರಿಕ ಉಪಕರಣಗಳನ್ನು ರಕ್ಷಿಸಿಕೊಳ್ಳಲು ನೆರವಾಗಲಿದೆ.

















