ಬೆಂಗಳೂರು, ನ.08 www.bengaluruwire.com: ಎಥೆನಾಲ್ ನೀತಿಯಲ್ಲಿನ ಕೇಂದ್ರ ಸರ್ಕಾರದ ಎಡವಟ್ಟುಗಳು ಮತ್ತು ಅಸ್ಥಿರ ನಿರ್ಧಾರಗಳಿಂದಾಗಿ ದೇಶದಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಗಂಭೀರ ಆರೋಪ ಮಾಡಿದ್ದಾರೆ.
ಎಥೆನಾಲ್ ಉತ್ಪಾದನೆಗೆ ಮಿತಿಮೀರಿ ಪ್ರೋತ್ಸಾಹ ನೀಡಿ, ಈಗ ಉತ್ಪಾದಿಸಿದ ಶೇಕಡಾ 20 ರಿಂದ 30 ರಷ್ಟನ್ನೂ ಖರೀದಿಸದೆ ಕೇಂದ್ರದ ಬಿಜೆಪಿ ಸರ್ಕಾರ ಕೈಗಾರಿಕೆಗಳನ್ನು ಸಂಕಷ್ಟಕ್ಕೆ ತಳ್ಳಿದೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ದೀಪಾವಳಿ ಶುಭಾಶಯ ಕೋರಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ವಿಚಾರದಲ್ಲಿ ನಡೆದಿರುವ ಅಕ್ರಮಗಳ ಕುರಿತು ರಾಹುಲ್ ಗಾಂಧಿ ಹಾಗೂ ಸಚಿವ ದಿನೇಶ್ ಗುಂಡೂರಾವ್ ಮತ್ತು ರಿಜ್ವಾನ್ ಅರ್ಷದ್ ಮಾಡಿರುವ ಆರೋಪಗಳಲ್ಲಿ ಸತ್ಯಾಂಶವಿದೆ. ಪೆಟ್ರೋಲ್ ಜೊತೆ ನಿಗದಿಗಿಂತ ಹೆಚ್ಚು ಎಥೆನಾಲ್ ಮಿಶ್ರಣ ಮಾಡಿರುವ ಬಗ್ಗೆ ಸೂಕ್ತ ತನಿಖೆ ನಡೆಯಬೇಕು ಎಂದು ಆಗ್ರಹಿಸಿದರು.
ಹೆಚ್ಡಿಕೆ ವಿರುದ್ಧ ತೀವ್ರ ವಾಗ್ದಾಳಿ: ಹಾಸನ ಜಿಲ್ಲಾಧಿಕಾರಿ ವರ್ಗಾವಣೆ ವಿಚಾರವಾಗಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಆಧಾರರಹಿತ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಹರಿಹಾಯ್ದ ಪಾಟೀಲರು, “ಸ್ವತಃ ಮುಖ್ಯಮಂತ್ರಿಯಾಗಿದ್ದವರು ಜವಾಬ್ದಾರಿಯುತವಾಗಿ ಮಾತನಾಡಬೇಕು. ಯಾರಾದರೂ ಡಿಸಿ ಬಳಿ ಹಣ ಪಡೆಯುತ್ತಾರೆಯೇ? ಕುಮಾರಸ್ವಾಮಿ ತಮ್ಮ ಆಡಳಿತಾವಧಿಯಲ್ಲಿ ಹೀಗೆ ಮಾಡಿದ್ದರೇನೋ ಗೊತ್ತಿಲ್ಲ,” ಎಂದು ತಿರುಗೇಟು ನೀಡಿದರು.

ಮಂಡ್ಯದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ವಾಹನ ಪರೀಕ್ಷಾ ಮತ್ತು ತರಬೇತಿ ಕೇಂದ್ರಕ್ಕೆ ಮೊದಲು ಕೇಳಿದ್ದ 100 ಎಕರೆ ಬದಲು ಈಗ 500 ಎಕರೆ ಜಮೀನು ಕೇಳುತ್ತಿದ್ದಾರೆ, ಅದಕ್ಕೂ ರಾಜ್ಯ ಸರ್ಕಾರ ಸಿದ್ಧವಿದೆ ಎಂದರು. ಆದರೆ, ಕೇಂದ್ರ ಕೈಗಾರಿಕಾ ಸಚಿವರಾಗಿರುವ ಕುಮಾರಸ್ವಾಮಿ ಅವರಿಗೆ ರಾಜ್ಯದ ಹಿತಾಸಕ್ತಿ ಮುಖ್ಯವಾಗಿದ್ದರೆ ಸೆಮಿಕಂಡಕ್ಟರ್ ಕಂಪನಿಗಳನ್ನು ಕರ್ನಾಟಕಕ್ಕೆ ತರಲಿ. ಪಿಎಲ್ಐ (PLI) ನೆಪವೊಡ್ಡಿ ರಾಜ್ಯಕ್ಕೆ ಬರಬೇಕಿದ್ದ ಹೂಡಿಕೆಗಳನ್ನು ಗುಜರಾತ್, ಮಹಾರಾಷ್ಟ್ರ, ಅಸ್ಸಾಂ ರಾಜ್ಯಗಳಿಗೆ ಕೊಂಡೊಯ್ಯಲಾಗುತ್ತಿದೆ ಎಂದು ಟೀಕಿಸಿದರು.
ಕೃಷ್ಣಾ ನದಿ ವಿವಾದ: ಕೇಂದ್ರ ಮತ್ತು ಮಹಾರಾಷ್ಟ್ರಕ್ಕೆ ಪತ್ರ: ಮಹಾರಾಷ್ಟ್ರ ಸರ್ಕಾರ ಉಜ್ಜಿನಿ ಬಳಿ 40 ಟಿಎಂಸಿ ಸಾಮರ್ಥ್ಯದ ನೂತನ ಅಣೆಕಟ್ಟು ನಿರ್ಮಿಸಲು ಮುಂದಾಗಿರುವುದು ಕೃಷ್ಣಾ ನ್ಯಾಯಾಧಿಕರಣದ ತೀರ್ಪಿನ ಸ್ಪಷ್ಟ ಉಲ್ಲಂಘನೆಯಾಗಿದೆ. ಇದರಿಂದ ಕರ್ನಾಟಕ, ತೆಲಂಗಾಣ ಮತ್ತು ಆಂಧ್ರಪ್ರದೇಶ ರಾಜ್ಯಗಳಿಗೆ ತೀವ್ರ ಅನ್ಯಾಯವಾಗಲಿದೆ. ಈ ಅಕ್ರಮ ಯೋಜನೆಯ ವಿರುದ್ಧ ಕೇಂದ್ರ ಜಲಸಂಪನ್ಮೂಲ ಸಚಿವರು ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿಗೆ ಪತ್ರ ಬರೆಯಲಾಗುವುದು ಎಂದು ಎಂ.ಬಿ. ಪಾಟೀಲ ಸ್ಪಷ್ಟಪಡಿಸಿದರು.



















