ಬೆಂಗಳೂರು, ಸೆ.22 www.bengaluruwire.com: ರಾಜಧಾನಿಯ ಆಸ್ತಿ ಮಾಲೀಕರಿಗೆ ಬಹುದಿನಗಳ ಬೇಡಿಕೆಯಾಗಿದ್ದ ಸುಧಾರಿತ, ಪಾರದರ್ಶಕ ಹಾಗೂ ಜನಸ್ನೇಹಿ ‘ಇ-ಆಸ್ತಿ 2.0’ ತಂತ್ರಜ್ಞಾನ ಆಧಾರಿತ ವ್ಯವಸ್ಥೆಯನ್ನು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಮಂಗಳವಾರ ಅಧಿಕೃತವಾಗಿ ಲೋಕಾರ್ಪಣೆಗೊಳಿಸಿದರು.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನಿರ್ದೇಶನದಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಈ ನೂತನ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗಿದೆ. ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, 2000ನೇ ಇಸವಿಯಲ್ಲಿ ‘ಭೂಮಿ’ ಯೋಜನೆಯ ಮೂಲಕ ದೇಶಕ್ಕೆ ಮಾದರಿಯಾಗಿದ್ದ ರಾಜ್ಯ, ಇದೀಗ ಆಸ್ತಿ ದಾಖಲೆ ನಿರ್ವಹಣೆಯಲ್ಲಿ ‘ಇ-ಖಾತಾ’ ಮೂಲಕ ಮತ್ತೊಂದು ಹೊಸ ಕ್ರಾಂತಿಗೆ ಮುನ್ನುಡಿ ಬರೆದಿದೆ ಎಂದು ತಿಳಿಸಿದರು.
23–24 ಲಕ್ಷ ಆಸ್ತಿಗಳ ದಾಖಲೆ ಡಿಜಿಟಲೀಕರಣ
ಬೆಂಗಳೂರಿನಲ್ಲಿರುವ 35 ಲಕ್ಷಕ್ಕೂ ಅಧಿಕ ಆಸ್ತಿಗಳ ಪೈಕಿ ಈಗಾಗಲೇ 23 ರಿಂದ 24 ಲಕ್ಷ ಆಸ್ತಿ ದಾಖಲೆಗಳನ್ನು ಗಣಕೀಕರಣಗೊಳಿಸಿ ಡ್ರಾಫ್ಟ್ ಖಾತಾಗಳನ್ನು ಸಿದ್ಧಪಡಿಸಲಾಗಿದೆ. ಈಗಾಗಲೇ 11 ಲಕ್ಷಕ್ಕೂ ಅಧಿಕ ಮಾಲೀಕರು ಅಂತಿಮ ಇ-ಖಾತಾವನ್ನು ಪಡೆದಿದ್ದು, ಬಾಕಿ ಇರುವವರು ದಾಖಲೆಗಳನ್ನು ಅಪ್‌ಲೋಡ್ ಮಾಡಿ ಇ-ಖಾತಾ ಪಡೆಯಬಹುದಾಗಿದೆ. ಅತ್ಯುತ್ತಮ ಡಿಜಿಟಲ್ ಸೇವೆಗಾಗಿ ಈ ವ್ಯವಸ್ಥೆಗೆ ಈಗಾಗಲೇ ‘ರಾಷ್ಟ್ರೀಯ ಇ-ಆಡಳಿತ 2025 ಚಿನ್ನದ ಪ್ರಶಸ್ತಿ’ ಲಭಿಸಿದೆ.

ಇ-ಆಸ್ತಿ 2.0 ವಿಶೇಷತೆಗಳು
ನ್ಯೂನತೆಗಳಿಗೆ ಪರಿಹಾರ: ಹಿಂದಿನ ಪೋರ್ಟಲ್‌ನಲ್ಲಿದ್ದ ಅಪ್‌ಲೋಡ್ ಸಮಸ್ಯೆಗಳು, ಹೆಸರು ಬದಲಾವಣೆ ದೋಷಗಳು ಹಾಗೂ ವಿಸ್ತೀರ್ಣ ಹೊಂದಾಣಿಕೆ ಸಮಸ್ಯೆಗಳನ್ನು ತ್ವರಿತವಾಗಿ ಸರಿಪಡಿಸಲು ವ್ಯವಸ್ಥೆ ಕಲ್ಪಿಸಲಾಗಿದೆ.
ಇಲಾಖೆಗಳ ಸಮನ್ವಯ: ಈ ಪೋರ್ಟಲ್ ಅನ್ನು ಕಾವೇರಿ ತಂತ್ರಾಂಶ, ಬೆಂಗಳೂರು ಜಲಮಂಡಳಿ (BWSSB) ಮತ್ತು ಬೆಸ್ಕಾಂ (BESCOM) ಜೊತೆ ಲಿಂಕ್ ಮಾಡಲಾಗಿದ್ದು, ಮಧ್ಯವರ್ತಿಗಳ ಹಾವಳಿಗೆ ಮುಕ್ತಿ ಸಿಗಲಿದೆ.
ಎಐ (AI) ಬಳಕೆ: ದಾಖಲೆಗಳ ನಿಖರ ಪರಿಶೀಲನೆಗೆ ಕೃತಕ ಬುದ್ಧಿಮತ್ತೆ ಬಳಕೆ ಮಾಡಲಾಗಿದ್ದು, ಎನ್‌ಆರ್‌ಐ ಮಾಲೀಕರಿಗಾಗಿ ಡಿಜಿಟಲ್ ಸಹಿ ಸೌಲಭ್ಯ ಕಲ್ಪಿಸಲಾಗಿದೆ.
ಖಾತಾ ಬೈಫರ್ಕೇಶನ್: ಬರುವ ಸೋಮವಾರದಿಂದ 20,000 ಚದರ ಅಡಿವರೆಗಿನ ಆಸ್ತಿಗಳ ವಿಭಜನೆಗೆ (Bifurcation) ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸಿ ಅನುಮೋದನೆ ಪಡೆಯುವ ಮಾಡ್ಯೂಲ್ ಲಭ್ಯವಾಗಲಿದೆ.
ಕಾರ್ಯಕ್ರಮದಲ್ಲಿ ಮುಖ್ಯ ಆಯುಕ್ತ ಮಹೇಶ್ವರ್ ರಾವ್, ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ಹಾಗೂ ನಗರ ಪಾಲಿಕೆ ಆಯುಕ್ತರುಗಳು ಉಪಸ್ಥಿತರಿದ್ದರು.
ಸೆಟ್‌ಬ್ಯಾಕ್ ಉಲ್ಲಂಘಿಸಿ ಕಟ್ಟಡ ನಿರ್ಮಾಣ: ನೋಟಿಸ್ ಜಾರಿಗೆ ಆಯುಕ್ತರ ಖಡಕ್ ಸೂಚನೆ
ಇದಕ್ಕೂ ಮುನ್ನ, ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ತಪಾಸಣೆ ಕೈಗೊಂಡ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅವರು, ನಿಯಮ ಉಲ್ಲಂಘಿಸಿ ನಿರ್ಮಿಸುತ್ತಿರುವ ಕಟ್ಟಡಗಳ ವಿರುದ್ಧ ಕಠಿಣ ಕ್ರಮಕ್ಕೆ ಸೂಚಿಸಿದರು.
ದೊಮ್ಮಲೂರು ಬಳಿ ಹಳೆಯ ಕಟ್ಟಡ ನೆಲಸಮ ಮಾಡಿ, ನಾಲ್ಕೂ ಬದಿಗಳಲ್ಲಿ ಯಾವುದೇ ಸೆಟ್‌ಬ್ಯಾಕ್ ಬಿಡದೆ ನಿರ್ಮಿಸುತ್ತಿರುವ ನೂತನ ಕಟ್ಟಡಕ್ಕೆ ತಕ್ಷಣ ನೋಟಿಸ್ ಜಾರಿಗೊಳಿಸಿ, ತೆರವು ಕಾರ್ಯಾಚರಣೆ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಗಡುವು ನೀಡಿದರು. ನಿಯಮಬಾಹಿರವಾಗಿ ನಿರ್ಮಿಸಲಾಗಿದ್ದ ಮತ್ತೊಂದು ವಾಣಿಜ್ಯ ಕಟ್ಟಡದ ವಿದ್ಯುತ್ ಸಂಪರ್ಕ ಕಡಿತಗೊಳಿಸಲು ಆದೇಶಿಸಿದರು.
ರಸ್ತೆ ದುರಸ್ತಿ ಹಾಗೂ ಮೂಲಸೌಕರ್ಯ ಪರಿಶೀಲನೆ:
ಫುಟ್‌ಪಾತ್ ಅಭಿವೃದ್ಧಿ: ದೊಮ್ಮಲೂರು ಮುಖ್ಯರಸ್ತೆಯ ವಿಶಾಲ ಪಾದಚಾರಿ ಮಾರ್ಗದಲ್ಲಿರುವ ಗೋಡೆಗಳನ್ನು ತೆರವುಗೊಳಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವುದು ಹಾಗೂ ವೆಂಡಿಂಗ್ ಜೋನ್ ಅಥವಾ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸುವ ಸಾಧ್ಯತೆ ಪರಿಶೀಲಿಸಲು ಸೂಚಿಸಿದರು.
ಡಾಂಬರೀಕರಣ: ಹದಗೆಟ್ಟಿರುವ ಸಾಯಿಬಾಬಾ ಟೆಂಪಲ್ ರಸ್ತೆ, ಇಂದಿರಾನಗರ 80 ಅಡಿ ರಸ್ತೆಯ ದೊಮ್ಮಲೂರು ಜಂಕ್ಷನ್ ಹಾಗೂ ಜಲಮಂಡಳಿ ಕಾಮಗಾರಿಯಿಂದ ಹಾಳಾದ ರಸ್ತೆಗಳ ಮರುಡಾಂಬರೀಕರಣಕ್ಕೆ ಆದೇಶಿಸಿದರು.
ಆಸ್ಪತ್ರೆ & ಕೆಳಸೇತುವೆ: ಕೋಡಿಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಿಸಿ ಕ್ಯಾಮೆರಾ ಮತ್ತು ಬಯೋಮೆಡಿಕಲ್ ತ್ಯಾಜ್ಯಕ್ಕೆ ಪ್ರತ್ಯೇಕ ಕೊಠಡಿ ನಿರ್ಮಿಸಲು ಸೂಚಿಸಿದ ಅವರು, ಶೇ. 80ರಷ್ಟು ಕಾಮಗಾರಿ ಪೂರ್ಣಗೊಂಡಿರುವ ವಿಂಡ್ ಟನಲ್ ಕೆಳಸೇತುವೆಯ ಉಳಿದ ಬಾಕ್ಸ್ ಪುಶಿಂಗ್ ಕೆಲಸವನ್ನು ನವೆಂಬರ್ ಅಂತ್ಯದೊಳಗೆ ಮುಗಿಸಲು ನಿರ್ದೇಶನ ನೀಡಿದರು.





















