ಬೆಂಗಳೂರು, ಸೆ.22 www.bengaluruwire.com: ಪಶ್ಚಿಮ ಘಟ್ಟ ಸಂರಕ್ಷಣೆ ಕುರಿತ ಡಾ. ಕಸ್ತೂರಿ ರಂಗನ್ ವರದಿಯ ನ್ಯೂನತೆಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಂಡಿಸಿದ ಅಧಿಕೃತ ನಿರ್ಣಯಕ್ಕೆ ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರ ದೊರೆತಿದೆ.
ವರದಿ ಕುರಿತು ಎರಡು ದಿನಗಳ ಕಾಲ ನಡೆದ ಮಹತ್ವದ ಚರ್ಚೆಯ ಬಳಿಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸದನದಲ್ಲಿ ಅಧಿಕೃತ ನಿರ್ಣಯ ಮಂಡಿಸಿದರು. ಇದಕ್ಕೂ ಮುನ್ನ, ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿಗೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ ಸಿಎಂ ಮಂಗಳವಾರ ಉತ್ತರಿಸಿದರು.
“ಕಸ್ತೂರಿ ರಂಗನ್ ವರದಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹೊರಡಿಸಿರುವ ಅಧಿಸೂಚನೆ ಸಂಬಂಧಿಸಿದಂತೆ ಸುಪ್ರಿಂ ಕೋರ್ಟ್ ನಲ್ಲಿ ರಾಜ್ಯದ ಸ್ಪಷ್ಟ ಅಭಿಪ್ರಾಯ ಮಂಡಿಸಲು ಹಿರಿಯ ವಕೀಲರನ್ನು ನೇಮಿಸಲಾಗುವುದು” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು.
“ನನಗಿರುವ ಮಾಹಿತಿಯ ಪ್ರಕಾರ, ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿಯು ಕಸ್ತೂರಿ ರಂಗನ್ ವರದಿ ಜಾರಿ ಹಿನ್ನೆಯಲ್ಲಿ ಕೇಂದ್ರ ಸರ್ಕಾರವನ್ನು ಅಂತಿಮ ಅಧಿಸೂಚನೆ ಹೊರಡಿಸುವ ತೀರ್ಮಾನ ಕೈಗೊಳ್ಳುವಂತೆ ನಿರ್ದೇಶನ ನೀಡಿದೆ. ಅಧಿಸೂಚನೆ ಹೊರಡಿಸಿದ ನಂತರ ತನ್ನ ಗಮನಕ್ಕೆ ತರುವಂತೆ ಹೇಳಿದೆ. ಆದರೆ, ಮಂಡಳಿಯು ಪಶ್ಚಿಮಘಟ್ಟವನ್ನು ಹಂಚಿಕೊಂಡಿರುವ ರಾಜ್ಯದ ಬಗ್ಗೆ ಯಾವುದೇ ಪ್ರಸ್ತಾಪ ಮಾಡಿಲ್ಲ” ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

ಬಳಿಕ ರಾಜ್ಯ ಸರ್ಕಾರ ಮಂಡಿಸಿದ ನಿರ್ಣಯಕ್ಕೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಸರ್ಕಾರದ ಈ ನಿಲುವಿಗೆ ಬೆಂಬಲ ಸೂಚಿಸಿದ ಹಿನ್ನೆಲೆಯಲ್ಲಿ, ನಿರ್ಣಯವು ಧ್ವನಿಮತದ ಮೂಲಕ ಅಂಗೀಕಾರಗೊಂಡಿತು.
ಕೇರಳ ಮಾದರಿಯಲ್ಲಿ ಭೌತಿಕ ಸರ್ವೇ:
ಕಸ್ತೂರಿ ರಂಗನ್ ವರದಿಯ ಉಪಗ್ರಹ ಆಧಾರಿತ ಸಮೀಕ್ಷೆಯು ದೋಷಪೂರಿತವಾಗಿದೆ ಎಂದು ಸದನದ ಬಹುತೇಕ ಸದಸ್ಯರು ಅಭಿಪ್ರಾಯಪಟ್ಟರು. ನೆರೆಯ ಕೇರಳ ರಾಜ್ಯದ ಮಾದರಿಯಲ್ಲೇ ಕರ್ನಾಟಕದಲ್ಲೂ ಗ್ರಾಮ ಮಟ್ಟದಲ್ಲಿ ಸರ್ವೇ ನಂಬರ್‌ವಾರು ಭೌತಿಕ ಅಳತೆ ನಡೆಸಲು ಸರ್ಕಾರ ತೀರ್ಮಾನಿಸಿದೆ. ಈ ಸರ್ವೇ ಕಾರ್ಯ ಪೂರ್ಣಗೊಳಿಸಲು ಕೇಂದ್ರ ಸರ್ಕಾರಕ್ಕೆ ಕನಿಷ್ಠ ಒಂದು ವರ್ಷ ಕಾಲಾವಕಾಶ ನೀಡುವಂತೆ ಕೋರಲಾಗುವುದು ಎಂದು ಮುಖ್ಯಮಂತ್ರಿಗಳು ಸದನಕ್ಕೆ ಮಾಹಿತಿ ನೀಡಿದರು.
ನಿವೃತ್ತ ನ್ಯಾಯಾಧೀಶರ ನೇತೃತ್ವದ ಸಮಿತಿ:
ವರದಿಯಲ್ಲಿನ ಆಕ್ಷೇಪಾರ್ಹ ಅಂಶಗಳನ್ನು ಸರಿಪಡಿಸಲು ನಿವೃತ್ತ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗುವುದು.
ಈ ಸಮಿತಿಯಲ್ಲಿ ಕಂದಾಯ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು, ರೈತ ಪ್ರತಿನಿಧಿಗಳು ಹಾಗೂ ಕೈಗಾರಿಕೋದ್ಯಮಿಗಳು ಇರಲಿದ್ದಾರೆ. ಪರಿಸರ ತಜ್ಞರು ಹಾಗೂ ಸಂಬಂಧಿತ ಶೈಕ್ಷಣಿಕ ಸಂಸ್ಥೆಗಳ ವಿಜ್ಞಾನಿಗಳನ್ನು ಸಮಿತಿಯು ಒಳಗೊಂಡಿರುತ್ತದೆ. ರಾಜ್ಯ ಮಟ್ಟದ ಸಮಿತಿಯ ನೆರವಿಗೆ ಗ್ರಾಮ ಪಂಚಾಯತಿ ಮಟ್ಟದಲ್ಲಿಯೂ ಸ್ಥಳೀಯ ಜನಪ್ರತಿನಿಧಿಗಳ ಸಮಿತಿಗಳನ್ನು ರಚಿಸಲಾಗುತ್ತದೆ.
ಕೃಷಿ, ಜನವಸತಿ ಪ್ರದೇಶಗಳಿಗೆ ESA ವಿನಾಯಿತಿ:
ಕೇವಲ ಉಪಗ್ರಹ ಆಧಾರಿತ ದತ್ತಾಂಶದಿಂದ ಇಡೀ ಗ್ರಾಮವನ್ನೇ ಪರಿಸರ ಸೂಕ್ಷ್ಮ ಪ್ರದೇಶ (ESA) ಎಂದು ಗುರುತಿಸಿರುವುದು ಅವೈಜ್ಞಾನಿಕವಾಗಿದೆ. ಕೇವಲ ಅಧಿಸೂಚಿತ ಅರಣ್ಯ ಹಾಗೂ ನೈಸರ್ಗಿಕ ಅರಣ್ಯ ಪ್ರದೇಶಗಳನ್ನು ಮಾತ್ರ ಇಎಸ್ಎ ವ್ಯಾಪ್ತಿಗೆ ಸೇರಿಸಬೇಕು.
ರೈತರ ಕೃಷಿ ಭೂಮಿ, ತೋಟಗಾರಿಕೆ ಮತ್ತು ಪ್ಲಾಂಟೇಶನ್‌ಗಳು, ಜನವಸತಿ ಪ್ರದೇಶಗಳು ಹಾಗೂ ಸಾರ್ವಜನಿಕ ಚಟುವಟಿಕೆಗಳ ತಾಣಗಳನ್ನು ಈ ವ್ಯಾಪ್ತಿಯಿಂದ ಸಂಪೂರ್ಣವಾಗಿ ಕೈಬಿಡಬೇಕು ಎಂದು ನಿರ್ಣಯದಲ್ಲಿ ಸ್ಪಷ್ಟಪಡಿಸಲಾಗಿದೆ. ಬಗರ್ ಹುಕುಂ, ಅರಣ್ಯ ಹಕ್ಕು, ದೇವಸ್ಥಾನ ಅರಣ್ಯ ಭೂಮಿ ಮತ್ತು ನ್ಯಾಯಾಲಯದಲ್ಲಿರುವ ಪ್ರಕರಣಗಳನ್ನು ವಿಶೇಷವಾಗಿ ಪರಿಗಣಿಸಬೇಕೆಂದು ಕೇಂದ್ರವನ್ನು ಒತ್ತಾಯಿಸಲು ತೀರ್ಮಾನಿಸಲಾಗಿದೆ.
ಸರ್ವಪಕ್ಷ ನಿಯೋಗ ದೆಹಲಿಗೆ:
”ನಾವು ಪರಿಸರ ವಿರೋಧಿಗಳಲ್ಲ, ಪರಿಸರ ಪ್ರೇಮಿಗಳು. ರಾಜ್ಯ ಸರ್ಕಾರ ಈಗಾಗಲೇ 6 ಬಾರಿ ಕರಡನ್ನು ತಿರಸ್ಕರಿಸಿದೆ. ನೂರಾರು ವರ್ಷಗಳಿಂದ ಬದುಕುತ್ತಿರುವ ರೈತರನ್ನು ಒಕ್ಕಲೆಬ್ಬಿಸುವುದಿಲ್ಲ, ಅದೇ ವೇಳೆ ಹೊಸದಾಗಿ ಒತ್ತುವರಿಗೂ ಅವಕಾಶ ನೀಡುವುದಿಲ್ಲ” ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದರು. ಮಲೆನಾಡು ಹಾಗೂ ಕರಾವಳಿ ಭಾಗದ ಜನರ ಹಿತರಕ್ಷಣೆಯ ಜೊತೆಗೆ ಅರಣ್ಯ ಸಂರಕ್ಷಣೆಯೂ ಸರ್ಕಾರದ ಆದ್ಯತೆಯಾಗಿದ್ದು, ಈ ವಿಚಾರವಾಗಿ ಪ್ರಧಾನಮಂತ್ರಿಗಳು ಹಾಗೂ ಕೇಂದ್ರ ಪರಿಸರ ಸಚಿವರನ್ನು ಭೇಟಿ ಮಾಡಲು ಶೀಘ್ರದಲ್ಲೇ ಸರ್ವಪಕ್ಷಗಳ ನಿಯೋಗವನ್ನು ದೆಹಲಿಗೆ ಕೊಂಡೊಯ್ಯಲಾಗುವುದು ಎಂದು ತಿಳಿಸಿದರು.




















