ಬೆಂಗಳೂರು, ಸೆ.21 www.bengaluruwire.com: ಬೆಂಗಳೂರು ಉತ್ತರ ನಗರ ಪಾಲಿಕೆಯಂತೆ ಉಳಿದ ನಾಲ್ಕು ಪಾಲಿಕೆಗಳಲ್ಲೂ ಈ ಜನವಿರೋಧಿ ಆದೇಶ ಜಾರಿಗೆ ಬಂದಿದ್ದು, ಸಾರ್ವಜನಿಕ ಆಕ್ರೋಶ ಭುಗಿಲೆದ್ದಿದೆ.
ಕಾಂಗ್ರೆಸ್ ಸರ್ಕಾರದ (Congress Government) ಅಧೀನದಲ್ಲಿರುವ ರಾಜ್ಯದ ನಗರ ಪಾಲಿಕೆಗಳು ಈಗ ಜನಸಾಮಾನ್ಯರ ರಕ್ತಹೀರುವ ಹೊಸ ಅಡ್ಡದಾರಿಯನ್ನು ಕಂಡುಹಿಡಿದುಕೊಂಡಿವೆ. ಆಡಳಿತ ನಡೆಸಲು ಅಶಕ್ತವಾಗಿರುವ ಸರ್ಕಾರ, ಡಿಜಿಟಲ್ ಆಡಳಿತದ ಹೆಸರಿನಲ್ಲಿ ಜನಸಾಮಾನ್ಯರ ಜೇಬಿಗೆ ನೇರವಾಗಿ ಕನ್ನ ಹಾಕಲು ಮುಂದಾಗಿದೆ.
ಬೆಂಗಳೂರು ಉತ್ತರ ನಗರ ಪಾಲಿಕೆಯ ಆಯುಕ್ತರ ಕಚೇರಿಯು 2026ರ ಜೂನ್ 3ರಂದು ಹೊರಡಿಸಿರುವ ವಿವಾದಾತ್ಮಕ ಆದೇಶದಂತೆ, ಈಗ ಕೇವಲ ಒಂದು ಪಾಲಿಕೆಯಲ್ಲಿ ಮಾತ್ರವಲ್ಲದೆ ಉಳಿದ ನಾಲ್ಕು ನಗರ ಪಾಲಿಕೆಗಳಲ್ಲೂ ಆಸ್ತಿ ತೆರಿಗೆ ಮತ್ತು ಇ-ಖಾತಾ ಸೇವೆಗಳಿಗೆ ‘ಸಾಫ್ಟ್‌ವೇರ್ ಶುಲ್ಕ’ದ (Software Fee) ಭಾರೀ ಬರೆ ಎಳೆಯಲಾಗಿದೆ.

ಸರ್ಕಾರವೊಂದು ಜನರ ತೆರಿಗೆ ಹಣದಿಂದ ಸಾಫ್ಟ್‌ವೇರ್ ಅಭಿವೃದ್ಧಿಪಡಿಸಿ ಮೂಲಭೂತ ಸೌಕರ್ಯ ಕಲ್ಪಿಸುವುದು ಸಂವಿಧಾನಬದ್ಧ ಕರ್ತವ್ಯ. ಆದರೆ, ದಿವಾಳಿಯಾಗಿರುವ ರಾಜ್ಯ ಸರ್ಕಾರ ತನ್ನ ಆಡಳಿತಾತ್ಮಕ ವೈಫಲ್ಯವನ್ನು ಮುಚ್ಚಿಕೊಳ್ಳಲು, ತಂತ್ರಾಂಶ ನಿರ್ಮಾಣ ಮತ್ತು ನಿರ್ವಹಣೆಯ ಇಡೀ ಖರ್ಚನ್ನು ನೇರವಾಗಿ ನಾಗರಿಕರ ಹೆಗಲಿಗೆ ಹೊರೆಸಿದೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ (R. Ashok) ಅವರು ಖಂಡಿಸಿದ್ದಾರೆ. ಇದು ಕೇವಲ ಶುಲ್ಕವಲ್ಲ, ಬದಲಿಗೆ ಸರ್ಕಾರದ ಅಧಿಕೃತ ಹಗಲು ದರೋಡೆಯಾಗಿದೆ ಎಂದು ಟೀಕಿಸಿದ್ದಾರೆ.

ಲೂಟಿಯ ದರಪಟ್ಟಿ ಇಲ್ಲಿದೆ:
ಆಸ್ತಿ ತೆರಿಗೆ ಸೇವೆಗಳು: ವಸತಿ ಆಸ್ತಿಗೆ ₹200 ಹಾಗೂ ವಸತಿಯೇತರ/ಮಿಶ್ರಬಳಕೆ ಆಸ್ತಿಗೆ ಬರೋಬ್ಬರಿ ₹1,000.
ಇ-ಖಾತಾ ಅಂತಿಮ ಪ್ರತಿ: ಪ್ರತಿ ಅರ್ಜಿಗೆ ₹400.
ಬಿ-ಖಾತಾದಿಂದ ಎ-ಖಾತಾ ಪರಿವರ್ತನೆ: ವಸತಿ ಆಸ್ತಿಗೆ ₹2,000 ಮತ್ತು ವಸತಿಯೇತರ ಆಸ್ತಿಗೆ ₹10,000.
ಹೊಸ ಖಾತಾ ನೋಂದಣಿ: ವಸತಿ ಆಸ್ತಿಗೆ ₹2,000 ಹಾಗೂ ವಸತಿಯೇತರ ಆಸ್ತಿಗೆ ₹10,000.
ಲೇಔಟ್ ಖಾತಾ ಸೇವೆಗಳು: ಪ್ರತಿ ನಿವೇಶನಕ್ಕೆ ₹10,000.
ಇ-ಖಾತಾದ ಮರು-ವಿತರಣೆ: ಪ್ರತಿ ದಾಖಲೆಗೆ ₹50.
ಉಚಿತ ಗ್ಯಾರಂಟಿ ಯೋಜನೆಗಳ (Guarantees Scheme) ಸುಳಿಗೆ ಸಿಲುಕಿ ಬೊಕ್ಕಸ ಬರಿದಾಗಿಸಿಕೊಂಡಿರುವ ಕಾಂಗ್ರೆಸ್ ಸರ್ಕಾರ, ಈಗ ಪ್ರತೀ ಡಿಜಿಟಲ್ ಸೇವೆಗೂ ಸುಲಿಗೆಯ ದರ ನಿಗದಿಪಡಿಸಿದೆ. ಸಾಫ್ಟ್‌ವೇರ್ ಅಭಿವೃದ್ಧಿ, ಕ್ಲೌಡ್ ಹೋಸ್ಟಿಂಗ್, ಸೈಬರ್ ಭದ್ರತೆ ಮತ್ತು ಸಿಬ್ಬಂದಿ ನಿರ್ವಹಣೆ ವೆಚ್ಚವನ್ನು ಬಡ ಹಾಗೂ ಮಧ್ಯಮ ವರ್ಗದ ಜನರ ಮೇಲೆ ಹೇರಿರುವುದು ಯಾವ ಸೀಮೆಯ ಆಡಳಿತ? ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಡಿಜಿಟಲ್ ಆಡಳಿತ ಎಂದರೆ ಜನರಿಗೆ ಪಾರದರ್ಶಕ ಹಾಗೂ ಸುಲಭ ಸೇವೆ ನೀಡುವುದು, ಆದರೆ ಈ ಸರ್ಕಾರಕ್ಕೆ ಜನರನ್ನು ದೋಚುವುದೇ ಮುಖ್ಯ ಕಾಯಕವಾಗಿದೆ. ತಕ್ಷಣವೇ ಈ ಅನ್ಯಾಯದ ಮತ್ತು ಜನವಿರೋಧಿ ‘ಸಾಫ್ಟ್‌ವೇರ್ ವಸೂಲಿ ಶುಲ್ಕ’ದ ಆದೇಶವನ್ನು ಹಿಂಪಡೆಯದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಲಾಗಿದೆ.
























