ಬೆಂಗಳೂರು, ಸೆ.17 www.bengaluruwire.com: ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯ ಆಸ್ತಿ ಮಾಲೀಕರಿಗಾಗಿ ರಾಜ್ಯ ಸರ್ಕಾರ ಮತ್ತಷ್ಟು ವೇಗದ, ಪಾರದರ್ಶಕ ಹಾಗೂ ಸುಲಭವಾಗಿ ಆಸ್ತಿ ಸಂಬಂಧಿತ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ನೂತನ ‘ಇ-ಆಸ್ತಿ 2.0’ (e-Aasthi 2.0) ವ್ಯವಸ್ಥೆಯನ್ನು ಸೆಪ್ಟೆಂಬರ್ 21ರಿಂದ ಜಾರಿಗೆ ತರುತ್ತಿದೆ.
ಸೆಪ್ಟೆಂಬರ್ 21ರಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವರಾದ ಕೃಷ್ಣ ಬೈರೇಗೌಡ ಅವರು ಈ ನೂತನ ನಾಗರಿಕ ಸ್ನೇಹಿ ಪೋರ್ಟಲ್ ಅನ್ನು ಸಾರ್ವಜನಿಕ ಬಳಕೆಗೆ ಸಮರ್ಪಿಸಲಿದ್ದಾರೆ ಎಂದು ಜಿಬಿಎ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಾಗರಿಕರು ಇನ್ನು ಮುಂದೆ https://GBAeAasthi.Karnataka.gov.in ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಸುಲಭವಾಗಿ ಇ-ಖಾತಾ ಸೇವೆಗಳನ್ನು ಪಡೆಯಬಹುದಾಗಿದೆ.
ಏನಿದು ಇ-ಆಸ್ತಿ 2.0 ವಿಶೇಷತೆ?:

ಈಗಾಗಲೇ 25 ಲಕ್ಷಕ್ಕೂ ಅಧಿಕ ಇ-ಖಾತಾಗಳನ್ನು ಡಿಜಿಟಲ್ ರೂಪದಲ್ಲಿ ಯಶಸ್ವಿಯಾಗಿ ವಿತರಿಸಿ ಚಿನ್ನದ ಪ್ರಶಸ್ತಿ ಪಡೆದಿರುವ ಹಳೆಯ ವ್ಯವಸ್ಥೆಯ ಅತ್ಯಾಧುನಿಕ ಹಾಗೂ ಮುಂದುವರಿದ ಆವೃತ್ತಿಯೇ ಈ ‘ಇ-ಆಸ್ತಿ 2.0’.
ಈ ನೂತನ ಪೋರ್ಟಲ್ ಮೂಲಕ ಸಂಪೂರ್ಣ ಇ-ಖಾತಾ (Complete e-Khata) ಪಡೆಯುವ ಅರ್ಜಿ ಪ್ರಕ್ರಿಯೆಯನ್ನು ಗಣನೀಯವಾಗಿ ಸರಳಗೊಳಿಸಲಾಗಿದೆ. ಹೆಚ್ಚಿನ ಪ್ರಮಾಣದ ಪ್ರಕ್ರಿಯೆಗಳು ಸ್ವಯಂಚಾಲಿತಗೊಂಡಿದ್ದು, ನಾಗರಿಕರು ತಮ್ಮ ಅರ್ಜಿಯ ನೈಜ-ಸಮಯದ ಸ್ಥಿತಿಯನ್ನು (Real-time Status) ಯಾವುದೇ ಹಂತದಲ್ಲಿ ಮನೆಯಲ್ಲೇ ಕುಳಿತು ಪರಿಶೀಲಿಸಬಹುದು.
ನೂತನ ವ್ಯವಸ್ಥೆಯ ಪ್ರಮುಖ ಲಕ್ಷಣಗಳು:
ಬಳಕೆದಾರ ಸ್ನೇಹಿ ವಿನ್ಯಾಸ: ಮೊಬೈಲ್ ಹಾಗೂ ಕಂಪ್ಯೂಟರ್‌ನಲ್ಲಿ ಸುಲಭವಾಗಿ ಬಳಸಬಹುದಾದ ಸರಳ ಇಂಟರ್‌ಫೇಸ್.
ಏಕಗವಾಕ್ಷಿ ವೇದಿಕೆ: ಇ-ಖಾತಾ ಹಾಗೂ ಆಸ್ತಿ ಸಂಬಂಧಿತ ಪ್ರಮುಖ ಸೇವೆಗಳು ಒಂದೇ ಪೋರ್ಟಲ್‌ನಲ್ಲಿ ಲಭ್ಯ.
ಕಾವೇರಿ (KAVERI) ಜೊತೆ ನೇರ ಸಂಯೋಜನೆ: ನೋಂದಣಿ ಇಲಾಖೆಯ ಕಾವೇರಿ ತಂತ್ರಾಂಶದೊಂದಿಗೆ ನೇರ ಸಂಪರ್ಕವಿರುವುದರಿಂದ ಖಾತಾ ಮ್ಯೂಟೇಷನ್ ಪ್ರಕ್ರಿಯೆ ಕ್ಷಿಪ್ರವಾಗಿ ಪೂರ್ಣಗೊಳ್ಳಲಿದೆ.
ಅರ್ಜಿ ಸ್ಥಿತಿ ಟ್ರ್ಯಾಕಿಂಗ್: ಅರ್ಜಿಯ ಪ್ರಗತಿ ಯಾವ ಹಂತದಲ್ಲಿದೆ ಎಂಬುದನ್ನು ನೈಜ ಸಮಯದಲ್ಲಿ ಆನ್‌ಲೈನ್ ಮೂಲಕ ವೀಕ್ಷಿಸಬಹುದು.
ಸೆಪ್ಟೆಂಬರ್ 21ರಿಂದ ಲಭ್ಯವಾಗುವ ಆರಂಭಿಕ ಸೇವೆಗಳು:
* ಡ್ರಾಫ್ಟ್ ಇ-ಖಾತಾವನ್ನು ಅಂತಿಮ (Final) ಇ-ಖಾತಾವನ್ನಾಗಿ ಪರಿವರ್ತಿಸುವುದು.
* ಮ್ಯೂಟೇಷನ್‌ನೊಂದಿಗೆ ಅಂತಿಮ ಇ-ಖಾತಾ ವಿತರಣೆ.
KAVERI–ಮ್ಯೂಟೇಷನ್ ತಂತ್ರಾಂಶಗಳ ನೇರ ಏಕೀಕರಣ.
* ಅರ್ಜಿಯ ಪ್ರಸ್ತುತ ಸ್ಥಿತಿಯ ಆನ್‌ಲೈನ್ ಪರಿಶೀಲನೆ.
’ಬಿ’ ಖಾತಾದಿಂದ ‘ಎ’ ಖಾತಾಗೆ ಪರಿವರ್ತಿಸುವ ಪ್ರಕ್ರಿಯೆ.
ಮುಂದಿನ ದಿನಗಳಲ್ಲಿ ಸಿಗಲಿರುವ ಹೆಚ್ಚುವರಿ ಸೌಲಭ್ಯಗಳು:
* ಹೊಸ ಆಸ್ತಿಗಳಿಗೆ ಹೊಸ ಖಾತಾ ನೋಂದಣಿ.
* ಅಪಾರ್ಟ್‌ಮೆಂಟ್‌ಗಳು ಹಾಗೂ ಬಹುಮಹಡಿ ವಸತಿ ಸಮುಚ್ಚಯಗಳಿಗೆ ಬಲ್ಕ್ ಖಾತಾ (Bulk Khata) ಪ್ರಕ್ರಿಯೆ.
* ಅಂತಿಮ ಇ-ಖಾತಾದಲ್ಲಿ ಅಗತ್ಯ ತಿದ್ದುಪಡಿಗಳಿಗೆ ಅವಕಾಶ.
* ನಿವೇಶನಗಳ ವಿಭಜನೆ (Site Bifurcation) ಹಾಗೂ ವಿಲೀನ (Amalgamation) ಸೌಲಭ್ಯ.
ನೂತನ ಡಿಜಿಟಲ್ ವ್ಯವಸ್ಥೆಗೆ ಪರಿವರ್ತನೆಗೊಳ್ಳುವ ಈ ಸಂದರ್ಭದಲ್ಲಿ ಸಾರ್ವಜನಿಕರು ಹಾಗೂ ಆಸ್ತಿ ಮಾಲೀಕರು ಸಹಕಾರ ನೀಡುವಂತೆ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಮನವಿ ಮಾಡಿದ್ದಾರೆ.





















