ಬೆಂಗಳೂರು, ಸೆ.18 www.bengaluruwire.com: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಮೂಲಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪ್ರಾಂಶುಪಾಲರ (ಗ್ರೇಡ್-1) ಹುದ್ದೆಗಳಿಗೆ ನೇರ ನೇಮಕಾತಿಯಲ್ಲಿ ಆಯ್ಕೆಯಾಗಿರುವ 267 ಮಂದಿ ಉಪನ್ಯಾಸಕರಿಗೆ ಅಂತಿಮ ಆಯ್ಕೆ ಪಟ್ಟಿ ಪ್ರಕಟವಾಗಿ ಏಳು ತಿಂಗಳು ಕಳೆದರೂ ಇಂದಿಗೂ ನೇಮಕಾತಿ ಆದೇಶ ಸಿಕ್ಕಿಲ್ಲ.
ಸರ್ಕಾರದ ವಿಳಂಬ ನೀತಿಯಿಂದಾಗಿ ಆಯ್ಕೆಯಾದ ಅಭ್ಯರ್ಥಿಗಳು ತೀವ್ರ ಆರ್ಥಿಕ ಹಾಗೂ ಮಾನಸಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.
2022ರಲ್ಲಿ ಶುರುವಾದ ಪ್ರಕ್ರಿಯೆ:
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು 2022ರ ಡಿಸೆಂಬರ್ 13ರಂದು ಈ ನೇಮಕಾತಿ ಅಧಿಸೂಚನೆ ಹೊರಡಿಸಿತ್ತು. ಬಳಿಕ 2023ರ ಜುಲೈ 30ರಂದು ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಯಿತು. ತಾತ್ಕಾಲಿಕ ಮತ್ತು ಅಂತಿಮ ಮೆರಿಟ್ ಪಟ್ಟಿ, ಶೈಕ್ಷಣಿಕ ಅರ್ಹತೆಗಳ ಪರಿಶೀಲನೆ ಮುಂತಾದ ಎಲ್ಲಾ ನಿಯಮಾವಳಿಗಳು ಮುಗಿದ ನಂತರ 2026ರ ಜನವರಿ 31ರಂದು ಅಂತಿಮ ಆಯ್ಕೆ ಪಟ್ಟಿಯನ್ನು ಬಿಡುಗಡೆ ಮಾಡಲಾಯಿತು. ಫೆಬ್ರವರಿ 17ರಂದು ರಾಜ್ಯ ಗೆಜೆಟ್‌ನಲ್ಲಿಯೂ ಪಟ್ಟಿ ಪ್ರಕಟವಾಯಿತು.

ತರಬೇತಿ ಮುಗಿದರೂ ಸಿಗದ ಪೋಸ್ಟಿಂಗ್:
ಆಯ್ಕೆಯಾದ 267 ಶಿಕ್ಷಕರಲ್ಲಿ 231 ಮಂದಿ ಮಿಕ್ಕುಳಿದ ಮೂಲ ವೃಂದದವರಾಗಿದ್ದರೆ, 36 ಮಂದಿ ಕಲ್ಯಾಣ ಕರ್ನಾಟಕ ಕೋಟಾದವರಾಗಿದ್ದಾರೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಧಾರವಾಡದ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಅಕಾಡೆಮಿಯಲ್ಲಿ ಮೂರು ಬ್ಯಾಚ್‌ಗಳಲ್ಲಿ 15 ದಿನಗಳ ತರಬೇತಿಯನ್ನೂ ನೀಡಲಾಗಿದ್ದು, ಕೊನೆಯ ಬ್ಯಾಚ್‌ನ ತರಬೇತಿಯು ಮೇ 6, 2026 ರಂದೇ ಮುಕ್ತಾಯಗೊಂಡಿದೆ. ಆದಾಗ್ಯೂ, ಇಂದಿಗೂ ಸ್ಥಳ ನಿಯೋಜನೆ ಹಾಗೂ ಅಧಿಕೃತ ನೇಮಕಾತಿ ಆದೇಶ ನೀಡಿಲ್ಲ.
ಕೆಲಸ ಕಳೆದುಕೊಂಡು ಬೀದಿಗೆ ಬಿದ್ದ ಖಾಸಗಿ ಉಪನ್ಯಾಸಕರು:
ಆಯ್ಕೆಯಾದ 267 ಮಂದಿಯಲ್ಲಿ 28 ಮಂದಿ ಖಾಸಗಿ ಅನುದಾನರಹಿತ ಕಾಲೇಜುಗಳಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದರು. ಜನವರಿಯಲ್ಲಿ ಆಯ್ಕೆ ಪಟ್ಟಿ ಪ್ರಕಟವಾದ ತಕ್ಷಣವೇ ಸರ್ಕಾರಿ ಕೆಲಸದ ನಿರೀಕ್ಷೆಯಲ್ಲಿದ್ದ 26 ಉಪನ್ಯಾಸಕರು ತಮ್ಮ ಖಾಸಗಿ ಕಾಲೇಜುಗಳ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಕಳೆದ 7 ತಿಂಗಳುಗಳಿಂದ ಅವರಿಗೆ ಯಾವುದೇ ಆದಾಯವಿಲ್ಲದೆ ನಿರುದ್ಯೋಗಿಗಳಾಗಿದ್ದು, ಕುಟುಂಬ ನಿರ್ವಹಣೆ ಮಾಡಲಾಗದೆ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಉಳಿದ ಇಬ್ಬರು ನೊಟೀಸ್ ಅವಧಿಯಲ್ಲಿದ್ದಾರೆ.
ಭರವಸೆಯಲ್ಲೇ ಉಳಿದ ಸಚಿವರ ಮಾತು:
ಸೆಪ್ಟೆಂಬರ್ 5ರ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಅವರು, “ಒಂದು ವಾರದೊಳಗೆ ಪ್ರಾಂಶುಪಾಲರ ನೇಮಕಾತಿ ಆದೇಶ ನೀಡಲಾಗುವುದು” ಎಂದು ಭರವಸೆ ನೀಡಿದ್ದರು. ಆದರೆ ವಾರಗಳು ಕಳೆದರೂ ಯಾವುದೇ ಅಧಿಕೃತ ಆದೇಶ ಹೊರಬಿದ್ದಿಲ್ಲ.
ನೊಂದ ಶಿಕ್ಷಕರ ಆಕ್ರೋಶ:
“ಪಿಎಚ್‌ಡಿ ಪೂರೈಸಿ, 15 ವರ್ಷಗಳಿಗೂ ಹೆಚ್ಚು ಕಾಲ ಬೋಧನಾ ಅನುಭವ ಹೊಂದಿರುವ ನಮ್ಮಂತಹ ಹಿರಿಯ ಉಪನ್ಯಾಸಕರು ಹಲವರು ಈಗಾಗಲೇ ನಿವೃತ್ತಿಯಾಗಿದ್ದಾರೆ, ಇನ್ನೂ ಕೆಲವರು ನಿವೃತ್ತಿಯ ಅಂಚಿನಲ್ಲಿದ್ದಾರೆ. ಎಲ್ಲಾ ಹಂತಗಳು ಮುಗಿದಿದ್ದರೂ ನೇಮಕಾತಿ ಆದೇಶ ನೀಡದಿರುವುದು ಆಡಳಿತಾತ್ಮಕ ವೈಫಲ್ಯ. ನಮಗೆ ಇನ್ನೊಂದು ಆಶ್ವಾಸನೆ ಬೇಡ; ನೇಮಕಾತಿ ಪೂರ್ಣಗೊಳ್ಳುವ ದಿನಾಂಕ ಮತ್ತು ತಕ್ಷಣ ಜಾರಿಗೆ ಬರುವ ಸಮಯಬದ್ಧ ಆದೇಶ ಬೇಕು” ಎಂದು ನೊಂದ ಶಿಕ್ಷಕರು ಆಗ್ರಹಿಸಿದ್ದಾರೆ.
ಸರ್ಕಾರಿ ಕಾಲೇಜುಗಳಲ್ಲಿ ಪ್ರಾಂಶುಪಾಲರ ಕೊರತೆಯಿಂದ ಶೈಕ್ಷಣಿಕ ಗುಣಮಟ್ಟ ಕುಸಿಯುತ್ತಿದ್ದು, ಸರ್ಕಾರ ತಕ್ಷಣವೇ ಎಚ್ಚೆತ್ತುಕೊಂಡು ಅಂತಿಮ ಆದೇಶಗಳನ್ನು ವಿತರಿಸಬೇಕೆಂದು ಅಭ್ಯರ್ಥಿಗಳು ಒತ್ತಾಯಿಸಿದ್ದಾರೆ.





















