ತುಮಕೂರು, ಸೆ.17 www.bengaluruwire.com: ರಾಜ್ಯದ ಬಹುನಿರೀಕ್ಷಿತ ಹಾಗೂ ಮಹತ್ವಾಕಾಂಕ್ಷಿ ಎತ್ತಿನಹೊಳೆ ಯೋಜನೆಯ ಮೂಲಕ ನವೆಂಬರ್ ಅಂತ್ಯದೊಳಗೆ ತುಮಕೂರು ಜಿಲ್ಲೆಗೆ ನೀರು ಹರಿಸಲು ಸರ್ಕಾರ ಬದ್ಧವಾಗಿದೆ ಎಂದು ಜಲಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದ್ದಾರೆ.
ಗುರುವಾರ ತುಮಕೂರಿನ ಗುಬ್ಬಿ ತಾಲೂಕಿನ ಕಂಚಿಗಾನಹಳ್ಳಿಯಲ್ಲಿ ನಡೆಯುತ್ತಿರುವ ಎತ್ತಿನಹೊಳೆ ಯೋಜನೆಯ ‘ಪ್ಯಾಕೇಜ್ 11’ರ ಕಾಮಗಾರಿ ಸ್ಥಳಕ್ಕೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಅವರು ಮಾತನಾಡಿದರು.
ಕೇಂದ್ರದಿಂದ ಶೀಘ್ರವೇ ಅರಣ್ಯ ಇಲಾಖೆ ಅನುಮತಿ:

ಕಂಚಿಗಾನಹಳ್ಳಿ ಭಾಗದ ಅರಣ್ಯ ವ್ಯಾಪ್ತಿಯ 1.9 ಕಿ.ಮೀ ಜಾಗದಲ್ಲಿ ಕಾಮಗಾರಿ ನಡೆಸಲು ಅಗತ್ಯವಿರುವ 2ನೇ ಹಂತದ (ಸ್ಟೇಜ್ 2) ಅನುಮತಿಯ ಕಡತಗಳು ಈಗಾಗಲೇ ನವದೆಹಲಿ ತಲುಪಿವೆ. ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ಖುದ್ದು ಅರ್ಜಿ ಸಲ್ಲಿಸಿದ್ದು, ಇನ್ನೊಂದು ವಾರದಲ್ಲಿ ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆಯಿಂದ ಅಂತಿಮ ಒಪ್ಪಿಗೆ ದೊರೆಯುವ ವಿಶ್ವಾಸವಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.

ಗುಣಮಟ್ಟಕ್ಕೆ ಕಟ್ಟುನಿಟ್ಟಿನ ಸೂಚನೆ:
ಗುರುತ್ವಾಕರ್ಷಣಾ ಕಾಲುವೆ (ಗ್ರಾವಿಟಿ ಕೆನಾಲ್) ನಿರ್ಮಾಣದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ಗುಣಮಟ್ಟ ಕಾಪಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. 28 ಮೀಟರ್ ಆಳದ ಭೂಮಿ ಅಗೆಯುವ (ಡೀಪ್ ಕಟ್) ಜಾಗದಲ್ಲಿ ಮಣ್ಣು ಕುಸಿಯದಂತೆ ‘ಕಟ್ ಅಂಡ್ ಕವರ್’ ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಬೇಕು. ತಾತ್ಕಾಲಿಕವಾಗಿ 10 ಎಕರೆ ಜಾಗದಲ್ಲಿ ಮಣ್ಣು ಹಾಕಿ, ನಂತರ ಮರಳಿ ತುಂಬುವ ಪ್ರಕ್ರಿಯೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಗುತ್ತಿಗೆದಾರರಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ ಎಂದರು.
ಅಕ್ಟೋಬರ್ 15ರ ವೇಳೆಗೆ ತುಮಕೂರು ಭಾಗದ ಕಾಮಗಾರಿ ಸಂಪೂರ್ಣ ಮುಗಿಯಲಿದ್ದು, ನವೆಂಬರ್ ಅಂತ್ಯದ ವೇಳೆಗೆ ಜಿಲ್ಲೆಗೆ ಶೇಕಡಾ 100ರಷ್ಟು ನೀರು ಪೂರೈಕೆಯಾಗಲಿದೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.
ಬಿಕ್ಕೆಗುಡ್ಡ ಯೋಜನೆ ಶೀಘ್ರ ಲೋಕಾರ್ಪಣೆ:
ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ 8 ಸಾವಿರ ಕೋಟಿ ರೂ. ವೆಚ್ಚದಲ್ಲಿ ಆರಂಭವಾದ ಎತ್ತಿನಹೊಳೆ ಯೋಜನೆ ಪ್ರಸ್ತುತ 23 ಸಾವಿರ ಕೋಟಿ ರೂ. ವೆಚ್ಚಕ್ಕೆ ತಲುಪಿದೆ. ಆದಾಗ್ಯೂ ರೈತರ ಹಿತದೃಷ್ಟಿಯಿಂದ ಯೋಜನೆಯನ್ನು ವೇಗವಾಗಿ ಪೂರ್ಣಗೊಳಿಸಲಾಗುತ್ತಿದೆ. ಇದರೊಂದಿಗೆ ವಿಳಂಬವಾಗಿದ್ದ ‘ಬಿಕ್ಕೆಗುಡ್ಡ ಯೋಜನೆ’ಯನ್ನು ಮುಂದಿನ ಎರಡು ತಿಂಗಳಲ್ಲಿ ಪೂರ್ಣಗೊಳಿಸಿ ಲೋಕಾರ್ಪಣೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ಹೇಮಾವತಿ ಲಿಂಕ್ ಕೆನಾಲ್ ವಿವಾದ ಪರಿಹಾರದ ಭರವಸೆ:
ಹೇಮಾವತಿ ಲಿಂಕ್ ಕೆನಾಲ್ ಕೈಬಿಡುವಂತೆ ರೈತರು ನೀಡಿರುವ ಮನವಿ ಕುರಿತು ಮಾತನಾಡಿದ ಅವರು, “ತುಮಕೂರು ಮತ್ತು ರಾಮನಗರ ಎರಡೂ ಭಾಗದ ರೈತರು ನಮಗೆ ಮುಖ್ಯ. ಯಾರೊಬ್ಬರಿಗೂ ಅನ್ಯಾಯವಾಗದಂತೆ ಮುಖ್ಯಮಂತ್ರಿಗಳ ಜತೆ ಚರ್ಚಿಸಿ ಎಲ್ಲರಿಗೂ ನ್ಯಾಯ ಒದಗಿಸುವ ಕ್ರಮ ಕೈಗೊಳ್ಳಲಾಗುವುದು” ಎಂದರು.
ಮೈಕ್ರೋ ಫೈನಾನ್ಸ್ ಸುಳಿಗೆ ಸಿಲುಕದಂತೆ ಕಿವಿಮಾತು:
ಇದೇ ವೇಳೆ ರೈತರ ಆರ್ಥಿಕ ಶೋಷಣೆ ತಪ್ಪಿಸಲು ಮೈಕ್ರೋ ಫೈನಾನ್ಸ್ ಸಾಲದ ಮೊರೆ ಹೋಗದಂತೆ ರೈತರಿಗೆ ಸಚಿವರು ಮನವಿ ಮಾಡಿದರು. ಕಿರುಬಂಡವಾಳ ಸಂಸ್ಥೆಗಳ ವಿರುದ್ಧ ಲಿಖಿತ ದೂರುಗಳಿಲ್ಲದೆ ಕಾನೂನು ಕ್ರಮ ಜರುಗಿಸುವುದು ಕಷ್ಟಕರವಾಗುವುದರಿಂದ ರೈತರು ಎಚ್ಚರಿಕೆಯಿಂದ ಇರಬೇಕೆಂದು ಕರೆ ನೀಡಿದರು.
ಪರಿಶೀಲನೆ ವೇಳೆ ಗುಬ್ಬಿ ಶಾಸಕ ಹಾಗೂ ಕೆಎಸ್‌ಆರ್‌ಟಿಸಿ ಅಧ್ಯಕ್ಷ ಎಸ್.ಆರ್. ಶ್ರೀನಿವಾಸ್ (ವಾಸು) ಮತ್ತು ನೀರಾವರಿ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.




















