ಬೆಂಗಳೂರು, ಸೆ.27 www.bengaluruwire.com: ರಾಜಧಾನಿ ಬೆಂಗಳೂರಿನ ವಿಜಯನಗರದ ಶ್ರೀ ಬಸವೇಶ್ವರ ಸುಜ್ಞಾನ ಮಂಟಪದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಬೃಹತ್ ‘ವೀರಶೈವ ಲಿಂಗಾಯತ ಧರ್ಮ ಸಂರಕ್ಷಣಾ ಸಮ್ಮೇಳನ’ಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಧಿಕೃತವಾಗಿ ಚಾಲನೆ ನೀಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಡಿ.ಕೆ. ಶಿವಕುಮಾರ್ ಅವರು, ಸಮಾಜದಲ್ಲಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಮೌಲ್ಯಗಳ ರಕ್ಷಣೆ ಇಂದಿನ ಅಗತ್ಯವಾಗಿದ್ದು, ವೀರಶೈವ-ಲಿಂಗಾಯತ ಪರಂಪರೆ ನಾಡಿನ ಐಕ್ಯತೆ ಹಾಗೂ ಅಭಿವೃದ್ಧಿಗೆ ನೀಡಿರುವ ಕೊಡುಗೆ ಅಪಾರ ಎಂದು ಸ್ಮರಿಸಿದರು. ಸಮಾಜದ ಶಾಂತಿ, ಸೌಹಾರ್ದತೆ ಮತ್ತು ಧರ್ಮ ಸಂರಕ್ಷಣೆಯ ಕಾರ್ಯಗಳಿಗೆ ಸರ್ಕಾರ ಸದಾ ಬೆಂಬಲವಾಗಿ ನಿಲ್ಲಲಿದೆ ಎಂದು ಅವರು ತಿಳಿಸಿದರು.
ಪಂಚಪೀಠಗಳ ಜಗದ್ಗುರುಗಳ ಸಾನ್ನಿಧ್ಯ:
ಈ ಐತಿಹಾಸಿಕ ಸಮ್ಮೇಳನದಲ್ಲಿ ವೀರಶೈವ ಧರ್ಮದ ಪಂಚಪೀಠಗಳ ಪರಮಪೂಜ್ಯ ಜಗದ್ಗುರುಗಳು ಸಾನ್ನಿಧ್ಯ ವಹಿಸಿದ್ದರು:

ರಂಭಾಪುರಿ ಪೀಠದ ಶ್ರೀ ಪ್ರಸನ್ನ ರೇಣುಕ ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು, ಉಜ್ಜಯಿನಿ ಪೀಠದ ಶ್ರೀ ಸಿದ್ದಲಿಂಗರಾಜ ದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು, ಹಿಮವತ್ ಕೇದಾರ ಪೀಠದ ಶ್ರೀ ಭೀಮಾಶಂಕರಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು,
ಶ್ರೀಶೈಲ ಪೀಠದ ಶ್ರೀ ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು, ಕಾಶಿ ಪೀಠದ ಶ್ರೀ ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು, ಜೊತೆಗೆ ಶ್ರೀ ಷ.ಬ್ರ. ಪ್ರಭು ಸಾರಂಗದೇವ ಶಿವಾಚಾರ್ಯ ಸ್ವಾಮಿಗಳು, ಶ್ರೀ ಗಂಗಾಧರ ಶಿವಾಚಾರ್ಯ ಸ್ವಾಮಿಗಳು, ಡಾ. ಜಯಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿಗಳು, ಸೊಲ್ಲಾಪುರದ ಡಾ. ಜಯಸಿದ್ದ ಶಿವಾಚಾರ್ಯ ಸ್ವಾಮಿಗಳು ಹಾಗೂ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮಿಗಳು ಸೇರಿದಂತೆ ನಾಡಿನ ನೂರಾರು ಮಠಾಧೀಶರು ಪಾಲ್ಗೊಂಡಿದ್ದರು.
ಪ್ರಮುಖ ಗಣ್ಯರ ಉಪಸ್ಥಿತಿ:
ಕಾರ್ಯಕ್ರಮದಲ್ಲಿ ಅರಣ್ಯ ಸಚಿವ ಈಶ್ವರ ಖಂಡ್ರೆ, ಶಾಸಕ ವಿಜಯಾನಂದ ಕಾಶಪ್ಪನವರ್, ಮಾಜಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ವೀಣಾ ಕಾಶಪ್ಪನವರ್ ಸೇರಿದಂತೆ ಸಮಾಜದ ಪ್ರಮುಖ ಮುಖಂಡರು, ಜನಪ್ರತಿನಿಧಿಗಳು ಹಾಗೂ ಅಪಾರ ಸಂಖ್ಯೆಯ ಭಕ್ತಾದಿಗಳು ಪಾಲ್ಗೊಂಡು ಧರ್ಮ ಸಂರಕ್ಷಣೆಯ ಸಂಕಲ್ಪಕ್ಕೆ ಸಾಕ್ಷಿಯಾದರು.



















