ಬೆಂಗಳೂರು, ಸೆ.26 www.bengaluruwire.com: ನಾಗರಿಕ ಆಡಳಿತದ ಜತೆಗೆ ಸೇನಾ ರಂಗದಲ್ಲೂ ಅನುಪಮ ಸೇವೆ ಸಲ್ಲಿಸುತ್ತಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಆಯುಕ್ತ ಮೇಜರ್ ಮಣಿವಣ್ಣನ್ (ಐಎಎಸ್) ಅವರಿಗೆ ರಕ್ಷಣಾ ಸಿಬ್ಬಂದಿ ಮುಖ್ಯಸ್ಥರ (ಸಿಡಿಎಸ್) ಪ್ರಶಂಸಾ ಪತ್ರ (Commendation Card) ನೀಡಿ ಗೌರವಿಸಲಾಗಿದೆ.
ಬೆಂಗಳೂರಿನ 106 ಇನ್‌ಫಾಂಟ್ರಿ ಬೆಟಾಲಿಯನ್ (ಟೆರಿಟೋರಿಯಲ್ ಆರ್ಮಿ) ಪ್ಯಾರಾದಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಜನರಲ್ ಎನ್.ಎಸ್. ರಾಜಾ ಸುಬ್ರಮಣಿ ಅವರು ಮೇಜರ್ ಮಣಿವಣ್ಣನ್ ಅವರಿಗೆ ಅಧಿಕೃತವಾಗಿ ಪ್ರಶಂಸಾ ಪತ್ರ ಪ್ರದಾನ ಮಾಡಿದರು.
ಪ್ರಾದೇಶಿಕ ಸೇನೆಯಲ್ಲಿ ದಶಕದ ಸೇವೆ:
2014ರ ಫೆಬ್ರವರಿ 8ರಂದು 106 ಇನ್‌ಫಾಂಟ್ರಿ ಬೆಟಾಲಿಯನ್ (ಟೆರಿಟೋರಿಯಲ್ ಆರ್ಮಿ) ಪ್ಯಾರಾಕ್ಕೆ ಕಮಿಷನ್ ಪಡೆದ ಮೇಜರ್ ಮಣಿವಣ್ಣನ್, ನಿರಂತರ ಶ್ರಮ, ಕರ್ತವ್ಯ ನಿಷ್ಠೆ ಹಾಗೂ ವಿಶಿಷ್ಟ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ನಾಗರಿಕ ಆಡಳಿತದ ಬಹುಮುಖ್ಯ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸುವ ಜತೆಗೆ, ಪ್ರಾದೇಶಿಕ ಸೇನೆಯ ಕರ್ತವ್ಯಗಳಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡಿರುವುದನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ.

ಒಂದೇ ವರ್ಷದಲ್ಲಿ ಸಿಕ್ಕ ಎರಡನೇ ಮಿಲಿಟರಿ ಮನ್ನಣೆ:
ಪ್ರಸಕ್ತ ವರ್ಷದ ಏಪ್ರಿಲ್‌ನಲ್ಲಿ ಮೇಜರ್ ಮಣಿವಣ್ಣನ್ ಅವರಿಗೆ ಸದರ್ನ್ ಕಮಾಂಡ್‌ನ ಜಿಒಸಿ-ಇನ್-ಸಿ (ಜನರಲ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್) ಅವರಿಂದಲೂ ಪ್ರಶಂಸಾ ಪತ್ರ ಸಂದಿತ್ತು. ಇದೀಗ ಸಿಡಿಎಸ್ ಅವರಿಂದಲೂ ಪ್ರಶಂಸಾ ಪತ್ರ ಲಭಿಸಿರುವುದು ಅವರ ಸೇವಾ ಬದ್ಧತೆಗೆ ಸಾಕ್ಷಿಯಾಗಿದೆ. ಉನ್ನತ ಮಿಲಿಟರಿ ನಾಯಕತ್ವದಿಂದ ದೊರೆತ ಈ ದ್ವಿಮುಖ ಮನ್ನಣೆ, ನಾಗರಿಕ ಆಡಳಿತಾಧಿಕಾರಿಯೊಬ್ಬರು ರಾಷ್ಟ್ರ ರಕ್ಷಣಾ ರಂಗದಲ್ಲಿ ತೋರಿದ ಅಪ್ರತಿಮ ಕೊಡುಗೆಯನ್ನು ಪ್ರತಿಬಿಂಬಿಸಿದೆ.



















