ಬೆಂಗಳೂರು, ಸೆ.25 www.bengaluruwire.com : ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (SIR) ಸೇರಿದಂತೆ ವಿವಿಧ ಸಮೀಕ್ಷೆಗಳಿಗೆ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಶಿಕ್ಷಕರನ್ನು ನಿಯೋಜಿಸುತ್ತಿರುವುದಕ್ಕೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಚುನಾವಣಾ ಆಯೋಗವು ಯಾವುದೇ ಮಾನವೀಯತೆ ಇಲ್ಲದಂತೆ ನಡೆದುಕೊಳ್ಳುತ್ತಿದ್ದು, ಇದರಿಂದ ಶಾಲಾ ಮಕ್ಕಳ ವಿದ್ಯಾಭ್ಯಾಸಕ್ಕೆ ಗಂಭೀರ ಹೊಡೆತ ಬಿದ್ದಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ತಮ್ಮ ಗೃಹ ಕಚೇರಿಯಲ್ಲಿ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವರು, ಶಿಕ್ಷಕರನ್ನು ಶೈಕ್ಷಣಿಕೇತರ ಕರ್ತವ್ಯಗಳಿಂದ ಮುಕ್ತಗೊಳಿಸಲು ಪ್ರತ್ಯೇಕ ಮಸೂದೆ ತರಲು ಸರ್ಕಾರ ಸಿದ್ಧತೆ ನಡೆಸಿದೆ ಎಂದು ಸ್ಪಷ್ಟಪಡಿಸಿದರು.
ಬೋಧನೆಗೆ ಅಡ್ಡಿ: ಪರೀಕ್ಷಾ ಹೊತ್ತಿನಲ್ಲಿ ಶಿಕ್ಷಕರ ಕೊರತೆ:

ಎಸ್‌ಐಆರ್ ಕರ್ತವ್ಯದ ವಿಳಂಬದಿಂದಾಗಿ ಶಾಲೆಗಳಲ್ಲಿ ಬೋಧನಾ ಚಟುವಟಿಕೆಗಳು ಸಂಪೂರ್ಣ ಸ್ಥಗಿತಗೊಂಡಿವೆ. ಸದ್ಯ ಮಧ್ಯವಾರ್ಷಿಕ ಪರೀಕ್ಷೆಗಳು ಆರಂಭವಾಗಿದ್ದು, ಮುಂದಿನ ದಿನಗಳಲ್ಲಿ ಪೂರ್ವಭಾವಿ ಪರೀಕ್ಷೆಗಳು ಎದುರಾಗಲಿವೆ. ಇಂತಹ ನಿರ್ಣಾಯಕ ಸಂದರ್ಭದಲ್ಲಿ ಶಿಕ್ಷಕರು ಶಾಲೆಯಲ್ಲಿ ಲಭ್ಯವಿಲ್ಲದಿದ್ದರೆ ಫಲಿತಾಂಶದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಸಚಿವರು ಕಳವಳ ವ್ಯಕ್ತಪಡಿಸಿದರು.
ಮಧ್ಯಾಹ್ನದ ಊಟದ ನಂತರ ಮಕ್ಕಳನ್ನು ಮನೆಗೆ ಕಳುಹಿಸುತ್ತಿರುವ ಬಗ್ಗೆ ಪೋಷಕರಿಂದ ವ್ಯಾಪಕ ದೂರುಗಳು ಬಂದಿವೆ. ಈ ಬಗ್ಗೆ ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಹಾಗೂ CJP ಪ್ರತಿನಿಧಿ ಆಶುತೋಷ್ ರಾಂಕಾ ಅವರೂ ಸರ್ಕಾರದ ಗಮನ ಸೆಳೆದಿದ್ದಾರೆ. ಚುನಾವಣಾ ಆಯೋಗಕ್ಕೆ ಪತ್ರ ಬರೆದು ಮನವಿ ಮಾಡಿದರೂ ಯಾವುದೇ ಸ್ಪಂದನೆ ದೊರೆತಿಲ್ಲ ಎಂದು ಸಚಿವರು ಬೇಸರ ವ್ಯಕ್ತಪಡಿಸಿದರು.
ಅನ್ಯಕಾರ್ಯಗಳಿಗೆ ಶಿಕ್ಷಕರ ಬಳಕೆ ತಡೆಗೆ ಶೀಘ್ರ ವಿಧೇಯಕ:
ಶಿಕ್ಷಕರ ಮುಖ್ಯ ಜವಾಬ್ದಾರಿ ಪಾಠ ಬೋಧನೆ ಮಾತ್ರ. ಜಾತಿ ಗಣತಿ, ಆಡಳಿತಾತ್ಮಕ ಸಮೀಕ್ಷೆಗಳು ಹಾಗೂ ಚುನಾವಣಾ ಕರ್ತವ್ಯಗಳಿಗೆ ಶಿಕ್ಷಕರನ್ನು ದುರ್ಬಳಕೆ ಮಾಡಿಕೊಳ್ಳುವುದನ್ನು ತಡೆಯಲು ನೂತನ ವಿಧೇಯಕ ರೂಪಿಸಲಾಗುತ್ತಿದೆ. ಈಗಾಗಲೇ ಅಧಿಕಾರಿಗಳ ಮಟ್ಟದಲ್ಲಿ ಚರ್ಚೆ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆದು ವಿಧಾನಮಂಡಲ ಅಧಿವೇಶನದಲ್ಲಿ ಕಾಯ್ದೆ ರೂಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.
ಶೂ-ಸಾಕ್ಸ್ ವಿವಾದಕ್ಕೆ ಸ್ಪಷ್ಟನೆ:
ಶಾಲಾ ಮಕ್ಕಳಿಗೆ ವಿತರಿಸಲಾದ ಶೂ ಮತ್ತು ಸಾಕ್ಸ್‌ಗಳ ಗುಣಮಟ್ಟ ಕಳಪೆ ಎಂಬ ಆರೋಪವನ್ನು ಸಚಿವರು ತಳ್ಳಿಹಾಕಿದರು. “ಗುಣಮಟ್ಟದಲ್ಲಿ ಯಾವುದೇ ರಾಜಿ ಇಲ್ಲ, ಆದರೆ ಅಳತೆಯಲ್ಲಿ (ಸೈಜ್) ವ್ಯತ್ಯಾಸವಾಗಿರುವುದು ನಿಜ. ಈ ಸಮಸ್ಯೆಯನ್ನು ಸರಿಪಡಿಸಲು ಈಗಾಗಲೇ ಎಲ್ಲಾ ಜಿಲ್ಲಾ ಸಿಇಒಗಳ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಅಳತೆ ಸಮಸ್ಯೆಯಿರುವ ಮಕ್ಕಳಿಗೆ ತಕ್ಷಣವೇ ಹೊಸ ಶೂ ಮತ್ತು ಸಾಕ್ಸ್ ಬದಲಾಯಿಸಿಕೊಡಲು ಸೂಚಿಸಲಾಗಿದೆ” ಎಂದು ಮಧು ಬಂಗಾರಪ್ಪ ಮಾಹಿತಿ ನೀಡಿದರು.



















