ನವದೆಹಲಿ, ಸೆ.20 www.bengaluruwire.com: ದೇಶಾದ್ಯಂತ ಸಬ್ಸಿಡಿ ಸಹಿತ ಗೃಹಬಳಕೆಯ ಎಲ್‌ಪಿಜಿ (LPG) ಸಿಲಿಂಡರ್ ಪಡೆಯುವ ಗ್ರಾಹಕರಿಗೆ ಕೇಂದ್ರ ಸರ್ಕಾರ ಮಹತ್ವದ ಸೂಚನೆ ನೀಡಿದೆ.
ಅಕ್ಟೋಬರ್ 1ರಿಂದ ಸಬ್ಸಿಡಿ ಸೌಲಭ್ಯವನ್ನು ಮುಂದುವರಿಸಲು ಗ್ರಾಹಕರು ತಮ್ಮ ‘ಬಯೋಮೆಟ್ರಿಕ್ ಆಧಾರ್ ದೃಢೀಕರಣ’ (Biometric Aadhaar Authentication – BAA) ಪೂರ್ಣಗೊಳಿಸುವುದು ಕಡ್ಡಾಯವಾಗಿದೆ ಎಂದು ಸರ್ಕಾರ ಶನಿವಾರ ಪ್ರಕಟಣೆಯಲ್ಲಿ ತಿಳಿಸಿದೆ.
ಅನರ್ಹ ಫಲಾನುಭವಿಗಳನ್ನು ಹೊರಗಿಡಲು, ನಕಲಿ ಗ್ಯಾಸ್ ಸಂಪರ್ಕಗಳನ್ನು ತಡೆಗಟ್ಟಲು ಮತ್ತು ಅರ್ಹ ಗ್ರಾಹಕರಿಗೆ ನೇರವಾಗಿ ಸಬ್ಸಿಡಿ ತಲುಪುವಂತೆ ಮಾಡಲು ಈ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.
ನಿಯಮ ಯಾರಿಗೆ ಅನ್ವಯ?:

ಪ್ರಧಾನ ಮಂತ್ರಿ ಉಜ್ವಲ ಯೋಜನೆ (PMUY) ಫಲಾನುಭವಿಗಳು ಸೇರಿದಂತೆ ಎಲ್ಲಾ ಗೃಹಬಳಕೆಯ ಎಲ್‌ಪಿಜಿ ಗ್ರಾಹಕರಿಗೆ ಈ ನಿಯಮ ಅನ್ವಯವಾಗಲಿದೆ.
ನಿಗದಿತ ದಿನಾಂಕದೊಳಗೆ ಈ ಪ್ರಕ್ರಿಯೆ ಪೂರ್ಣಗೊಳಿಸದಿದ್ದರೆ, ಸಿಲಿಂಡರ್ ಬುಕಿಂಗ್ ಮಾಡಬಹುದಾದರೂ ಸಬ್ಸಿಡಿ ಮೊತ್ತ ಬ್ಯಾಂಕ್ ಖಾತೆಗೆ ಜಮೆಯಾಗುವುದು ಸ್ಥಗಿತಗೊಳ್ಳುವ ಸಾಧ್ಯತೆಯಿದೆ.
ದೃಢೀಕರಣ ಪೂರ್ಣಗೊಳಿಸುವುದು ಹೇಗೆ?:
ಗ್ರಾಹಕರು ತಮ್ಮ ಬಯೋಮೆಟ್ರಿಕ್ ಇ-ಕೆವೈಸಿ (e-KYC) ಪ್ರಕ್ರಿಯೆಯನ್ನು ಸುಲಭವಾಗಿ ಪೂರ್ಣಗೊಳಿಸಲು ತೈಲ ಕಂಪನಿಗಳು ಹಲವು ಆಯ್ಕೆಗಳನ್ನು ನೀಡಿವೆ:
ಗ್ಯಾಸ್ ಏಜೆನ್ಸಿ ಕಚೇರಿಗಳಲ್ಲಿ: ಗ್ರಾಹಕರು ತಮ್ಮ ಹತ್ತಿರದ ಸಂಬಂಧಪಟ್ಟ ಎಲ್‌ಪಿಜಿ ವಿತರಕರ (Indane, Bharat Gas, HP Gas) ಕಚೇರಿಗೆ ತೆರಳಿ ಬಯೋಮೆಟ್ರಿಕ್ (ಬೆರಳಚ್ಚು ಅಥವಾ ಕಣ್ಣಿನ ಸ್ಕ್ಯಾನಿಂಗ್) ಮೂಲಕ ದೃಢೀಕರಣ ಮಾಡಿಸಿಕೊಳ್ಳಬಹುದು.
ಸಿಲಿಂಡರ್ ಡೆಲಿವರಿ ವೇಳೆ: ಸಿಲಿಂಡರ್ ವಿತರಣೆ ಮಾಡುವ ಡೆಲಿವರಿ ಸಿಬ್ಬಂದಿಯ ಬಳಿ ಇರುವ ಮೊಬೈಲ್ ಆ್ಯಪ್ ಮೂಲಕವೂ ಇ-ಕೆವೈಸಿ ಮಾಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗುತ್ತಿದೆ.
ತೈಲ ಕಂಪನಿಗಳ ಮೊಬೈಲ್ ಆ್ಯಪ್: ಆಧಾರ್ ಮುಖ ಗುರುತಿಸುವಿಕೆ (Face Authentication) ತಂತ್ರಜ್ಞಾನ ಬಳಸಿ ಆಯಾ ತೈಲ ಕಂಪನಿಗಳ ಅಧಿಕೃತ ಮೊಬೈಲ್ ಆ್ಯಪ್ ಮೂಲಕ ಮನೆಯಲ್ಲೇ ಕುಳಿತು ಪರಿಶೀಲನೆ ಪೂರ್ಣಗೊಳಿಸಬಹುದು.
ಗ್ರಾಹಕರಿಗೆ ತುರ್ತು ಸಲಹೆ:
ಕೊನೆಯ ಕ್ಷಣದ ಗೊಂದಲ ಮತ್ತು ತಾಂತ್ರಿಕ ದಟ್ಟಣೆಯನ್ನು ತಪ್ಪಿಸಲು ಗ್ರಾಹಕರು ಅಕ್ಟೋಬರ್ 1ರ ಗಡುವಿಗಿಂತ ಮುಂಚಿತವಾಗಿಯೇ ತಮ್ಮ ಆಧಾರ್ ಕಾರ್ಡ್ ಹಾಗೂ ಗ್ರಾಹಕ ಸಂಖ್ಯೆಯೊಂದಿಗೆ ಹತ್ತಿರದ ಏಜೆನ್ಸಿಯನ್ನು ಸಂಪರ್ಕಿಸಿ ಪ್ರಕ್ರಿಯೆ ಮುಗಿಸಿಕೊಳ್ಳುವಂತೆ ತೈಲ ಕಂಪನಿಗಳು ಮನವಿ ಮಾಡಿವೆ.





















