ಬೆಂಗಳೂರು, ಸೆ.20 www.bengaluruwire.com: ರಾಜಧಾನಿಯ ನಾಗರಿಕರಿಗೆ ತ್ವರಿತ, ಸುಲಭ ಹಾಗೂ ಪಾರದರ್ಶಕವಾಗಿ ಇನ್ನು ಮುಂದೆ ಕೇವಲ 30 ನಿಮಿಷಗಳಲ್ಲೇ ಆನ್‌ಲೈನ್ ಮೂಲಕ ನಕ್ಷೆ ಮಂಜೂರಾತಿ ದೊರೆಯಲಿದೆ.
50×80 ಅಡಿ ವರೆಗಿನ ವಸತಿ ನಿವೇಶನಗಳಲ್ಲಿ ಗರಿಷ್ಠ 4 ವಸತಿ ಘಟಕಗಳವರೆಗೆ ನಿರ್ಮಾಣವಾಗುವ ಮನೆಗಳಿಗೆ ಸಂಪೂರ್ಣ ಸ್ವಯಂಚಾಲಿತವಾಗಿ ನಕ್ಷೆ ಮಂಜೂರಾತಿ ನೀಡುವ ‘ನಂಬಿಕೆ ನಕ್ಷೆ 2.0’ ತಂತ್ರಾಂಶ ವ್ಯವಸ್ಥೆಯನ್ನು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವರಾದ ಕೃಷ್ಣ ಬೈರೇಗೌಡ ಅವರು ಶನಿವಾರ ಅಧಿಕೃತವಾಗಿ ಲೋಕಾರ್ಪಣೆಗೊಳಿಸಿದರು.
ಈ ಹಿಂದೆ ಕಟ್ಟಡ ನಕ್ಷೆ ಅನುಮೋದನೆ ಪಡೆಯಲು ನಾಗರಿಕರು ಕಚೇರಿಗಳಿಗೆ ಅಲೆದಾಡಿ 2 ರಿಂದ 3 ತಿಂಗಳು ಕಾಯಬೇಕಿತ್ತು. ಆದರೆ ಇದೀಗ ನಿಯಮಾನುಸಾರ ಸಲ್ಲಿಕೆಯಾಗುವ ನಕ್ಷೆಗಳಿಗೆ ಕೇವಲ 30 ನಿಮಿಷಗಳಲ್ಲೇ ಆನ್‌ಲೈನ್ ಮೂಲಕ ಮಂಜೂರಾತಿ ದೊರೆಯಲಿದೆ.
‘ನಂಬಿಕೆ ನಕ್ಷೆ 2.0’ ವ್ಯವಸ್ಥೆಯ ಪ್ರಮುಖ ಮುಖ್ಯಾಂಶಗಳು:

4000 ಚದರ ಅಡಿವರೆಗಿನ ನಿವೇಶನಗಳಿಗೆ ಅನ್ವಯ: ಗರಿಷ್ಠ 50×80 ಅಡಿ (4000 ಚದರ ಅಡಿ) ವಿಸ್ತೀರ್ಣದ ನಿವೇಶನಗಳಲ್ಲಿ ನಿರ್ಮಿಸುವ 4 ವಸತಿ ಘಟಕಗಳವರೆಗಿನ ಕಟ್ಟಡಗಳಿಗೆ ಈ ಸೌಲಭ್ಯ ಸಿಗಲಿದೆ.
ಅರ್ಹ ಆರ್ಕಿಟೆಕ್ಟ್ ಮೂಲಕ ಸಲ್ಲಿಕೆ: ಮಾನ್ಯತೆ ಪಡೆದ ವಾಸ್ತುಶಿಲ್ಪಿ (Architect) ಆನ್‌ಲೈನ್ ಮೂಲಕ ನಕ್ಷೆಯನ್ನು ಸಲ್ಲಿಸಬೇಕು. ನಿಯಮಗಳು ಸರಿಯಾಗಿದ್ದಲ್ಲಿ, ವ್ಯವಸ್ಥೆಯು ಕೇವಲ ಅರ್ಧ ಗಂಟೆಯಲ್ಲಿ ಸ್ವಯಂಚಾಲಿತವಾಗಿ ಅನುಮತಿ ನೀಡುತ್ತದೆ.
ಇ-ಖಾತಾ ದಾಖಲೆಗಳ ಮರು-ಅಪ್‌ಲೋಡ್ ಇಲ್ಲ: ಸಾರ್ವಜನಿಕರು ಪ್ರತ್ಯೇಕವಾಗಿ ಆಸ್ತಿ ದಾಖಲೆಗಳನ್ನು ಅಪ್‌ಲೋಡ್ ಮಾಡುವ ಪ್ರಮೇಯವಿರುವುದಿಲ್ಲ. ಇ-ಖಾತಾ ಸಂಖ್ಯೆ ನಮೂದಿಸಿದ ತಕ್ಷಣ ವ್ಯವಸ್ಥೆಯೇ ಆಸ್ತಿಯ ಮಾಲೀಕತ್ವದ ವಿವರಗಳನ್ನು ಪಡೆದುಕೊಳ್ಳುತ್ತದೆ.
ಮಧ್ಯವರ್ತಿಗಳ ಹಾವಳಿಗೆ ಬ್ರೇಕ್: ಪ್ರಕ್ರಿಯೆಯು ಸಂಪೂರ್ಣ ಡಿಜಿಟಲೀಕರಣಗೊಂಡಿರುವುದರಿಂದ ಕಚೇರಿಗಳಿಗೆ ಅಲೆದಾಡುವ ಮತ್ತು ಲಂಚ, ಶೋಷಣೆಗಳಿಗೆ ತುತ್ತಾಗುವ ಅಪಾಯ ತಪ್ಪಲಿದೆ.
ದುರುಪಯೋಗವಾದರೆ ಕಠಿಣ ಕ್ರಮದ ಎಚ್ಚರಿಕೆ:
ನಾಗರಿಕರು ಮತ್ತು ಅರ್ಹ ವಾಸ್ತುಶಿಲ್ಪಿಗಳ ಮೇಲೆ ನಂಬಿಕೆಯಿಟ್ಟು ಈ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಒಂದು ವೇಳೆ ನಿಯಮ ಉಲ್ಲಂಘಿಸಿ ಅಥವಾ ಸುಳ್ಳು ಮಾಹಿತಿ ನೀಡಿ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಂಡರೆ ಅಂತಹವರ ವಿರುದ್ಧ ಕಠಿಣ ಹಾಗೂ ದುಬಾರಿ ದಂಡ/ಶಿಕ್ಷೆ ವಿಧಿಸಲಾಗುವುದು ಎಂದು ಸಚಿವರು ಎಚ್ಚರಿಸಿದ್ದಾರೆ.
ಹಂತ-ಹಂತವಾಗಿ ವಿಸ್ತರಣೆ:
ಪ್ರಸ್ತುತ ಮೊದಲ ಹಂತದಲ್ಲಿ ಆಯ್ದ ಪ್ರದೇಶಗಳಲ್ಲಿ ಪ್ರಾಯೋಗಿಕವಾಗಿ (Pilot Project) ಇದನ್ನು ಜಾರಿಗೊಳಿಸಲಾಗಿದ್ದು, ಇದರ ಕಾರ್ಯಕ್ಷಮತೆ ಪರಿಶೀಲಿಸಿ ಶೀಘ್ರದಲ್ಲೇ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಇಡೀ ವ್ಯಾಪ್ತಿಗೆ ವಿಸ್ತರಿಸಲಾಗುತ್ತದೆ. ಮುಂದಿನ ಹಂತದಲ್ಲಿ ವಾಣಿಜ್ಯ ಹಾಗೂ ಬೃಹತ್ ಕಟ್ಟಡಗಳಿಗೂ ಸರಳೀಕೃತ ಡಿಜಿಟಲ್ ಮಂಜೂರಾತಿ ವ್ಯವಸ್ಥೆಯನ್ನು ಜಾರಿಗೆ ತರಲು ಸಿದ್ಧತೆಗಳು ನಡೆದಿವೆ.
ಕಾರ್ಯಕ್ರಮದಲ್ಲಿ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್, ವಿಶೇಷ ಆಯುಕ್ತರಾದ ಮುನೀಶ್ ಮೌದ್ಗಿಲ್, ಪೂರ್ವ ನಗರ ಪಾಲಿಕೆ ಆಯುಕ್ತರಾದ ಡಿ.ಎಸ್. ರಮೇಶ್, ಮುಖ್ಯ ನಗರ ಯೋಜಕರಾದ ಪಿ. ಸುನೀಲ್ ಕುಮಾರ್ ಸೇರಿದಂತೆ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.





















