ರಿಯಾದ್, ಸೆ.16 www.bengluruwire.com:ಜಗತ್ತಿನ ಕೋಟ್ಯಂತರ ಮುಸ್ಲಿಮರ ಪರಮ ಪವಿತ್ರ ಯಾತ್ರಾ ಕ್ಷೇತ್ರವಾದ ಮಕ್ಕಾದ ವಾಯುಪ್ರದೇಶವನ್ನು ಗುರಿಯಾಗಿಸಿಕೊಂಡು ಯೆಮನ್ ಮೂಲದ ಇರಾನ್ ಬೆಂಬಲಿತ ಹೌತಿ ಬಂಡುಕೋರರು ಹಾರಿಸಿದ್ದ ಸ್ಫೋಟಕ ಡ್ರೋನ್ ಒಂದನ್ನು ಸೌದಿ ವಾಯುಪಡೆ ಯಶಸ್ವಿಯಾಗಿ ಹೊಡೆದುರುಳಿಸಿದೆ.
ಮಕ್ಕಾದ ನಿರ್ಬಂಧಿತ ವಾಯುಪ್ರದೇಶದ ದಕ್ಷಿಣ ಭಾಗದಲ್ಲಿ ಸಂಚರಿಸುತ್ತಿದ್ದ ಈ ಡ್ರೋನ್ ಅನ್ನು ರಕ್ಷಣಾ ಪಡೆಗಳು ಹೊಡೆದು ಹಾಕಿ ಸಂಭಾವ್ಯ ಅನಾಹುತವನ್ನು ತಪ್ಪಿಸಿವೆ.
ಘಟನೆಗೆ ಸಂಬಂಧಿಸಿದಂತೆ ಕಟುವಾಗಿ ಪ್ರತಿಕ್ರಿಯಿಸಿರುವ ಸೌದಿ ನೇತೃತ್ವದ ಜಂಟಿ ಮಿಲಿಟರಿ ಒಕ್ಕೂಟದ ವಕ್ತಾರ ಮೇಜರ್ ಜನರಲ್ ತುರ್ಕಿ ಅಲ್-ಮಲ್ಕಿ, “ಇಸ್ಲಾಂನ ಎರಡು ಪವಿತ್ರ ಮಸೀದಿಗಳು ಮತ್ತು ಯಾತ್ರಿಕರ ಭದ್ರತೆಯು ನಮಗೆ ‘ರೆಡ್ ಲೈನ್’ (ಅಂತಿಮ ಗಡಿ). ಈ ಪವಿತ್ರ ಸ್ಥಳಗಳ ರಕ್ಷಣೆಗೆ ಕಠಿಣ ಪ್ರತಿರೋಧ ಕ್ರಮಗಳನ್ನು ಕೈಗೊಳ್ಳಲು ಹಿಂಜರಿಯುವುದಿಲ್ಲ” ಎಂದು ಎಚ್ಚರಿಕೆ ನೀಡಿದ್ದಾರೆ. 2017ರ ಜುಲೈನಲ್ಲಿ ನಡೆದಿದ್ದ ಕ್ಷಿಪಣಿ ದಾಳಿಯ ಯತ್ನದ ಬಳಿಕ, ಮೆಕ್ಕಾವನ್ನು ಗುರಿಯಾಗಿಸಿಕೊಂಡ ಎರಡನೇ ಪ್ರಯತ್ನ ಇದಾಗಿದೆ ಎಂದು ಸೌದಿ ಹೇಳಿದೆ.
ಮಿತ್ರರಾಷ್ಟ್ರಗಳ ಮೌನ – ಮುನ್ನೆಲೆಗೆ ಬಾರದ ಪಾಕಿಸ್ತಾನ, ಟರ್ಕಿ:

ವಿಶ್ವಾದ್ಯಂತ ಮುಸ್ಲಿಮರ ಪವಿತ್ರ ಕ್ಷೇತ್ರವಾಗಿರುವ ಮೆಕ್ಕಾದ ಮೇಲೆ ಈ ರೀತಿಯ ಭದ್ರತಾ ಬೆದರಿಕೆ ಉಂಟಾಗಿದ್ದರೂ, ಇಸ್ಲಾಮಿಕ್ ಒಕ್ಕೂಟ ಹಾಗೂ ಪ್ರಮುಖ ಒಪ್ಪಂದಗಳಲ್ಲಿ ಸೌದಿಯ ಬೆನ್ನಿಗೆ ನಿಲ್ಲಬೇಕಿದ್ದ ಪಾಕಿಸ್ತಾನ ಮತ್ತು ಟರ್ಕಿಯಂತಹ ಪ್ರಮುಖ ರಾಷ್ಟ್ರಗಳಿಂದ ಸಕಾಲಿಕ ಪ್ರತಿಕ್ರಿಯೆ ಅಥವಾ ಬೆಂಬಲ ವ್ಯಕ್ತವಾಗಿಲ್ಲದಿರುವುದು ಜಾಗತಿಕ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಇನ್ನೊಂದೆಡೆ, ಸೌದಿ ಅರೇಬಿಯಾದ ಈ ಆರೋಪವನ್ನು ಹೌತಿ ಬಂಡುಕೋರರ ವಕ್ತಾರರು ನಿರಾಕರಿಸಿದ್ದು, ಇದು “ಹಳೆಯ ಸುಳ್ಳು” ಎಂದು ತಳ್ಳಿಹಾಕಿದ್ದಾರೆ. ಆದಾಗ್ಯೂ, ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಹೊತ್ತಲ್ಲೇ ಪವಿತ್ರ ಕ್ಷೇತ್ರವನ್ನು ಗುರಿಯಾಗಿಸಿ ನಡೆದಿದೆ ಎನ್ನಲಾದ ಈ ದಾಳಿ ಜಾಗತಿಕ ರಾಜತಾಂತ್ರಿಕ ವಲಯದಲ್ಲಿ ಭಾರೀ ತಲ್ಲಣ ಮೂಡಿಸಿದೆ.
ವೈಮಾನಿಕ ದಾಳಿಯು ಮಧ್ಯಪ್ರಾಚ್ಯದಲ್ಲಿ ಭಾರಿ ಬಿಕ್ಕಟ್ಟಿಗೆ ಕಾರಣವಾಗಿದೆ. ಮೆಕ್ಕಾ, ಜೈಡ್ ಮತ್ತು ತೈಫ್ ಪ್ರಾಂತ್ಯಗಳಲ್ಲಿ ಕೆಲಕಾಲ ಹೈ ಅಲರ್ಟ್ ಘೋಷಿಸಲಾಗಿದ್ದು, ಇತಿಹಾಸದಲ್ಲಿ ಮೊದಲ ಬಾರಿಗೆ ಮೆಕ್ಕಾದಲ್ಲಿ ಈ ರೀತಿ ಎಚ್ಚರಿಕೆ ಸೈರನ್ ಮೊಳಗಿದೆ.
ಸೌದಿ ಅರೇಬಿಯಾದ ಈ ಗಂಭೀರ ಆರೋಪವನ್ನು ಹೌತಿ ಬಂಡುಕೋರರು ಸಾರಾಸಗಟಾಗಿ ತಳ್ಳಿಹಾಕಿದ್ದಾರೆ. ಮೆಕ್ಕಾವನ್ನು ಗುರಿಯಾಗಿಸುತ್ತಿದ್ದೇವೆ ಎಂಬುದು ಶುದ್ಧ ಸುಳ್ಳು. ನಮ್ಮ ಮೇಲೆ ಅಪಪ್ರಚಾರ ಮಾಡಲು ಈ ಹಿಂದೆಯೂ ಇಂತಹ ಸುಳ್ಳುಗಳನ್ನು ಹೇಳಲಾಗಿದೆ ಎಂದು ಹೌತಿ ರಾಜಕೀಯ ಬ್ಯೂರೋದ ಹಜೆಮ್ ಅಲ್-ಅಸದ್ ಎಕ್ಸ್ (X) ನಲ್ಲಿ ಬರೆದುಕೊಂಡಿದ್ದಾರೆ.
Video News: https://www.instagram.com/reel/DdVnWNfMACn/?stkn=NzJqcHAwamE4cmI2




















