ಬೆಂಗಳೂರು, ಸೆ.13 www.bengaluruwire.com: ರಾಜಧಾನಿ ಬೆಂಗಳೂರು ಸೇರಿದಂತೆ ಬೆಸ್ಕಾಂ ವ್ಯಾಪ್ತಿಯ ಜಿಲ್ಲೆಗಳಲ್ಲಿ ಗಣೇಶ ಉತ್ಸವ ಆಯೋಜಕರು ಹಾಗೂ ಸಂಘ-ಸಂಸ್ಥೆಗಳಿಗೆ ತಾತ್ಕಾಲಿಕ ವಿದ್ಯುತ್ ಸಂಪರ್ಕ ಕಲ್ಪಿಸಲು ಮತ್ತು ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಕಟ್ಟುನಿಟ್ಟಿನ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಬೆಸ್ಕಾಂ) ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
ಯಾವುದೇ ಅಹಿತಕರ ಘಟನೆಗಳು ಅಥವಾ ವಿದ್ಯುತ್ ಅವಘಡಗಳು ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಲು ಬೆಸ್ಕಾಂ ಕ್ಷೇತ್ರಾಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಲಾಗಿದೆ ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಎನ್. ಶಿವಶಂಕರ ತಿಳಿಸಿದ್ದಾರೆ.
ತ್ವರಿತ ವಿದ್ಯುತ್ ಸಂಪರ್ಕಕ್ಕೆ ಸಮನ್ವಯ:
ಉತ್ಸವ ಸಮಿತಿಗಳಿಗೆ ಯಾವುದೇ ರೀತಿಯ ವಿಳಂಬವಿಲ್ಲದೆ ವಿದ್ಯುತ್ ಸಂಪರ್ಕ ಒದಗಿಸಲು ಬೆಸ್ಕಾಂ ಉಪ ವಿಭಾಗಾಧಿಕಾರಿಗಳು ಸ್ಥಳೀಯ ಪ್ರಾಧಿಕಾರಗಳೊಂದಿಗೆ (ಜಿಬಿಎನ ಪಾಲಿಕೆಗಳು, ಪೊಲೀಸ್ ಇತ್ಯಾದಿ) ಸಮನ್ವಯ ಸಾಧಿಸಿ ಕಾರ್ಯನಿರ್ವಹಿಸಬೇಕು. ಸ್ಥಳೀಯ ಪ್ರಾಧಿಕಾರಗಳಿಂದ ನಿರಾಕ್ಷೇಪಣಾ ಪತ್ರ (NOC) ಲಭಿಸಿದ ತಕ್ಷಣವೇ ಸಂಬಂಧಪಟ್ಟ ಉಪ ವಿಭಾಗಗಳ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್‌ಗಳು (AEE) ಪೆಂಡಾಲ್ ನಿರ್ಮಿಸಲಾಗಿರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಸ್ಥಳವು ಸಂಪೂರ್ಣ ಸುರಕ್ಷಿತವಾಗಿದೆ ಎಂದು ಖಾತ್ರಿಪಡಿಸಿಕೊಂಡ ಬಳಿಕವೇ ವಿದ್ಯುತ್ ಸಂಪರ್ಕಕ್ಕೆ ಅನುಮತಿ ನೀಡಲಾಗುವುದು.

ಇಎಲ್ ಸಿಬಿ ಉಪಕರಣ ಅಳವಡಿಕೆ ಕಡ್ಡಾಯ:
ವಿದ್ಯುತ್ ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಸುವ ಮುನ್ನ ಆಯೋಜಕರು ಇತರ ಎಲ್ಲಾ ಸಂಬಂಧಿತ ಪ್ರಾಧಿಕಾರಗಳಿಂದ ಎನ್‌ಒಸಿ ಪಡೆದಿರಬೇಕು. ಪೆಂಡಾಲ್‌ಗಳಲ್ಲಿ ಮಾಡಲಾಗುವ ವಿದ್ಯುತ್ ವೈರಿಂಗ್ ಕಾರ್ಯವು ಕೇಂದ್ರ ವಿದ್ಯುಚ್ಛಕ್ತಿ ಪ್ರಾಧಿಕಾರದ (CEA) ಕಟ್ಟುನಿಟ್ಟಿನ ಸುರಕ್ಷತಾ ನಿಯಮಾವಳಿಗೆ ಬದ್ಧವಾಗಿರಬೇಕು. ವಿದ್ಯುತ್ ಸರಬರಾಜು ಮಾಡುವ ಮುನ್ನ ಪ್ರತಿ ಪೆಂಡಾಲ್‌ನಲ್ಲಿ ಅರ್ತ್ ಲೀಕೇಜ್ ಸರ್ಕ್ಯೂಟ್ ಬ್ರೇಕರ್ (ELCB) ಉಪಕರಣವನ್ನು ಕಡ್ಡಾಯವಾಗಿ ಅಳವಡಿಸಿರಬೇಕು ಎಂದು ಬೆಸ್ಕಾಂ ಸ್ಪಷ್ಟಪಡಿಸಿದೆ.
ವಿಸರ್ಜನೆ ಮೆರವಣಿಗೆ ಮಾರ್ಗಗಳಲ್ಲಿ ಹದ್ದಿನ ಕಣ್ಣು:
ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ಹಾದುಹೋಗುವ ರಸ್ತೆಗಳಲ್ಲಿ ಯಾವುದೇ ವಿದ್ಯುತ್ ಅವಘಡಗಳು ಜರುಗದಂತೆ ಮುಂಚಿತವಾಗಿಯೇ ಮಾರ್ಗಗಳನ್ನು ಪರಿಶೀಲಿಸಲು ಸೂಚಿಸಲಾಗಿದೆ. ರಸ್ತೆಗಳಲ್ಲಿ ಸಡಿಲವಾಗಿರುವ ಅಥವಾ ಜೋತುಬಿದ್ದಿರುವ ವಿದ್ಯುತ್ ತಂತಿಗಳನ್ನು ತಕ್ಷಣವೇ ಸರಿಪಡಿಸಬೇಕು.
ಮೆರವಣಿಗೆ ಸಾಗುವ ಮಾರ್ಗದ ಅಕ್ಕಪಕ್ಕದಲ್ಲಿರುವ ಟ್ರಾನ್ಸ್‌ಫಾರ್ಮರ್‌ಗಳು (TC), ರಿಂಗ್ ಮೇನ್ ಯುನಿಟ್ (RMU) ಹಾಗೂ ಎಲ್‌ಟಿ ಡಿಸ್ಟ್ರಿಬ್ಯೂಷನ್ ಬಾಕ್ಸ್‌ಗಳು ಸೇರಿದಂತೆ ಪ್ರಮುಖ ವಿದ್ಯುತ್ ಮೂಲಸೌಕರ್ಯಗಳ ಬಳಿ ಸಾರ್ವಜನಿಕರ ಸುರಕ್ಷತೆಗಾಗಿ ಸ್ಪಷ್ಟವಾಗಿ ಕಾಣುವಂತೆ ‘ಡೇಂಜರ್ ಜೋನ್’ (Danger Zone) ಎಂದು ಫಲಕ ಪ್ರದರ್ಶಿಸಲು ಬೆಸ್ಕಾಂ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಮೀಟರ್ ಅಳವಡಿಕೆ ಹಾಗೂ ಪ್ರಮುಖ ನಿರ್ಬಂಧ:
ತಾತ್ಕಾಲಿಕ ವಿದ್ಯುತ್ ಸಂಪರ್ಕಕ್ಕೆ ಪ್ರಿ-ಪೈಡ್ ಮೀಟರ್ ಲಭ್ಯವಿಲ್ಲದಿದ್ದರೆ ಅಥವಾ 30 ದಿನಗಳಿಗಿಂತ ಕಡಿಮೆ ಅವಧಿಯ ಸಂಪರ್ಕವಾಗಿದ್ದರೆ, ಸಾಮಾನ್ಯ ವಿದ್ಯುತ್ ಮೀಟರ್‌ಗಳನ್ನು ಅಳವಡಿಸಿ ತಂತ್ರಾಂಶದ ಮೂಲಕವೇ ಎಲ್ಲಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲಾಗುತ್ತದೆ. ವಿದ್ಯುತ್ ಬಳಕೆಯ ಪ್ರಮಾಣವನ್ನು ಸಾಫ್ಟ್‌ವೇರ್‌ನಲ್ಲಿ ನಿಖರವಾಗಿ ದಾಖಲಿಸಲಾಗುತ್ತದೆ. ಯಾವುದೇ ಕಾರಣಕ್ಕೂ ಬೆಸ್ಕಾಂ ವಿದ್ಯುತ್ ಕಂಬಗಳು, ಟ್ರಾನ್ಸ್‌ಫಾರ್ಮರ್‌ಗಳು ಅಥವಾ ವಿದ್ಯುತ್ ಪರಿಕರಗಳಿಗೆ ಉತ್ಸವದ ಬ್ಯಾನರ್‌ಗಳು ಮತ್ತು ಪೋಸ್ಟರ್‌ಗಳನ್ನು ಕಟ್ಟಬಾರದು ಎಂದು ಬೆಸ್ಕಾಂ ಕಟ್ಟುನಿಟ್ಟಾಗಿ ಎಚ್ಚರಿಸಿದೆ.


















