ಕನಕಪುರ, ಸೆ.14 www.bengaluruwire.com: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕನಕಪುರ ನಗರದ ಡಾ. ಬಿ.ಆರ್. ಅಂಬೇಡ್ಕರ್ ಸರ್ಕಾರಿ ಕಾಲೇಜಿನ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಭಾನುವಾರ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹಾಸ್ಟೆಲ್ ವ್ಯವಸ್ಥೆಗಳನ್ನು ವೀಕ್ಷಿಸಿದ ಅವರು, ವಿದ್ಯಾರ್ಥಿಗಳೊಂದಿಗೆ ಕುಳಿತು ಊಟ ಸವಿದು ಅವರ ಕುಂದುಕೊರತೆಗಳನ್ನು ಆಲಿಸಿದರು.
ವಿದ್ಯಾರ್ಥಿ ನಿಲಯದ ಕೊಠಡಿಗಳು ಹಾಗೂ ಶೌಚಾಲಯಗಳ ಸ್ವಚ್ಛತೆಯನ್ನು ಖುದ್ದು ವೀಕ್ಷಿಸಿದ ಸಿಎಂ, ಹಾಸ್ಟೆಲ್‌ನಲ್ಲಿ ಶೇ. 75ರಷ್ಟು ಮೂಲಸೌಕರ್ಯಗಳು ಉತ್ತಮವಾಗಿವೆ ಎಂದು ಅಭಿಪ್ರಾಯಪಟ್ಟರು. ಇದೇ ವೇಳೆ ವಿದ್ಯಾರ್ಥಿಗಳಿಗೆ ಬೆಡ್‌ಶೀಟ್‌ಗಳ ಕೊರತೆ ಇರುವುದನ್ನು ಗಮನಿಸಿದ ಅವರು, ಪ್ರತಿಯೊಬ್ಬ ವಿದ್ಯಾರ್ಥಿಯಿಂದಲೂ ಹಾಸ್ಟೆಲ್ ಸಮಸ್ಯೆಗಳ ಪಟ್ಟಿಯನ್ನು ಲಿಖಿತವಾಗಿ ಪಡೆದುಕೊಂಡರು.
”ಖಾಸಗಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಕನಕಪುರಕ್ಕೆ ಬಂದಿದ್ದರೂ, ಹಾಸ್ಟೆಲ್‌ಗೆ ಭೇಟಿ ನೀಡಿ ವಿದ್ಯಾರ್ಥಿಗಳ ಯೋಗಕ್ಷೇಮ ವಿಚಾರಿಸುವ ಉದ್ದೇಶದಿಂದಲೇ ಒಂದು ದಿನ ಮುಂಚಿತವಾಗಿ ಬಂದಿದ್ದೇನೆ. ಹಬ್ಬದ ಪ್ರಯುಕ್ತ ಬಹುತೇಕ ವಿದ್ಯಾರ್ಥಿಗಳು ಊರಿಗೆ ತೆರಳಿದ್ದರಿಂದ ಮೊರಾರ್ಜಿ ದೇಸಾಯಿ ವಸತಿ ನಿಲಯ ಖಾಲಿಯಿತ್ತು. ಹೀಗಾಗಿ ಇಲ್ಲಿಗೆ ಭೇಟಿ ನೀಡಿ ಪರಿಶೀಲಿಸಿದ್ದೇನೆ.
ವಿದ್ಯಾರ್ಥಿಗಳು ಬರೆದುಕೊಟ್ಟಿರುವ ಸಮಸ್ಯೆಗಳನ್ನು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ಅವರಿಗೆ ರವಾನಿಸಿ ಮರುಪರಿಶೀಲನೆ ನಡೆಸಿ ತ್ವರಿತವಾಗಿ ಬಗೆಹರಿಸಲಾಗುವುದು” ಎಂದು ಡಿ.ಕೆ. ಶಿವಕುಮಾರ್ ಭರವಸೆ ನೀಡಿದರು.

ಇಲ್ಲಿ ಕಲಬುರ್ಗಿ, ರಾಯಚೂರು, ಬೀದರ್, ಹಾವೇರಿ, ಬೆಂಗಳೂರು ಹಾಗೂ ಬಳ್ಳಾರಿ ಸೇರಿದಂತೆ ರಾಜ್ಯದ ವಿವಿಧ ಭಾಗಗಳ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಸಂವಾದದ ವೇಳೆ, ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಇದ್ದರೂ ಹಾಸ್ಟೆಲ್ ಬಳಿ ಸರ್ಕಾರಿ (ಕೆಂಪು) ಬಸ್‌ಗಳು ನಿಲ್ಲುತ್ತಿಲ್ಲ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡರು. ಈ ಕುರಿತು ಸಾರಿಗೆ ಇಲಾಖೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಬಸ್ ನಿಲುಗಡೆಗೆ ಕ್ರಮ ವಹಿಸುವುದಾಗಿ ತಿಳಿಸಿದರು.
ಸಂವಾದದ ವೇಳೆ ವಿದ್ಯಾರ್ಥಿಯೊಬ್ಬ ಮಧ್ಯಾಹ್ನ ಬಿಸಿಲು ಜಾಸ್ತಿ ಎಂದು ಹೇಳಿದಾಗ, “ಹಾಗಾದರೆ ಎಸಿ ಹಾಕಿಸೋಣ” ಎಂದು ಲಘು ದಾಟಿಯಲ್ಲಿ ಚಟಾಕಿ ಹಾರಿಸಿದ ಮುಖ್ಯಮಂತ್ರಿಗಳು, ಮಳೆ ಕೊರತೆ ವಿಚಾರ ಪ್ರಸ್ತಾಪವಾದಾಗ “ಎಲ್ಲರೂ ಸೇರಿ ಮಳೆಗಾಗಿ ಪ್ರಾರ್ಥನೆ ಮಾಡಿ” ಎನ್ನುತ್ತಾ ಗೌರಿ-ಗಣೇಶ ಹಬ್ಬದ ಶುಭಾಶಯ ಕೋರಿದರು.




















