ಬೆಂಗಳೂರು, ಸೆ.13 www.bengaluruwire.com: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಗಣೇಶ ಚತುರ್ಥಿಯ ಹಬ್ಬದ ಸಂಭ್ರಮ ಎಲ್ಲೆಡೆ ಕಂಡುಬಂದಿದೆ. ಇನ್ನೊಂದೆಡೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯ ಐದು ನಗರ ಪಾಲಿಕೆಗಳು ಸಂಪೂರ್ಣ ಸಿದ್ಧತೆ ಮಾಡಿಕೊಂಡಿವೆ.
ಬೆಂಗಳೂರಿನ ಪ್ರಮುಖ ಗಣೇಶ ದೇವಸ್ಥಾನಗಳಾದ ಬಸವನಗುಡಿಯ ದೊಡ್ಡ ಗಣಪತಿ ದೇವಸ್ಥಾನ, ಜೆ.ಪಿ. ನಗರದ ಶ್ರೀ ಸತ್ಯ ಗಣಪತಿ ದೇವಸ್ಥಾನ, ಜಯನಗರದ ವಿನಾಯಕ ಸ್ವಾಮಿ (ಪವರ್ ಗಣೇಶ) ದೇವಸ್ಥಾನ, ಪಂಚಮುಖಿ ಗಣೇಶ ದೇವಸ್ಥಾನ ಮತ್ತು ಕೋರಮಂಗಲದ ಪ್ರಸನ್ನ ಗಣಪತಿ (ಟೆಕ್ಕಿ ಗಣೇಶ) ದೇವಸ್ಥಾನಗಳಲ್ಲಿ ಹಬ್ಬದ ಸಂಭ್ರಮ ವಿಶೇಷವಾಗಿ ಕಾಣಸಿಗುತ್ತದೆ.
ಬಸವನಗುಡಿಯಲ್ಲಿ ಶ್ರೀ ವಿದ್ಯಾರಣ್ಯ ಯುವಕ ಸಂಘದಿಂದ ಬೆಂಗಳೂರು ಗಣೇಶ ಉತ್ಸವ, ಜಯನಗರದ ಶ್ರೀ ವಿನಾಯಕ ಮಿತ್ರ ಮಂಡಳಿ, ಗಾಂಧಿನಗರದ ಫ್ರೀಡಂ ಪಾರ್ಕ್ ಗಣೇಶೋತ್ಸವ ಸಮಿತಿ, ಎಚ್‌ಎಸ್‌ಆರ್ ಲೇಔಟ್ ಅಗ್ರ ಗಣೇಶೋತ್ಸವ ಸಮಿತಿ ಹಾಗೂ ವಿವಿಧ ಸ್ಥಳೀಯ ಸಂಘಟನೆಗಳು ಮತ್ತು ಸಮಿತಿಗಳು ದೊಡ್ಡ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿವೆ.

ಗಣೇಶ ಮೂರ್ತಿಗಳ ವಿಸರ್ಜನೆಗೆ ಒಟ್ಟು 42 ಕೆರೆ ಅಂಗಳದ ಅಥವಾ ತಾತ್ಕಾಲಿಕ ಕಲ್ಯಾಣಿಗಳು ಹಾಗೂ ವಾರ್ಡ್‌ವಾರು 659 ಮೊಬೈಲ್ ಟ್ಯಾಂಕ್‌ಗಳ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರು ಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ಪಡೆಯಲು 122 ಏಕಗವಾಕ್ಷಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.

ಗಣೇಶ ಮೂರ್ತಿ ಪ್ರತಿಷ್ಠಾಪನೆ ಮತ್ತು ವಿಸರ್ಜನೆಗೆ ಸಂಬಂಧಿಸಿದಂತೆ ಸಾರ್ವಜನಿಕರಿಗೆ ಮಾರ್ಗದರ್ಶನ ನೀಡಲು ಹಾಗೂ ವ್ಯವಸ್ಥೆಗಳ ಮೇಲ್ವಿಚಾರಣೆಗೆ ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ವಿಸರ್ಜನಾ ಸ್ಥಳಗಳು, ಮೊಬೈಲ್ ಟ್ಯಾಂಕ್‌ಗಳು ಮತ್ತು ಏಕಗವಾಕ್ಷಿ ಕೇಂದ್ರಗಳ ಸಂಪೂರ್ಣ ಮಾಹಿತಿಯನ್ನು GBA ವೆಬ್‌ಸೈಟ್ https://apps.bbmp.gov.in/ganesha2026 ಗೆ ಭೇಟಿ ನೀಡಿ ಪಡೆಯಬಹುದು.
ನಗರ ಪಾಲಿಕೆವಾರು ಏಕಗವಾಕ್ಷಿ ಕೇಂದ್ರಗಳು:
ಪಶ್ಚಿಮ ನಗರ ಪಾಲಿಕೆಯಲ್ಲಿ 22, ಕೇಂದ್ರದಲ್ಲಿ 24, ಪೂರ್ವದಲ್ಲಿ 17, ಉತ್ತರದಲ್ಲಿ 30 ಮತ್ತು ದಕ್ಷಿಣದಲ್ಲಿ 29 ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಒಟ್ಟು 122 ಕೇಂದ್ರಗಳಲ್ಲಿ ಸಾರ್ವಜನಿಕರು ಒಂದೇ ಸ್ಥಳದಲ್ಲಿ ಅಗತ್ಯ ಅನುಮತಿಗಳನ್ನು ಪಡೆಯಬಹುದು.
ಮೊಬೈಲ್ ಟ್ಯಾಂಕ್ ಮತ್ತು ಕಲ್ಯಾಣಿಗಳ ವಿವರ:
ಪಶ್ಚಿಮ ನಗರ ಪಾಲಿಕೆಯಲ್ಲಿ 161 ಮೊಬೈಲ್ ಟ್ಯಾಂಕರ್‌ಗಳು ಮತ್ತು 9 ಕಲ್ಯಾಣಿಗಳು, ಕೇಂದ್ರದಲ್ಲಿ 146 ಮೊಬೈಲ್ ಟ್ಯಾಂಕರ್‌ಗಳು ಮತ್ತು 1 ಕಲ್ಯಾಣಿ, ಪೂರ್ವದಲ್ಲಿ 80 ಮೊಬೈಲ್ ಟ್ಯಾಂಕರ್‌ಗಳು ಮತ್ತು 14 ಕಲ್ಯಾಣಿಗಳು, ಉತ್ತರದಲ್ಲಿ 113 ಮೊಬೈಲ್ ಟ್ಯಾಂಕರ್‌ಗಳು ಮತ್ತು 12 ಕಲ್ಯಾಣಿಗಳು ಹಾಗೂ ದಕ್ಷಿಣದಲ್ಲಿ 159 ಮೊಬೈಲ್ ಟ್ಯಾಂಕರ್‌ಗಳು ಮತ್ತು 6 ಕಲ್ಯಾಣಿಗಳು ಇವೆ. ಒಟ್ಟು 659 ಮೊಬೈಲ್ ಟ್ಯಾಂಕರ್‌ಗಳು ಮತ್ತು 42 ಕಲ್ಯಾಣಿಗಳು ಸಿದ್ಧವಾಗಿವೆ.
ಈ ವರ್ಷ ಪ್ಲ್ಯಾಸ್ಟರ್ ಆಫ್ ಪ್ಯಾರಿಸ್ (PoP) ಮೂರ್ತಿಗಳನ್ನು ಕೆರೆಗಳಲ್ಲಿ ವಿಸರ್ಜಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಕೇವಲ ಪರಿಸರ ಸ್ನೇಹಿ ಮತ್ತು ಮಣ್ಣಿನ ಮೂರ್ತಿಗಳಿಗೆ ಮಾತ್ರ ಅನುಮತಿ ಇದೆ. ಹಲಸೂರು (ಉಲ್ಸೂರು) ಕೆರೆ, ಯಡಿಯೂರು ಕೆರೆ, ಸ್ಯಾಂಕಿ ಕೆರೆ ಸೇರಿದಂತೆ ಪ್ರಮುಖ ಕೆರೆಗಳಲ್ಲಿ ತಾತ್ಕಾಲಿಕ ಕಲ್ಯಾಣಿಗಳನ್ನು ಸಿದ್ಧಪಡಿಸಲಾಗಿದೆ. ಹಲಸೂರು ಕೆರೆಯಲ್ಲಿ ವಿಶೇಷ ಕಲ್ಯಾಣಿಯನ್ನು ನಿರ್ಮಿಸಲಾಗಿದ್ದು, ಆಯ್ದ ದಿನಗಳಲ್ಲಿ ಮಾತ್ರ ವಿಸರ್ಜನೆಗೆ ಅವಕಾಶವಿದೆ.
ಸಾರ್ವಜನಿಕರು ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸಿ, ನಿಗದಿತ ಸ್ಥಳಗಳಲ್ಲಿ ಮಾತ್ರ ಮೂರ್ತಿ ವಿಸರ್ಜನೆ ಮಾಡುವಂತೆ ಅಧಿಕಾರಿಗಳು ಕೋರಿದ್ದಾರೆ. ಹೆಚ್ಚಿನ ಮಾಹಿತಿಗಾಗಿ GBA ವೆಬ್‌ಸೈಟ್‌ಗೆ ಭೇಟಿ ನೀಡಿ.



















