ಬೆಂಗಳೂರು, ಆ.12 www.bengaluruwire.com: ರಾಜ್ಯದ ವಿವಿಧ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಧಾಬಾಗಳು ಮತ್ತು ಇತರ ಆಹಾರ ಸೇವಾ ಸಂಸ್ಥೆಗಳಲ್ಲಿನ ನೈರ್ಮಲ್ಯ ಕೊರತೆ ಹಾಗೂ ಅವಧಿ ಮೀರಿದ ಆಹಾರ ಮಾರಾಟಕ್ಕೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಮುಂದಾಗಿದೆ.
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯಡಿ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು, ಇವುಗಳ ಕಟ್ಟುನಿಟ್ಟಿನ ಅನುಷ್ಠಾನಕ್ಕೆ ಆರೋಗ್ಯ ಸಚಿವ ಯು.ಟಿ. ಖಾದರ್ ಖಡಕ್ ಸೂಚನೆ ನೀಡಿದ್ದಾರೆ. ಇತ್ತೀಚೆಗೆ ನಡೆದ ತಪಾಸಣೆಗಳ ಸಂದರ್ಭದಲ್ಲಿ ಕಂಡುಬಂದ ಲೋಪದೋಷಗಳ ಆಧಾರದ ಮೇಲೆ ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ.
ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯು ಈ ಕುರಿತು ಅಧಿಕೃತ ಜ್ಞಾಪನ ಪತ್ರವನ್ನು ಹೊರಡಿಸಿದ್ದು, ಪ್ರಮುಖವಾಗಿ ಪಾಲಿಸಬೇಕಾದ ನಿಯಮಗಳು ಇಲ್ಲಿವೆ:
ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳಿಗೆ ಹೊಸ ಮಾರ್ಗಸೂಚಿಗಳು:

ಪರವಾನಗಿ ಪ್ರದರ್ಶನ ಕಡ್ಡಾಯ: ಆಹಾರ ವ್ಯವಹಾರದ ಲೈಸೆನ್ಸ್ ಅನ್ನು ಸಂಸ್ಥೆಯ ಆವರಣದಲ್ಲಿ ಗ್ರಾಹಕರಿಗೆ ಕಾಣುವಂತೆ ಪ್ರದರ್ಶಿಸುವುದು ಕಡ್ಡಾಯ.
ಶೌಚಾಲಯ ಮತ್ತು ಕುಡಿಯುವ ನೀರು: ಹೋಟೆಲ್‌ಗೆ ಬರುವ ಗ್ರಾಹಕರಿಗೆ ಉಚಿತ ಶೌಚಾಲಯ ಸೌಲಭ್ಯ ಹಾಗೂ ಸಾರ್ವಜನಿಕರಿಗೆ ಕಡ್ಡಾಯವಾಗಿ ಉಚಿತ ಕುಡಿಯುವ ಬಿಸಿ ನೀರಿನ ವ್ಯವಸ್ಥೆ ಕಲ್ಪಿಸಬೇಕು.
ಸಸ್ಯಾಹಾರಿ – ಮಾಂಸಾಹಾರಿ ಪ್ರತ್ಯೇಕತೆ: ಸಸ್ಯಾಹಾರಿ ಮತ್ತು ಮಾಂಸಾಹಾರಿ ಆಹಾರ ತಯಾರಿಕೆ ಹಾಗೂ ಶೇಖರಣೆಗೆ ಪ್ರತ್ಯೇಕ ಪಾತ್ರೆಗಳು ಮತ್ತು ಕತ್ತರಿಸುವ ಚಾಕುಗಳನ್ನು ಬಳಸಬೇಕು.
ಸಿಬ್ಬಂದಿ ನೈರ್ಮಲ್ಯ: ಆಹಾರ ನಿರ್ವಹಿಸುವ ಸಿಬ್ಬಂದಿ ಕಡ್ಡಾಯವಾಗಿ ಮಾಸ್ಕ್, ಹೇರ್‌ನೆಟ್ ಹಾಗೂ ಏಪ್ರಾನ್ ಧರಿಸಬೇಕು. ಅಲ್ಲದೆ, ಸಿಬ್ಬಂದಿಯ ವಾರ್ಷಿಕ ವೈದ್ಯಕೀಯ ಆರೋಗ್ಯ ದಾಖಲೆಗಳನ್ನು (Fitness certificate) ಹೊಂದಿರಬೇಕು.
ತಾಪಮಾನ ನಿರ್ವಹಣೆ: ತಣ್ಣನೆಯ ಆಹಾರವನ್ನು 5°C ಗಿಂತ ಕಡಿಮೆ ಹಾಗೂ ಬಿಸಿ ಆಹಾರವನ್ನು 60°C ಗಿಂತ ಹೆಚ್ಚಿನ ತಾಪಮಾನದಲ್ಲಿಡಬೇಕು. ಫ್ರೋಜನ್ ಆಹಾರವನ್ನು -18°C ತಾಪಮಾನದಲ್ಲಿ ಸಂಗ್ರಹಿಸಬೇಕು.
ಬಳಸಿದ ಎಣ್ಣೆ ಮರುಬಳಕೆಗೆ ಬ್ರೇಕ್: ಒಮ್ಮೆ ಬಳಸಿದ ಅಡುಗೆ ಎಣ್ಣೆಯನ್ನು ಯಾವುದೇ ಕಾರಣಕ್ಕೂ ಮರುಬಳಕೆ ಮಾಡುವಂತಿಲ್ಲ. ಅವಧಿ ಮೀರಿದ ಅಥವಾ ಹಾಳಾದ ಆಹಾರವನ್ನು ತಕ್ಷಣವೇ ವಿಲೇವಾರಿ ಮಾಡಬೇಕು.
ಕೀಟ ನಿಯಂತ್ರಣ: ಅಡುಗೆ ಮನೆ ಮತ್ತು ಆಹಾರ ಸಂಗ್ರಹಣಾ ಪ್ರದೇಶದಲ್ಲಿ ಕೀಟಗಳು, ಜಿರಳೆ, ಇಲಿಗಳ ಹಾವಳಿ ಇರದಂತೆ ಕೀಟ ನಿಯಂತ್ರಣ (Pest Control) ಕ್ರಮಗಳನ್ನು ಕೈಗೊಳ್ಳಬೇಕು.
ಈ ಮೇಲಿನ ಆಹಾರ ಸುರಕ್ಷತೆ, ನೈರ್ಮಲ್ಯ ಮತ್ತು ಸಿಬ್ಬಂದಿ ಸ್ವಚ್ಛತೆಯ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಕಳಪೆ ನೈರ್ಮಲ್ಯ, ಅಸುರಕ್ಷಿತ ನೀರಿನ ಬಳಕೆ ಅಥವಾ ನಿಯಮ ಉಲ್ಲಂಘನೆ ಕಂಡುಬಂದರೆ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ ತನ್ನ ಅಧಿಸೂಚನೆಯಲ್ಲಿ ಎಚ್ಚರಿಸಲಾಗಿದೆ.




















