ಬಳ್ಳಾರಿ/ಕೊಪ್ಪಳ, ಸೆ.28 www.bengaluruwire.com: ತುಂಗಭದ್ರಾ ಜಲಾಶಯದ ಹಿನ್ನೀರಿನಿಂದ ಬೃಹತ್ ಉಕ್ಕು ಕಾರ್ಖಾನೆಯೊಂದು ಯಾವುದೇ ಅಧಿಕೃತ ಅನುಮತಿ ಇಲ್ಲದೆ ದಿನಂಪ್ರತಿ ಭಾರಿ ಪ್ರಮಾಣದ ನೀರನ್ನು ಅಕ್ರಮವಾಗಿ ಪಂಪ್ ಮಾಡುತ್ತಿರುವ ಗಂಭೀರ ಪ್ರಕರಣ ಬೆಳಕಿಗೆ ಬಂದಿದೆ.
ರೈತರ ಹೊಲಗಳಿಗೆ ಹರಿಸಬೇಕಾದ ಜಲಾಶಯದ ನೀರನ್ನು ಕಾರ್ಖಾನೆಗಳು ಹೀರಿಕೊಳ್ಳುತ್ತಿರುವುದನ್ನು ಸ್ಥಳೀಯ ರೈತರು ಖುದ್ದಾಗಿ ಬಯಲಿಗೆಳೆದಿದ್ದು, ಅನ್ನದಾತರ ಆಕ್ರೋಶ ಮುಗಿಲುಮುಟ್ಟಿದೆ.
200 ರಿಂದ 300 ಹೆಚ್‌ಪಿ ಮೋಟಾರ್‌ಗಳ ಮೂಲಕ ನೀರು ಕಳ್ಳತನ?:
ಸ್ಥಳ ಪರಿಶೀಲನೆ ನಡೆಸಿದ ರೈತ ಮುಖಂಡರು, ಹಿನ್ನೀರಿನ ದಡದಲ್ಲಿ ಅಳವಡಿಸಿರುವ ಭಾರಿ ಅಶ್ವಶಕ್ತಿಯ (200-300 HP) ಪಂಪ್‌ಸೆಟ್‌ಗಳು ಹಾಗೂ ನದಿಯ ಒಡಲಿಗೆ ಇಳಿಸಲಾಗಿರುವ ಬೃಹತ್ ಪೈಪ್‌ಲೈನ್‌ಗಳನ್ನು ವಿಡಿಯೋ ಸಮೇತ ಸಾರ್ವಜನಿಕವಾಗಿ ತೆರೆದಿಟ್ಟಿದ್ದಾರೆ. 24 ಗಂಟೆಯೂ ನಿರಂತರವಾಗಿ ಕಾರ್ಯಾಚರಿಸುವ ಈ ಮೋಟಾರ್‌ಗಳ ಮೂಲಕ ಪ್ರತಿದಿನ ಸರಿಸುಮಾರು ಅರ್ಧ ಟಿಎಂಸಿ ನೀರನ್ನು ಕಾರ್ಖಾನೆಯ ಆವರಣಕ್ಕೆ ಅಕ್ರಮವಾಗಿ ಎತ್ತಲಾಗುತ್ತಿದೆ ಎಂದು ರೈತರು ಆರೋಪಿಸಿದ್ದಾರೆ.

ತುಂಗಭದ್ರಾ ಅಣೆಕಟ್ಟಿನ ಹಿನ್ನೀರಿನಿಂದ ನೇರವಾಗಿ ನೀರನ್ನು ಎತ್ತುತ್ತಿದ್ದವು ಎಂದು ವರದಿಯಾದ ಮೂರು ಪಂಪ್‌ಗಳನ್ನು ಈಗ ಸ್ಥಗಿತಗೊಳಿಸಲಾಗಿದೆ ಎಂದು ವರದಿಯಾಗಿದೆ.
‘ನಾಟಿ ಮಾಡಿದ ಭತ್ತಕ್ಕೆ ನೀರಿಲ್ಲ, ಕಾರ್ಖಾನೆಗಳಿಗೆ ಕೊಟ್ರೆ ಹೇಗೆ?’: ರೈತರ ಕಣ್ಣೀರು:
”ತುಂಗಭದ್ರಾ ಜಲಾಶಯವನ್ನು ನಂಬಿಕೊಂಡು ಕೊಪ್ಪಳ, ಬಳ್ಳಾರಿ, ರಾಯಚೂರು ಹಾಗೂ ವಿಜಯನಗರ ಜಿಲ್ಲೆಗಳ ಲಕ್ಷಾಂತರ ರೈತರು ಕೃಷಿ ಮಾಡುತ್ತಿದ್ದಾರೆ. ಈಗಾಗಲೇ ಭತ್ತ ನಾಟಿ ಮಾಡಿ ಕೇವಲ 15-20 ದಿನಗಳಾಗಿವೆ. ಜಲಾಶಯದಲ್ಲಿ ನೀರಿನ ಸಂಗ್ರಹ ಕುಂಠಿತವಾಗುತ್ತಿರುವ ಈ ಸಂದರ್ಭದಲ್ಲಿ ಕೊನೆ ಭಾಗದ ರೈತರಿಗೆ ಬೆಳೆ ಬರುವ ಗ್ಯಾರಂಟಿಯೇ ಇಲ್ಲದಂತಾಗಿದೆ. ಇಂತಹ ವಿಷಮ ಸ್ಥಿತಿಯಲ್ಲಿ ಅಧಿಕಾರಿಗಳು ಕಣ್ಮುಚ್ಚಿ ಕುಳಿತು, ಕಾರ್ಖಾನೆಗಳಿಗೆ ಅಕ್ರಮವಾಗಿ ನೀರು ಎತ್ತಲು ಅವಕಾಶ ಮಾಡಿಕೊಡುತ್ತಿರುವುದು ರೈತರಿಗೆ ಎಸಗುತ್ತಿರುವ ದ್ರೋಹ,” ಎಂದು ಸ್ಥಳೀಯ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ:
ಹಿನ್ನೀರಿನಿಂದ ಕಾರ್ಖಾನೆಗಳು ನೀರು ಎತ್ತುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣವಾದ ‘ಎಕ್ಸ್’ (ಟ್ವಿಟರ್)ನಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಹಾಗೂ ರೈತಪರ ಸಂಘಟನೆಗಳು ಆಡಳಿತ ವ್ಯವಸ್ಥೆಯ ವಿರುದ್ಧ ಕೆಂಡಕಾರಿದ್ದಾರೆ. ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ ಹಾಗೂ ಜಿಲ್ಲಾಡಳಿತ ತಕ್ಷಣವೇ ಸ್ಥಳಕ್ಕೆ ತೆರಳಿ ಅಕ್ರಮ ಪಂಪ್‌ಸೆಟ್‌ಗಳನ್ನು ಜಪ್ತಿ ಮಾಡಬೇಕು ಮತ್ತು ಕಾರ್ಖಾನೆಯ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ರೈತರ ಹಿತ ರಕ್ಷಿಸಬೇಕು ಎಂದು ಸಾರ್ವಜನಿಕರು ತೀವ್ರವಾಗಿ ಒತ್ತಾಯಿಸಿದ್ದಾರೆ.




















