ಬೆಂಗಳೂರು, ಆ.12 www.bengaluruwire.com: ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ರಾಜ್ಯದಲ್ಲಿ ಆ.10 ರಿಂದ ಮುಂದಿನ ಒಂದು ವರ್ಷಗಳ ಕಾಲ ಯಾವುದೇ ರೀತಿಯ ತಂಬಾಕು ಹಾಗೂ ನಿಕೋಟಿನ್ ಹೊಂದಿದ ಉತ್ಪನ್ನಗಳ ವಿತರಣೆ ಮತ್ತು ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿ ರಾಜ್ಯ ಸರ್ಕಾರವು ಆದೇಶ ಹೊರಡಿಸಿದೆ.
ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಆಹಾರ ಸುರಕ್ಷತಾ ವಿಭಾಗದ ವತಿಯಿಂದ ಈ ವಿಶೇಷ ಆದೇಶ ಜಾರಿಗೆ ಬಂದಿದೆ. ಗುಟ್ಕಾ, ಪಾನ್ ಮಸಾಲಾ ಹಾಗೂ ಇತರೆ ತಂಬಾಕು ಮತ್ತು ನಿಕೋಟಿನ್ ಯುಕ್ತ ಉತ್ಪನ್ನಗಳ ತಯಾರಿಕೆ, ಸಂಗ್ರಹಣೆ, ಸಾಗಣೆ, ವಿತರಣೆ ಮತ್ತು ಮಾರಾಟದ ವಿರುದ್ಧ ಆಹಾರ ಸುರಕ್ಷತಾ ಅಧಿಕಾರಿಗಳ ನೇತೃತ್ವದಲ್ಲಿ ರಾಜ್ಯಾದ್ಯಂತ ಕಠಿಣ ತಪಾಸಣೆ ಹಾಗೂ ಜಾರಿ ಕಾರ್ಯಾಚರಣೆಗಳನ್ನು ಚುರುಕುಗೊಳಿಸಲಾಗಿದೆ.
ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಕಾಯ್ದೆ-2006 ರ ಕಲಮ್ 30(2)(ಎ) ಹಾಗೂ ಆಹಾರ ಸುರಕ್ಷತೆ ಮತ್ತು ಮಾನದಂಡಗಳ (ಮಾರಾಟ ನಿಷೇಧ ಮತ್ತು ನಿರ್ಬಂಧನೆಗಳು) ನಿಯಮಗಳು-2011 ರ ನಿಯಮ 2.3.4 ರನ್ವಯ ಪ್ರದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ ಸರ್ಕಾರ ಈ ಅಧಿಸೂಚನೆಯನ್ನು ಹೊರಡಿಸಿದೆ. ಈ ನಿಷೇಧವು ಅಧಿಸೂಚನೆ ಹೊರಡಿಸಿದ ದಿನಾಂಕದಿಂದ (ಆಗಸ್ಟ್ 10) ಒಂದು ವರ್ಷದವರೆಗೆ ರಾಜ್ಯಾದ್ಯಂತ ಕಟ್ಟುನಿಟ್ಟಾಗಿ ಜಾರಿಯಲ್ಲಿರುತ್ತದೆ.
ನಿಷೇಧಿತ ತಂಬಾಕು ಹಾಗೂ ನಿಕೋಟಿನ್ ಉತ್ಪನ್ನಗಳ ತಯಾರಿಕೆ, ಮಾರಾಟ ಅಥವಾ ವಿತರಣೆ ಎಲ್ಲಿಯಾದರೂ ಕಂಡುಬಂದಲ್ಲಿ ಸಾರ್ವಜನಿಕರು ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡುವ ಮೂಲಕ, ವ್ಯಸನಮುಕ್ತ ಹಾಗೂ ಆರೋಗ್ಯಕರ ಕರ್ನಾಟಕ ನಿರ್ಮಾಣಕ್ಕೆ ಕೈಜೋಡಿಸಬೇಕಾಗಿ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯು ಮನವಿ ಮಾಡಿದೆ.



















