ಬೆಂಗಳೂರು, ಸೆ.17 www.bengaluruwire.com : ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಟಿಕೆಟ್ ರಹಿತ ಪ್ರಯಾಣಿಕರಿಗೆ ದಂಡದ ಬಿಸಿ ಮುಟ್ಟಿಸಿದೆ.
ಬೆಂಗಳೂರು ನಗರ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಜುಲೈ ಮತ್ತು ಆಗಸ್ಟ್ ತಿಂಗಳ ಅವಧಿಯಲ್ಲಿ, ಟಿಕೆಟ್ ರಹಿತ ಪ್ರಯಾಣಿಕರನ್ನು ಪತ್ತೆ ಹಚ್ಚಲು ತೀವ್ರ ತಪಾಸಣೆ ನಡೆಸಿ ಒಟ್ಟು 41,156 ಟ್ರಿಪ್‌ಗಳನ್ನು ಪರಿಶೀಲಿಸಿ, 7,719 ಟಿಕೆಟ್ ರಹಿತ ಪ್ರಯಾಣಿಕರನ್ನು ಪತ್ತೆಹಚ್ಚಿ ದಂಡ ವಿಧಿಸಿದ್ದಾರೆ. ಈ ಮೂಲಕ ಒಟ್ಟು 17,45,452 ರೂಪಾಯಿಗಳ ದಂಡವನ್ನು ಸಂಗ್ರಹಿಸಲಾಗಿದೆ.
ಅದಲ್ಲದೆ, ಮಹಿಳೆಯರಿಗೆ ಮೀಸಲಾದ ಸೀಟುಗಳಲ್ಲಿ ಕುಳಿತಿದ್ದ 642 ಪುರುಷ ಪ್ರಯಾಣಿಕರಿಗೆ ದಂಡ ವಿಧಿಸಲಾಗಿದ್ದು, ಅವರಿಂದ 64,200 ರೂಪಾಯಿಗಳನ್ನು ಸಂಗ್ರಹಿಸಲಾಗಿದೆ. ಇದು ಕರ್ನಾಟಕ ಮೋಟಾರು ವಾಹನ ನಿಯಮಗಳು 94 ಮತ್ತು ಮೋಟಾರು ವಾಹನ ಕಾಯ್ದೆ 1988ರ ಸೆಕ್ಷನ್ 177ರ ಅಡಿಯಲ್ಲಿ ಮಾಡಲಾಗಿದೆ. ಈ ಅವಧಿಯಲ್ಲಿ ಕರ್ತವ್ಯ ಲೋಪ ಎಸಗಿದ 2,812 ನಿರ್ವಾಹಕರ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ.
ಈ ಬಗ್ಗೆ ಬಿಎಂಟಿಸಿ ನೀಡಿರುವ ಪ್ರಕಟಣೆಯಲ್ಲಿ, ಪ್ರಯಾಣಿಕರು ತಪ್ಪದೆ ಟಿಕೆಟ್ ಅಥವಾ ಮಾಸಿಕ ಪಾಸ್ ಖರೀದಿಸಿ ಪ್ರಯಾಣ ಮಾಡುವಂತೆ ತಿಳಿಸಲಾಗಿದೆ. ಇದರಿಂದ ದಂಡ ಕಟ್ಟುವುದನ್ನು ತಪ್ಪಿಸುವುದಲ್ಲದೆ, ಉತ್ತಮ ಸೇವೆಗಳನ್ನು ಒದಗಿಸಲು ಸಂಸ್ಥೆಗೆ ಸಹಕಾರಿಯಾಗುತ್ತದೆ. ಹಾಗೆಯೇ ಮಹಿಳೆಯರಿಗೆ ಮೀಸಲಾದ ಆಸನಗಳಲ್ಲಿ ಕೂರದಂತೆ ಪುರುಷ ಪ್ರಯಾಣಿಕರಿಗೆ ಸಂಸ್ಥೆ ಮನವಿ ಮಾಡಿದೆ.
























