ಬೆಂಗಳೂರು, ಅ.30 www.bengaluruwire.com: ರಾಜಧಾನಿ ಬೆಂಗಳೂರಿನ ಹೊರವಲಯದ ಕೊಮ್ಮಘಟ್ಟ ರಸ್ತೆ ವ್ಯಾಪ್ತಿಯಲ್ಲಿ ಚಿರತೆಯೊಂದು ರಾಜಾರೋಷವಾಗಿ ಓಡಾಡುತ್ತಿರುವ ದೃಶ್ಯ ಕಂಡುಬಂದಿದ್ದು, ಸುತ್ತಮುತ್ತಲಿನ ನಿವಾಸಿಗಳಲ್ಲಿ ತೀವ್ರ ಆತಂಕ ಹಾಗೂ ಭೀತಿ ಸೃಷ್ಟಿಯಾಗಿದೆ.
ಕೊಮ್ಮಘಟ್ಟ ಮುಖ್ಯರಸ್ತೆಯ ರಾಮಸಂದ್ರ ಹಾಗೂ ಸೂಲಿಕೆರೆ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ರಸ್ತೆ ಮಾರ್ಗದಲ್ಲಿ ರಾತ್ರಿ ವೇಳೆ ಚಿರತೆ ರಸ್ತೆ ದಾಟುತ್ತಿರುವ ದೃಶ್ಯವನ್ನು ವಾಹನ ಸವಾರರೊಬ್ಬರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕರು ರಾತ್ರಿ ವೇಳೆ ಹೊರಬರಲು ಹಿಂದೇಟು ಹಾಕುವ ಪರಿಸ್ಥಿತಿ ಎದುರಾಗಿದೆ.
ನಾಯಿ ಮೇಲೆ ದಾಳಿ, ಕಾರ್ಮಿಕರ ಆತಂಕ: ಶ್ರೀಶೈಲ ತೋಟದ ಎದುರಿನ ಖಾಸಗಿ ಬಡಾವಣೆ ಹಾಗೂ ಬಿಡಿಎ ರಸ್ತೆ ಕಾಮಗಾರಿ ನಡೆಯುತ್ತಿರುವ ಸ್ಥಳದ ಸಮೀಪ ಚಿರತೆ ಪದೇ ಪದೇ ಪ್ರತ್ಯಕ್ಷವಾಗುತ್ತಿದೆ ಎಂದು ಸ್ಥಳೀಯ ನಿವಾಸಿಗಳು ತಿಳಿಸಿದ್ದಾರೆ. ರಾತ್ರಿ ಸುಮಾರು 8 ಗಂಟೆಯ ನಂತರ ಕಾಮಗಾರಿ ಸ್ಥಳದಲ್ಲಿದ್ದ ಶೆಡ್‌ನಲ್ಲಿ ಅಡುಗೆ ಮಾಡುತ್ತಿದ್ದ ಮಹಿಳಾ ಕಾರ್ಮಿಕರ ಎದುರೇ ಚಿರತೆ ಬಂದಿದ್ದು, ಅವರು ಪ್ರಾಣಭಯದಿಂದ ಮನೆಯೊಳಗೆ ಓಡಿ ರಕ್ಷಣೆ ಪಡೆದಿದ್ದಾರೆ. ಅಷ್ಟೇ ಅಲ್ಲದೆ, ಸಮೀಪದ ಮನೆಯೊಂದರ ಸಾಕು ನಾಯಿಯ ಮೇಲೂ ದಾಳಿ ನಡೆಸಿ ಗಾಯಗೊಳಿಸಿದೆ ಎಂದು ನಿವಾಸಿಗಳು ಆರೋಪಿಸಿದ್ದಾರೆ.
ಅರಣ್ಯ ಇಲಾಖೆಗೆ ದೂರು: ರಾತ್ರಿ 7 ಗಂಟೆಯ ನಂತರ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಉದ್ಯೋಗಿಗಳು ಮನೆಗೆ ಹಿಂದಿರುಗುವ ಸಮಯವಾಗಿದ್ದು, ಚಿರತೆ ಸಂಚಾರದಿಂದ ಯಾವುದೇ ಕ್ಷಣದಲ್ಲಾದರೂ ಅನಾಹುತ ಸಂಭವಿಸುವ ಭೀತಿ ಎದುರಾಗಿದೆ. ಈ ಸಂಬಂಧ ಕಗ್ಗಲೀಪುರ ವಲಯ ಅರಣ್ಯಾಧಿಕಾರಿಗಳಿಗೆ ಲಿಖಿತ ಪತ್ರ ಸಲ್ಲಿಸಿರುವ ಸ್ಥಳೀಯರು, ತಕ್ಷಣವೇ ಬೋನು ಇಟ್ಟು ಚಿರತೆಯನ್ನು ಸೆರೆಹಿಡಿದು ಸೂಕ್ತ ರಕ್ಷಣೆ ಒದಗಿಸಬೇಕೆಂದು ಒತ್ತಾಯಿಸಿದ್ದಾರೆ.



















