ಬೆಂಗಳೂರು, ಸೆ.18 www.bengaluruwire.com : ಕರ್ತವ್ಯ ನಿರ್ವಹಿಸುತ್ತಿದ್ದಾಗ ರಸ್ತೆ ಅಪಘಾತದಲ್ಲಿ ಅಕಾಲಿಕ ಮರಣ ಹೊಂದಿದ ಬೆಸ್ಕಾಂ ಸಹಾಯಕ ಇಂಜಿನಿಯರ್ ದಿವಂಗತ ಶಿವರಾಜು ವೈ.ಎಂ. ಅವರ ಕುಟುಂಬಕ್ಕೆ, ಮಾನವೀಯ ನೆಲೆಗಟ್ಟಿನಲ್ಲಿ ₹1 ಕೋಟಿ ವಿಮಾ ಪರಿಹಾರವನ್ನು ಸರ್ಕಾರವು ಹಸ್ತಾಂತರಿಸಿದೆ.
ಇಂಧನ ಸಚಿವ ಕೆ.ಜೆ. ಜಾರ್ಜ್ ಅವರು ಬೆಂಗಳೂರಿನ ಬೆಸ್ಕಾಂ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಮೃತರ ತಾಯಿ ಲಕ್ಷ್ಮಿದೇವಮ್ಮ ಅವರಿಗೆ ಚೆಕ್ ಅನ್ನು ವಿತರಿಸಿದರು.
ಕೋಲಾರದ ವೇಮಗಲ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ ದುರಂತಕ್ಕೀಡಾದ ಶಿವರಾಜು ಅವರು, ಕರ್ತವ್ಯನಿರತ ಸಂದರ್ಭದಲ್ಲಿಯೇ ಪ್ರಾಣ ಕಳೆದುಕೊಂಡಿದ್ದರು. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಒದಗಿಸಿರುವ ‘ಸೂಪರ್ ಸ್ಯಾಲರಿ ಅಕೌಂಟ್’ ವಿಮಾ ಯೋಜನೆಯಡಿ ಈ ಪರಿಹಾರ ಧನವನ್ನು ನೀಡಲಾಗಿದೆ. ಸರ್ಕಾರದ ಈ ತ್ವರಿತ ಮತ್ತು ಮಾನವೀಯ ಸ್ಪಂದನೆಗೆ ಬೆಸ್ಕಾಂ ಸಿಬ್ಬಂದಿಯಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ಈ ಸಂದರ್ಭದಲ್ಲಿ ಇಂಧನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಡಾ. ಎನ್. ಶಿವಶಂಕರ್, ಯೂನಿಯನ್ ಬ್ಯಾಂಕ್‌ನ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಬೆಸ್ಕಾಂ ಮತ್ತು ಸರ್ಕಾರದ ಈ ಕಾರ್ಯವು, ಸರ್ಕಾರಿ ನೌಕರರ ಸುರಕ್ಷತೆ ಮತ್ತು ಅವರ ಕುಟುಂಬಗಳ ಭದ್ರತೆಗೆ ನೀಡುತ್ತಿರುವ ಮಹತ್ವವನ್ನು ಎತ್ತಿ ತೋರಿಸುತ್ತದೆ.
























