- ವಿಶೇಷ ಲೇಖನ
ಕರ್ನಾಟಕದ ಸಮೃದ್ಧ ಕಾಡುಗಳು ಕೇವಲ ಗಿಡ-ಮರಗಳ ತಾಣವಲ್ಲ; ಅವು ಕಾವೇರಿ, ಕಪಿಲ, ಶರಾವತಿಯಂತಹ ಜೀವ ನದಿಗಳ ಉಗಮಸ್ಥಾನಗಳು ಹಾಗೂ ಜಾಗತಿಕ ಜೀವವೈವಿಧ್ಯತೆಯ ಕಿರೀಟ. ಆದರೆ ಇಂದು ಗಂಧದ ನಾಡಿನ ಶ್ರೀಗಂಧ, ಬೀಟೆ, ತೇಗ ಹಾಗೂ ರಕ್ತಚಂದನದಂತಹ ಬೆಲೆಬಾಳುವ ಸಂಪತ್ತು ರಾಜಾರೋಷವಾಗಿ ಲೂಟಿಯಾಗುತ್ತಿದೆ.

ಅಂತರರಾಷ್ಟ್ರೀಯ ಮಟ್ಟದಲ್ಲಿ ಅಕ್ರಮ ಮರಮುಟ್ಟುಗಳ ದಂಧೆ ವಾರ್ಷಿಕ ಸುಮಾರು 50 ರಿಂದ 152 ಶತಕೋಟಿ ಡಾಲರ್ (ಅಂದರೆ ಬರೋಬ್ಬರಿ 4 ಲಕ್ಷ ಕೋಟಿಯಿಂದ 12 ಲಕ್ಷ ಕೋಟಿ ರೂಪಾಯಿ) ತಲುಪಿದ್ದರೆ, ವನ್ಯಜೀವಿಗಳ ಕಳ್ಳಸಾಗಣೆ 20 ಶತಕೋಟಿ ಡಾಲರ್‌ಗಳಿಗೂ ಮೀರಿದೆ. ಈ 12 ಲಕ್ಷ ಕೋಟಿ ರೂಪಾಯಿ ಎನ್ನುವುದು ಕರ್ನಾಟಕ ಸರ್ಕಾರದ ಮೂರು ವರ್ಷಗಳ ಒಟ್ಟು ಬಜೆಟ್‌ಗೆ ಸಮಾನ! ಇಷ್ಟಿದ್ದರೂ, ಅರಣ್ಯ ಭವನದ ಹವಾನಿಯಂತ್ರಿತ ಕಚೇರಿಗಳಲ್ಲಿ ಕುಳಿತು ಕಡತಗಳನ್ನು ತಿರುವಿ ಹಾಕುವ ಉನ್ನತ ಅಧಿಕಾರಶಾಹಿ ಮತ್ತು ಮತಬ್ಯಾಂಕ್ ರಾಜಕಾರಣಕ್ಕೆ ಸಿಲುಕಿದ ಸರ್ಕಾರಗಳು ಇನ್ನೂ ಬ್ರಿಟಿಷರ ಕಾಲದ ಜಡ್ಡುಗಟ್ಟಿದ ಮನಸ್ಥಿತಿಯಿಂದ ಹೊರಬಂದಿಲ್ಲ.
ಅಂತರರಾಷ್ಟ್ರೀಯ ಸಿಂಡಿಕೇಟ್ ಮತ್ತು ವುಡ್ ಲಾಂಡರಿಂಗ್ ತಂತ್ರಗಳು:
ಇಂದು ಶ್ರೀಗಂಧ ಹಾಗೂ ವನ್ಯಜೀವಿಗಳ ಕಳ್ಳಸಾಗಣೆ ಕೇವಲ ಸ್ಥಳೀಯ ಕಳ್ಳರ ಸಣ್ಣ ಕೃತ್ಯವಾಗಿ ಉಳಿದಿಲ್ಲ. ವಿಶ್ವಸಂಸ್ಥೆ ಮತ್ತು ಇಂಟರ್‌ಪೋಲ್ ವರದಿಗಳ ಪ್ರಕಾರ, ಇದು ಮಾದಕ ದ್ರವ್ಯ, ಅಕ್ರಮ ಶಸ್ತ್ರಾಸ್ತ್ರ ಹಾಗೂ ಮಾನವ ಕಳ್ಳಸಾಗಣೆಯಷ್ಟೇ ಸಂಘಟಿತವಾಗಿ ಬೆಳೆದುನಿಂತಿರುವ ಅಂತಾರಾಷ್ಟ್ರೀಯ ಅಪರಾಧ ಜಾಲ. ಭಾರತ, ಆಫ್ರಿಕಾ ಮತ್ತು ಆಗ್ನೇಯ ಏಷ್ಯಾದ ಕಾಡುಗಳಿಂದ ಕಡಿಯಲಾಗುವ ಶ್ರೀಗಂಧ, ಸಾಗುವಾನಿ ಮತ್ತು ರೋಸ್‌ವುಡ್‌ಗಳನ್ನು ನಕಲಿ ಪತ್ರಗಳ ಮೂಲಕ ಕಾನೂನುಬದ್ಧ ಕೃಷಿ ಫಾರ್ಮ್‌ಗಳ ಲಾಗ್‌ಗಳೊಂದಿಗೆ ಬೆರೆಸಿ ಅತ್ಯಂತ ವ್ಯವಸ್ಥಿತವಾಗಿ ‘ವುಡ್ ಲಾಂಡರಿಂಗ್’ (Wood Laundering) ಮಾಡಲಾಗುತ್ತಿದೆ.

ಅಷ್ಟೇ ಅಲ್ಲದೆ, ಮರದ ದಿಮ್ಮಿಗಳನ್ನು ಒಳಗಿನಿಂದ ಕೊರೆದು, ಅದರೊಳಗೆ ಆನೆದಂತ, ಹುಲಿಯ ಮೂಳೆ ಹಾಗೂ ಅಪರೂಪದ ಪ್ರಾಣಿಗಳ ಭಾಗಗಳನ್ನು ಇರಿಸಿ, ವಾಸನೆ ಬಾರದಂತೆ ಮೇಣದಿಂದ ಸೀಲ್ ಮಾಡಿ ಕಂಟೈನರ್‌ಗಳ ಮೂಲಕ ಸಾಗಿಸುವ ಹೈಟೆಕ್ ತಂತ್ರಜ್ಞಾನವನ್ನು ಈ ಸಿಂಡಿಕೇಟ್‌ಗಳು ಬಳಸುತ್ತಿವೆ.
ಬಂದರುಗಳು, ಅಂತಾರಾಜ್ಯ ಚೆಕ್‌ಪೋಸ್ಟ್‌ಗಳಲ್ಲಿ ಕೋಟ್ಯಂತರ ರೂಪಾಯಿ ಲಂಚ ಮತ್ತು ಕಮಿಷನ್ ಹಂಚುವ ಈ ಮಾಫಿಯಾ, ಹವಾಲಾ ಜಾಲಗಳು ಹಾಗೂ ಕ್ರಿಪ್ಟೋಕರೆನ್ಸಿ ಮೂಲಕ ಹಣ ವರ್ಗಾವಣೆ ಮಾಡುತ್ತಿದೆ. ದುಬೈ, ಹಾಂಗ್‌ಕಾಂಗ್ ಅಥವಾ ಯುರೋಪ್‌ನಲ್ಲಿ ಕುಳಿತು ರಿಮೋಟ್ ಕಂಟ್ರೋಲ್ ಮೂಲಕ ಈ ಕರಾಳ ಜಾಲ ನಿಯಂತ್ರಿಸುವ ಕಿಂಗ್‌ಪಿನ್‌ಗಳನ್ನು ಮುಟ್ಟಲು ನಮ್ಮ ತನಿಖಾ ಸಂಸ್ಥೆಗಳಿಗೆ ಸಾಧ್ಯವಾಗುತ್ತಿಲ್ಲ. ಬದಲಿಗೆ, ಹೊಟ್ಟೆಪಾಡಿಗಾಗಿ ಕೂಲಿ ಪಡೆದು ಮರ ಕಡಿಯುವ ಸ್ಥಳೀಯ ಬಡವರನ್ನು ಹಿಡಿದು ಪ್ರಕರಣ ಮುಕ್ತಾಯಗೊಳಿಸುವ ನಾಟಕ ನಿರಂತರವಾಗಿ ಸಾಗಿದೆ.
ಗನ್ ಹಿಡಿದು ಪೂಜೆ ಮಾಡಬೇಕಾ? ಕೆಳಹಂತದ ಸಿಬ್ಬಂದಿಯ ನೈತಿಕ ಅಧಃಪತನ:

ಕಾಡಿನ ಅಂಚಿನಲ್ಲಿ ನಿಂತು ಜೀವದ ಹಂಗು ತೊರೆದು ರಕ್ಷಣೆ ಮಾಡುವ ಫಾರೆಸ್ಟ್ ಗಾರ್ಡ್, ವಾಚರ್ ಹಾಗೂ ಡೆಪ್ಯುಟಿ ರೇಂಜರ್‌ಗಳ ಸ್ಥಿತಿ ಅತ್ಯಂತ ದಯನೀಯವಾಗಿದೆ. ಚಾಮರಾಜನಗರ ಅರಣ್ಯ ವೃತ್ತದ ಬಿ.ಆರ್.ಟಿ, ಕಾವೇರಿ ಮತ್ತು ಮಲೆ ಮಹದೇಶ್ವರ ಬೆಟ್ಟಗಳ ವ್ಯಾಪ್ತಿಯಲ್ಲೇ ಕಳೆದ 10 ವರ್ಷಗಳಲ್ಲಿ 3,700 ಕ್ಕೂ ಹೆಚ್ಚು ಅರಣ್ಯ ಅಪರಾಧಗಳು, 777 ಘೋರ ಅಪರಾಧಗಳು, 378 ಬೇಟೆ ಪ್ರಕರಣಗಳು ಹಾಗೂ 66 ಭೀಕರ ಗುಂಡಿನ ಚಕಮಕಿಗಳು ದಾಖಲಾಗಿವೆ. ಇದು ಕೇವಲ ಬೆಳಕಿಗೆ ಬಂದ ಕೇವಲ ಶೇ. 5 ರಿಂದ 10 ರಷ್ಟು ಪ್ರಕರಣಗಳು ಮಾತ್ರ!
ಮಾರಕಾಸ್ತ್ರಗಳು, ಜೆಲಟಿನ್ ಸ್ಪೋಟಕ ಹಾಗೂ ನಾಡಬಂದೂಕುಗಳನ್ನು ಹಿಡಿದು ನುಗ್ಗುವ ಅಕ್ರಮ ಬೇಟೆಗಾರರ ಎದುರು ನಮ್ಮ ಸಿಬ್ಬಂದಿಗೆ ಸೂಕ್ತ ಆತ್ಮರಕ್ಷಣಾ ಸ್ವಾತಂತ್ರ್ಯವಿಲ್ಲ. ಇತ್ತೀಚೆಗೆ ಹನೂರು ಅರಣ್ಯ ವ್ಯಾಪ್ತಿಯ ಕರಡಿಕಲ್ಲು ಗುಡ್ಡದಲ್ಲಿ ನಡೆದ ಘಟನೆಯೇ ಆಡಳಿತ ವ್ಯವಸ್ಥೆಯ ನೈತಿಕ ದಿವಾಳಿತನಕ್ಕೆ ಸಾಕ್ಷಿ. ಕಾಡಿನೊಳಗೆ 4 ರಿಂದ 8 ಕಿಲೋಮೀಟರ್ ಆಳದಲ್ಲಿ ಅಕ್ರಮವಾಗಿ ನುಗ್ಗಿದ ಬೇಟೆಗಾರರು ಗುಂಡು ಹಾರಿಸಿದಾಗ, ಪ್ರತಿಯಾಗಿ ಸಿಬ್ಬಂದಿ ಆತ್ಮರಕ್ಷಣೆಗೆ ಗುಂಡು ಹಾರಿಸಿದರು. ಆದರೆ ಸರ್ಕಾರ ಮತ್ತು ಇಲಾಖೆಯ ಉನ್ನತಾಧಿಕಾರಿಗಳು ತಮ್ಮ ಸಿಬ್ಬಂದಿಯ ಬೆನ್ನಿಗೆ ನಿಲ್ಲುವ ಬದಲು, ಸ್ಥಳೀಯ ರಾಜಕೀಯ ಒತ್ತಡಕ್ಕೆ ಮಣಿದು ಕರ್ತವ್ಯನಿರತ ಸಿಬ್ಬಂದಿಯ ಮೇಲೆಯೇ ಐಪಿಸಿ ಸೆಕ್ಷನ್ 302 ಅಡಿಯಲ್ಲಿ ಕೊಲೆ ಮೊಕದ್ದಮೆ ದಾಖಲಿಸಿ, ಮ್ಯಾಜಿಸ್ಟ್ರೇಟ್ ವರದಿಗೂ ಮುನ್ನವೇ ಸಿಐಡಿ ತನಿಖೆಗೆ ವಹಿಸಿದರು!
1988-91ರ ಅವಧಿಯಲ್ಲಿ ಕೆ.ಎಂ. ಚಿಣ್ಣಪ್ಪ ಅವರ ಮೇಲಾದ ದೌರ್ಜನ್ಯ ಮತ್ತು ಆರ್.ಎಫ್.ಒ ಚಿದಂಬರಂ ಅವರ ಹತ್ಯೆಯ ನಂತರ ಜಾರಿಗೆ ಬಂದ 1991ರ ಸೆಪ್ಟೆಂಬರ್ 20ರ ಸರ್ಕಾರದ ‘ಇಮ್ಯೂನಿಟಿ ಆದೇಶ’ ಕೇವಲ ಕಾಗದದ ಹುಲಿಯಾಗಿಯೇ ಉಳಿದಿದೆ. ಬೇಟೆಗಾರರು ಮದ್ದುಗುಂಡು ಹಾರಿಸುವಾಗ ಸಿಬ್ಬಂದಿ ತಮ್ಮ ಕೈಯಲ್ಲಿರುವ ಗನ್ ಹಿಡಿದು ಪೂಜೆ ಮಾಡಬೇಕೇ ಎಂಬ ಹಿರಿಯ ಅಧಿಕಾರಿಗಳ ಪ್ರಶ್ನೆಗೆ ಉತ್ತರಿಸುವ ಧೈರ್ಯ ಸರ್ಕಾರಕ್ಕಿಲ್ಲ. ಪರಿಣಾಮವಾಗಿ, ಸಿಬ್ಬಂದಿಯ ನೈತಿಕ ಸ್ಥೈರ್ಯ ಸಂಪೂರ್ಣ ಕುಸಿದಿದ್ದು, ಚೆಕ್‌ಪೋಸ್ಟ್‌ಗಳ ಮೇಲೆ ಜೆಲಟಿನ್ ದಾಳಿಗಳು ನಡೆದರೂ ಗಸ್ತು ತಿರುಗಲು ಭಯಪಡುವಂತಹ ವಾತಾವರಣ ಸೃಷ್ಟಿಯಾಗಿದೆ.
ಮತ್ತೊಬ್ಬ ವೀರಪ್ಪನ್ ಹುಟ್ಟಿಗೆ ವೇದಿಕೆಯಾಗದಿರಲಿ ಗಡಿ ಕಾಡುಗಳು:

ಕರ್ನಾಟಕ ಮತ್ತು ತಮಿಳುನಾಡು ಗಡಿಭಾಗಗಳಲ್ಲಿ ಇಂದು ನಡೆಯುತ್ತಿರುವ ಬೆಳವಣಿಗೆಗಳು ಕರಾಳ ವೀರಪ್ಪನ್ ಯುಗವನ್ನು ನೆನಪಿಸುತ್ತಿವೆ. ವೀರಪ್ಪನ್ ಕೂಡ ರಾತ್ರೋರಾತ್ರಿ ಸಾಮ್ರಾಜ್ಯ ಕಟ್ಟಿರಲಿಲ್ಲ; ಸಣ್ಣಪುಟ್ಟ ಶ್ರೀಗಂಧ ಕಡಿತ ಮತ್ತು ವನ್ಯಜೀವಿ ಬೇಟೆಯನ್ನು ಆರಂಭದಲ್ಲೇ ಚಿವುಟಿಹಾಕದ ಬೇಜವಾಬ್ದಾರಿಯೇ ಆತ ಬೃಹತ್ ರಕ್ಕಸನಾಗಿ ಬೆಳೆಯಲು ಕಾರಣವಾಯಿತು. ಗಡಿ ಗ್ರಾಮಗಳಲ್ಲಿ ಉದ್ಯೋಗವಿಲ್ಲದ ಹತಾಶೆ, ಹಣದ ಆಮಿಷ ಹಾಗೂ ಉಭಯ ರಾಜ್ಯಗಳ ಇಲಾಖೆಗಳ ನಡುವಿನ ಸಮನ್ವಯದ ಕೊರತೆಯನ್ನು ಆತ ಬಂಡವಾಳ ಮಾಡಿಕೊಂಡಿದ್ದ.ಇಂದಿಗೂ ಅದೇ ಪರಿಸ್ಥಿತಿ ಮರುಕಳಿಸುತ್ತಿದೆ.
ತಮಿಳುನಾಡು ಗಡಿಯಿಂದ ಸಾವಿರಾರು ದನ, ಕುರಿ-ಮೇಕೆಗಳನ್ನು ಉದ್ದೇಶಪೂರ್ವಕವಾಗಿ ಕರ್ನಾಟಕದ ಅಭಯಾರಣ್ಯಗಳೊಳಗೆ ನುಗ್ಗಿಸಲಾಗುತ್ತಿದೆ. “ದನ ಕಳೆದುಹೋಗಿದೆ” ಎಂಬ ನೆಪವೊಡ್ಡಿ ರಾತ್ರೋರಾತ್ರಿ ಕಾಡಿಗೆ ಹೊಗುವವರ ಹಿಂದೆ ಶ್ರೀಗಂಧ ಮತ್ತು ಬೇಟೆ ಮಾಫಿಯಾದ ನಂಟಿರುತ್ತದೆ. ಕಾಡಿನೊಳಗೆ ಪ್ಲಾಸ್ಟಿಕ್ ಕವರ್‌ಗಳಲ್ಲಿ ಸುತ್ತಿ ಭೂಮಿಯಲ್ಲಿ ಹೂತಿಟ್ಟಿರುವ ಅಕ್ರಮ ಬಂದೂಕುಗಳು ಹಾಗೂ ಸ್ಫೋಟಕಗಳು ಯಾವುದೇ ಕ್ಷಣದಲ್ಲೂ ಮತ್ತೊಂದು ಭೀಕರ ದಂಗೆಯನ್ನು ಸೃಷ್ಟಿಸಬಲ್ಲವು. ರಾಜಕಾರಣಿಗಳ ಶಿಫಾರಸು ಪತ್ರಗಳ ಮೇಲೆ ನಡೆಯುವ ವರ್ಗಾವಣೆಗಳು ಹಾಗೂ ಭ್ರಷ್ಟಾಚಾರ, ಇಡೀ ರಕ್ಷಣಾ ವ್ಯವಸ್ಥೆಯ ಬೆನ್ನೆಲುಬನ್ನೇ ಮುರಿದುಹಾಕಿವೆ.
ಪರಿಹಾರ ಸೂತ್ರ: ಭವಿಷ್ಯದ ದೃಷ್ಟಿಯಿಂದ ಸರ್ಕಾರ ತಕ್ಷಣ ಮಾಡಬೇಕಾದ ಕ್ರಾಂತಿಕಾರಿ ಕ್ರಮಗಳು
ಕೇವಲ ಗಿಡ ನೆಡುವ ಕಾಟಾಚಾರದ ಯೋಜನೆಗಳಿಂದ ಶ್ರೀಗಂಧ ಮತ್ತು ಕಾಡನ್ನು ಉಳಿಸಲು ಸಾಧ್ಯವಿಲ್ಲ. ರಾಜ್ಯ ಸರ್ಕಾರ ರಾಜಕೀಯ ಹಿತಾಸಕ್ತಿ ಬದಿಗಿಟ್ಟು ಕಟ್ಟುನಿಟ್ಟಿನ ‘ಶೂನ್ಯ ಸಹಿಷ್ಣುತಾ ಅರಣ್ಯ ನೀತಿ’ (Zero Tolerance Forest Policy) ಪ್ರಕಟಿಸಬೇಕಿದೆ:
ಕಾನೂನು ರಕ್ಷಣೆ ಮತ್ತು ಇಮ್ಯೂನಿಟಿ ತಿದ್ದುಪಡಿ: ಅಸ್ಸಾಂನ ಕಾಜಿರಂಗ ಮಾದರಿಯಲ್ಲಿ ಅಥವಾ ಸಿಆರ್‌ಪಿಸಿ ಸೆಕ್ಷನ್ 197 ಮಾದರಿಯ ಕಠಿಣ ಶಾಸನಬದ್ಧ ರಕ್ಷಣೆಯನ್ನು ಅರಣ್ಯ ಕಾಯ್ದೆಗೆ ತರಬೇಕು. ಕಾಡಿನೊಳಗೆ ಕರ್ತವ್ಯ ನಿರ್ವಹಿಸುವಾಗ ಶಸ್ತ್ರಾಸ್ತ್ರ ಪ್ರಯೋಗಿಸಿದ ಸಿಬ್ಬಂದಿ ವಿರುದ್ಧ ಸರ್ಕಾರದ ಪೂರ್ವಾನುಮತಿ ಇಲ್ಲದೆ ಯಾವುದೇ ಕ್ರಿಮಿನಲ್ ಪ್ರಕರಣ ದಾಖಲಿಸುವುದನ್ನು ಕಡ್ಡಾಯವಾಗಿ ನಿಷೇಧಿಸಬೇಕು. ಆತ್ಮರಕ್ಷಣೆಗೆ ಸಿಬ್ಬಂದಿಗೆ ಸುಧಾರಿತ ಸ್ವಯಂಚಾಲಿತ ಗನ್‌ಗಳು, 4×4 ವಾಹನಗಳು ಹಾಗೂ ನೈಟ್-ವಿಷನ್ ಡ್ರೋನ್‌ಗಳನ್ನು ಒದಗಿಸಬೇಕು.
ವನ್ಯಜೀವಿ ಮತ್ತು ಅರಣ್ಯ ಕಾಯ್ದೆಗಳಿಗೆ ತೀವ್ರ ತಿದ್ದುಪಡಿ: 1963ರ ಕರ್ನಾಟಕ ಅರಣ್ಯ ಕಾಯ್ದೆ ಮತ್ತು 1972ರ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಸೆಕ್ಷನ್ 51ಕ್ಕೆ ತಿದ್ದುಪಡಿ ತಂದು, ಶ್ರೀಗಂಧ ಕಳ್ಳಸಾಗಣೆ ಮತ್ತು ವನ್ಯಜೀವಿ ಬೇಟೆಯ ಶಿಕ್ಷೆಯನ್ನು ಕನಿಷ್ಠ 7 ರಿಂದ 14 ವರ್ಷಗಳ ಕಠಿಣ ಜೈಲು ಶಿಕ್ಷೆಯನ್ನಾಗಿ ಹೆಚ್ಚಿಸಬೇಕು. ಈ ಅಪರಾಧಗಳನ್ನು ಜಾಮೀನುರಹಿತ ‘ಸಂಘಟಿತ ಅಪರಾಧ’ಗಳೆಂದು ಪರಿಗಣಿಸಿ, ಆರೋಪಿಗಳು ಮತ್ತು ಅವರ ಬೆಂಬಲಿಗರ ಚರ-ಸ್ಥಿರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಶಾಸನಬದ್ಧ ಅಧಿಕಾರವನ್ನು ಡಿಸಿಎಫ್ (DCF) ಮಟ್ಟದ ಅಧಿಕಾರಿಗಳಿಗೆ ನೀಡಬೇಕು.
ಸ್ವತಂತ್ರ ಅರಣ್ಯ ಬೇಹುಗಾರಿಕಾ ದಳ (Forest Intelligence Cell): ಸ್ಥಳೀಯ ಹಂತದ ಅಪರಾಧಗಳನ್ನು ದಾಖಲಿಸುವುದಕ್ಕಷ್ಟೇ ಸೀಮಿತವಾಗಿರದೆ, ಅಂತಾರಾಷ್ಟ್ರೀಯ ಹವಾಲಾ ಹಾಗೂ ಡಾರ್ಕ್‌ವೆಬ್ ಆಧಾರಿತ ಕಳ್ಳಸಾಗಣೆ ಸಿಂಡಿಕೇಟ್‌ಗಳನ್ನು ಭೇದಿಸಲು ರಾಜ್ಯ ಮಟ್ಟದಲ್ಲಿ ಪ್ರತ್ಯೇಕ ‘ಫಾರೆಸ್ಟ್ ಇಂಟೆಲಿಜೆನ್ಸ್ ವಿಂಗ್’ ಸ್ಥಾಪನೆಯಾಗಬೇಕು. ಇದು ಪೊಲೀಸ್, ಡಬ್ಲ್ಯುಸಿಸಿಬಿ (WCCB) ಮತ್ತು ಇಂಟರ್‌ಪೋಲ್ ಜೊತೆ ನೇರ ಸಮನ್ವಯ ಹೊಂದಿರಬೇಕು.
ಕೆಳಹಂತದ ಸಿಬ್ಬಂದಿ ಕಲ್ಯಾಣ ಮತ್ತು ಖಾಲಿ ಹುದ್ದೆಗಳ ಭರ್ತಿ: ಕಳೆದ 15-20 ವರ್ಷಗಳಿಂದ ಅತ್ಯಂತ ಕಡಿಮೆ ವೇತನಕ್ಕೆ ದಿನಗೂಲಿ ಅಥವಾ ಹೊರಗುತ್ತಿಗೆ ಆಧಾರದ ಮೇಲೆ ಪ್ರಾಣ ಪಣಕ್ಕಿಟ್ಟು ದುಡಿಯುತ್ತಿರುವ ಸಾವಿರಾರು ‘ಅರಣ್ಯ ವೀಕ್ಷಕರನ್ನು’ (Watchers) ಯಾವುದೇ ಲಿಖಿತ ಪರೀಕ್ಷೆಯಿಲ್ಲದೆ ತಕ್ಷಣ ಕಾಯಂಗೊಳಿಸಬೇಕು. ಪೊಲೀಸ್ ಮಾದರಿಯ ಅಪಾಯಕಾರಿ ಭತ್ಯೆ (Risk Allowance), 50 ಲಕ್ಷ ರೂಪಾಯಿಗಳ ಉಚಿತ ಜೀವ ವಿಮೆ ಹಾಗೂ ನಗದುರಹಿತ ಸೂಪರ್ ಸ್ಪೆಷಾಲಿಟಿ ಚಿಕಿತ್ಸಾ ಸೌಲಭ್ಯ ಒದಗಿಸಬೇಕು.
ಕಾಡಂಚಿನ ಸಮುದಾಯಗಳ ಸಹಭಾಗಿತ್ವ: ಮಾನವ-ವನ್ಯಜೀವಿ ಸಂಘರ್ಷದಿಂದಾಗುವ ಬೆಳೆ ನಷ್ಟ ಮತ್ತು ಪ್ರಾಣಹಾನಿಗೆ ಡಿಜಿಟಲ್ ತಂತ್ರಜ್ಞಾನ ಬಳಸಿ 48 ಗಂಟೆಗಳ ಒಳಗಾಗಿ ಪರಿಹಾರ ಪಾವತಿಸಬೇಕು. ಕಾಡಂಚಿನ ಯುವಕರನ್ನು ‘ಆನೆ ಕಾರ್ಯಪಡೆ’ ಹಾಗೂ ಪರಿಸರ ಮಾರ್ಗದರ್ಶಿಗಳನ್ನಾಗಿ ನೇಮಿಸಿ, ಅರಣ್ಯ ರಕ್ಷಣೆಯಲ್ಲೇ ಅವರಿಗೆ ಸುಸ್ಥಿರ ಜೀವನೋಪಾಯ ಕಲ್ಪಿಸಬೇಕು. ಗಡಿಗಳಲ್ಲಿ ರೈಲ್ವೆ ಬ್ಯಾರಿಕೇಡ್‌ಗಳನ್ನು ಶಾಶ್ವತವಾಗಿ ನಿರ್ಮಿಸಿ ಸಂಘರ್ಷ ತಗ್ಗಿಸಬೇಕು.
ಕರ್ನಾಟಕದ ಶ್ರೀಗಂಧದ ಸುವಾಸನೆ ಕೇವಲ ಅಕ್ರಮ ವ್ಯಾಪಾರಿಗಳ ಜೇಬು ತುಂಬಿಸುವ ಸರಕಾಗಬಾರದು. ಅಧಿಕಾರಶಾಹಿ ಉದಾಸೀನತೆ ಹಾಗೂ ರಾಜಕೀಯ ರಕ್ಷಣೆಯನ್ನು ಕಿತ್ತೊಗೆದು, ಕಾಡು ಕಾಯುವ ಸಿಬ್ಬಂದಿಯ ಕೈಗೆ ಬಲವಾದ ಕಾನೂನಿನ ಶಕ್ತಿ ನೀಡದಿದ್ದರೆ, ಮುಂದಿನ ಪೀಳಿಗೆಗೆ ಶ್ರೀಗಂಧ ಮತ್ತು ವನ್ಯಜೀವಿಗಳು ಕೇವಲ ಪಠ್ಯಪುಸ್ತಕಗಳ ಚಿತ್ರಗಳಾಗಿ ಉಳಿಯುವುದರಲ್ಲಿ ಯಾವುದೇ ಸಂಶಯವಿಲ್ಲ. (ಕೃಪೆ: ಕಸ್ತೂರಿ)


















