ಬೆಂಗಳೂರು, ಅ.28 www.bengaluruwire.com: ರಾಜಧಾನಿ ಬೆಂಗಳೂರಿನ ನೈರ್ಮಲ್ಯ ವ್ಯವಸ್ಥೆ ಮತ್ತು ಮೂಲಸೌಕರ್ಯಗಳನ್ನು ಸಂಪೂರ್ಣವಾಗಿ ಆಧುನೀಕರಿಸಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಸಜ್ಜಾಗಿದೆ.
ನಗರದ 27 ವಿಧಾನಸಭಾ ಕ್ಷೇತ್ರಗಳನ್ನು 33 ಪ್ಯಾಕೇಜ್ಗಳಾಗಿ ವಿಂಗಡಿಸಿ ನೂತನ ತ್ಯಾಜ್ಯ ವಿಲೇವಾರಿ ಟೆಂಡರ್ ಪ್ರಕ್ರಿಯೆ ಕೈಗೆತ್ತಿಕೊಳ್ಳಲಾಗಿದ್ದು, ಇದರೊಂದಿಗೆ ನಗರದ ಪ್ರಮುಖ ಸಮಸ್ಯೆಗಳನ್ನು ಪರಿಹರಿಸಲು ನವೆಂಬರ್ 1ರಿಂದ ‘ವಾರ್ಡ್ ಒನ್’ ಸಮಗ್ರ ಅಭಿಯಾನ ಆರಂಭವಾಗಲಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಘೋಷಿಸಿದ್ದಾರೆ.
ಬುಧವಾರ ಜಿಬಿಎ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿ ಹಾಗೂ ಉನ್ನತ ಮಟ್ಟದ ಅಧಿಕಾರಿಗಳ ಸಭೆಯ ನಂತರ ಮಾತನಾಡಿದ ಅವರು, ನಗರದ ಸ್ವಚ್ಛತೆ, ರಸ್ತೆ ಗುಂಡಿ ಮುಚ್ಚುವುದು ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಕೈಗೊಂಡಿರುವ ನಿರ್ಣಾಯಕ ಯೋಜನೆಗಳ ವಿವರಗಳನ್ನು ಹಂಚಿಕೊಂಡರು.
33 ಪ್ಯಾಕೇಜ್ಗಳಲ್ಲಿ ಹೊಸ ಕಸ ವಿಲೇವಾರಿ ವ್ಯವಸ್ಥೆ:

ನಗರದಾದ್ಯಂತ ಕಸ ವಿಲೇವಾರಿಯನ್ನು ಪಾರದರ್ಶಕ ಹಾಗೂ ವೈಜ್ಞಾನಿಕವಾಗಿ ನಿರ್ವಹಿಸಲು 27 ವಿಧಾನಸಭಾ ಕ್ಷೇತ್ರಗಳನ್ನು 33 ಪ್ಯಾಕೇಜ್ಗಳನ್ನಾಗಿ ವಿಭಾಗಿಸಲಾಗಿದೆ. ಪ್ರತಿಯೊಂದು ಪ್ಯಾಕೇಜ್ಗೆ ಗುತ್ತಿಗೆದಾರರು ₹10 ಕೋಟಿ ಬಂಡವಾಳ ಹೂಡಿಕೆ ಮಾಡಲಿದ್ದು, ಸಂಪೂರ್ಣ ವ್ಯವಸ್ಥೆ ರೂಪಿಸಲು 1.5 ರಿಂದ 2 ತಿಂಗಳ ಕಾಲಾವಕಾಶ ನೀಡಲಾಗಿದೆ.
5 ಪ್ಯಾಕೇಜ್ಗಳಿಗೆ ಕಾರ್ಯಾದೇಶ: ಈಗಾಗಲೇ 5 ಕ್ಷೇತ್ರಗಳಿಗೆ ವರ್ಕ್ ಆರ್ಡರ್ ನೀಡಲಾಗಿದ್ದು, ನವೆಂಬರ್ನಿಂದ ಅಧಿಕೃತ ಕಾರ್ಯಾಚರಣೆ ಆರಂಭವಾಗಲಿದೆ.
ಅನುಮೋದನೆ ಹಾಗೂ ಬಿಡ್ಡಿಂಗ್: 3 ಪ್ಯಾಕೇಜ್ಗಳಿಗೆ ಒಪ್ಪಿಗೆ ಪತ್ರ ನೀಡಲಾಗಿದ್ದು, 10 ಪ್ಯಾಕೇಜ್ಗಳು ಸರ್ಕಾರದ ಆಡಳಿತಾತ್ಮಕ ಒಪ್ಪಿಗೆಗೆ ಸಲ್ಲಿಕೆಯಾಗಿವೆ. ಇನ್ನುಳಿದ 10 ಪ್ಯಾಕೇಜ್ಗಳ ಪೈಕಿ ಅಕ್ಟೋಬರ್ 30 ಮತ್ತು ನವೆಂಬರ್ 1ರಂದು ತಲಾ ಒಂದೊಂದು ಪ್ಯಾಕೇಜ್ ಬಿಡ್ಡಿಂಗ್ ನಡೆಯಲಿದೆ. ನ್ಯಾಯಾಲಯದಲ್ಲಿರುವ 3 ಪ್ಯಾಕೇಜ್ಗಳಿಗೂ ಕಾನೂನು ಪ್ರಕ್ರಿಯೆ ಮುಗಿದ ತಕ್ಷಣ ಟೆಂಡರ್ ಕರೆಯಲಾಗುತ್ತದೆ.
ಟೆಂಡರ್ ಆರೋಪ ನಿರಾಕರಣೆ: ಪ್ರಸ್ತುತ ವಾರ್ಷಿಕ ₹597 ಕೋಟಿ ವೆಚ್ಚವಾಗುತ್ತಿದ್ದು, ಅತ್ಯಾಧುನಿಕ ವಾಹನ ಮತ್ತು ತಂತ್ರಜ್ಞಾನದಿಂದ ಇದು ₹620 ಕೋಟಿಗೆ ತಲುಪಬಹುದು. ಶೇ. 5 ರಿಂದ 6 ರಷ್ಟು ನಿಗದಿತ ಅಂದಾಜು ದರದಲ್ಲಿ ಪಾರದರ್ಶಕವಾಗಿ ಟೆಂಡರ್ ಹಂಚಿಕೆಯಾಗಿದ್ದು, ಟೆಂಡರ್ ಸಿಗದ ಕೆಲವರು ನಿರಾಶೆಯಿಂದ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಸಚಿವರು ಸ್ಪಷ್ಟಪಡಿಸಿದರು.
ಜಿಪಿಎಸ್, ಫೇಸ್ ರೆಕಗ್ನಿಷನ್ ಹಾಗೂ 3-5 ಟನ್ ವಾಹನಗಳ ಎಂಟ್ರಿ:
15 ವರ್ಷ ಹಳೆಯದಾದ, ಪದೇ ಪದೇ ಕೆಟ್ಟು ನಿಲ್ಲುತ್ತಿದ್ದ ಹಳೆಯ ವಾಹನಗಳನ್ನು ರಸ್ತೆಯಿಂದ ಸಂಪೂರ್ಣವಾಗಿ ತೆರವುಗೊಳಿಸಲು ನಿರ್ಧರಿಸಲಾಗಿದೆ.
ಪ್ರಸ್ತುತ ಇರುವ 500 ಕೆಜಿ ಸಾಮರ್ಥ್ಯದ ಆಟೋ ಟಿಪ್ಪರ್ಗಳ ಬದಲಿಗೆ 3 ರಿಂದ 5 ಟನ್ ಸಾಮರ್ಥ್ಯದ 4 ಚಕ್ರದ ವಾಹನಗಳನ್ನು ಬಳಸಲಾಗುತ್ತದೆ. ಕಿರಿದಾದ ಗಲ್ಲಿಗಳಲ್ಲಿ ಮಾತ್ರ 3 ಚಕ್ರದ ವಾಹನಗಳು ಸಂಚರಿಸಲಿವೆ. ಇದರಿಂದ ನಗರದ ದಿನಂಪ್ರತಿ ತ್ಯಾಜ್ಯ ಸಂಗ್ರಹ ಸಾಮರ್ಥ್ಯ 5,200 ಟನ್ನಿಂದ 9,000 ಟನ್ಗೆ ಏರಿಕೆಯಾಗಲಿದೆ. ಪ್ರತಿಯೊಂದು ವಾಹನಕ್ಕೂ ಕಡ್ಡಾಯ ಜಿಪಿಎಸ್ ಅಳವಡಿಕೆ ಹಾಗೂ ಸಿಬ್ಬಂದಿಗೆ ಫೇಸ್ ರೆಕಗ್ನಿಷನ್ ಹಾಜರಾತಿ ಜಾರಿಗೆ ತರಲಾಗುತ್ತಿದೆ. ನಾಗರಿಕರು ಕಸವನ್ನು ಬಕೆಟ್ಗಳಲ್ಲಿ ಹಾಕಿ ಕಾಂಪೌಂಡ್ ಅಥವಾ ಗೇಟ್ಗೆ ತೂಗುಹಾಕಿದರೆ ಪೌರಕಾರ್ಮಿಕರೇ ಬಂದು ವಿಲೇವಾರಿ ಮಾಡಲಿದ್ದಾರೆ.
ನವೆಂಬರ್ 1ರಿಂದ ಸಮಗ್ರ ‘ವಾರ್ಡ್ ಒನ್’ ಅಭಿಯಾನ:
ಮಳೆಯಿಂದ ಹಾನಿಗೊಳಗಾದ ರಸ್ತೆಗಳ ದುರಸ್ತಿ ಹಾಗೂ ವಾರ್ಡ್ಗಳ ಸಮಗ್ರ ಸುಧಾರಣೆಗೆ ಜಿಬಿಎ ವ್ಯಾಪ್ತಿಯ 5 ನಗರ ಪಾಲಿಕೆಗಳಲ್ಲಿ ನವೆಂಬರ್ 1ರಿಂದ ತಿಂಗಳ ಪೂರ್ತಿ ‘ವಾರ್ಡ್ ಒನ್’ ಮಹಾ ಅಭಿಯಾನ ನಡೆಯಲಿದೆ.
ವಿಭಾಗವಾರು ಮಾದರಿ ಆಯ್ಕೆ: ಪ್ರತಿಯೊಂದು ಪಾಲಿಕೆಯ ಪ್ರತಿ ವಿಭಾಗದಿಂದ ಒಂದು ನಿರ್ದಿಷ್ಟ ವಾರ್ಡ್ ಆಯ್ಕೆ ಮಾಡಿಕೊಂಡು, ಎಲ್ಲ ಇಲಾಖೆಗಳು ಒಟ್ಟಾಗಿ ಪರಿಹಾರ ಕಾರ್ಯಾಚರಣೆ ನಡೆಸಲಿವೆ.
ಆದ್ಯತಾ ಕಾರ್ಯಗಳು: ರಸ್ತೆ ಗುಂಡಿ ಮುಚ್ಚುವುದು, ಪ್ರಮುಖ ಜಂಕ್ಷನ್ಗಳ ದುರಸ್ತಿ, ಪಾದಚಾರಿ ಮಾರ್ಗಗಳ ಕರ್ಬ್ಸ್ಟೋನ್-ಸ್ಲ್ಯಾಬ್ ಸರಿಪಡಿಸುವುದು, ಒಳಚರಂಡಿ ಚೇಂಬರ್ ಮುಚ್ಚಳ, ಬೀದಿ ದೀಪ ಹಾಗೂ ಒಣ ಮರದ ಕೊಂಬೆ ತೆರವು ಕಾರ್ಯಗಳು ನಡೆಯಲಿವೆ.
ಅಂತರ-ಇಲಾಖಾ ಸಮನ್ವಯ: ಬೆಸ್ಕಾಂ ವಿದ್ಯುತ್ ಕಂಬ, ಆರ್ಎಂಯು ಘಟಕಗಳ ಸ್ಥಳಾಂತರ ಹಾಗೂ ಜಲಮಂಡಳಿಯ ನೀರಿನ ಸೋರಿಕೆ ಪೈಪ್ಗಳ ದುರಸ್ತಿಗೆ ಜಂಟಿ ಸಮಿತಿಗಳು ಕೆಲಸ ಮಾಡಲಿವೆ.
ವಾರ್ಡ್ ಸಹಾಯಕ ಅಭಿಯಂತರರು, ಆರೋಗ್ಯ ಪರಿವೀಕ್ಷಕರು ಮತ್ತು ಮಾರ್ಷಲ್ಗಳು ಚೆಕ್ಲಿಸ್ಟ್ ಆಧಾರದ ಮೇಲೆ ಸ್ಥಳೀಯ ಸಮಸ್ಯೆಗಳ ಪಟ್ಟಿ ಸಿದ್ಧಪಡಿಸಲಿದ್ದು, ನವೆಂಬರ್ ಅಂತ್ಯದೊಳಗೆ ನಿಗದಿತ ಗಡುವಿನಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸಲು ಸಚಿವರು ಆದೇಶಿಸಿದ್ದಾರೆ.




















