ಬೆಂಗಳೂರು, ಅ.27 www.bengaluruwire.com: ದೇಶದ ವಾಣಿಜ್ಯ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಕಚೇರಿ ಸ್ಥಳಗಳ ಬಾಡಿಗೆ (Office Leasing) ವ್ಯವಹಾರವು ಸಾರ್ವಕಾಲಿಕ ದಾಖಲೆ ಬರೆದಿದೆ.
2026ರ ಜನವರಿಯಿಂದ ಸೆಪ್ಟೆಂಬರ್ ವರೆಗಿನ ಮೊದಲ ಒಂಬತ್ತು ತಿಂಗಳಲ್ಲಿ ಭಾರತದ ಪ್ರಮುಖ 7 ನಗರಗಳಲ್ಲಿ ಒಟ್ಟು ಕಚೇರಿ ಗುತ್ತಿಗೆ ಪ್ರಮಾಣ 6.10 ಕೋಟಿ ಚದರ ಅಡಿಗೆ (61.06 ಮಿಲಿಯನ್ ಚದರ ಅಡಿ) ತಲುಪಿದೆ ಎಂದು ರಿಯಲ್ ಎಸ್ಟೇಟ್ ಸೇವಾ ಸಂಸ್ಥೆ ಜೆಎಲ್‌ಎಲ್ (JLL) ತಿಳಿಸಿದೆ. ಇದು ಭಾರತದ ಕಚೇರಿ ಮಾರುಕಟ್ಟೆ ಇತಿಹಾಸದಲ್ಲೇ ಮೊದಲ ಒಂಬತ್ತು ತಿಂಗಳ ಗರಿಷ್ಠ ಸಾಧನೆಯಾಗಿದೆ.
ಬೆಂಗಳೂರಿಗೆ ಸಿಂಹಪಾಲು: ದೇಶದ ವಾಣಿಜ್ಯ ಗುತ್ತಿಗೆ ವಹಿವಾಟಿನಲ್ಲಿ ಸಿಲಿಕಾನ್ ಸಿಟಿ ಬೆಂಗಳೂರು ಎಂದಿನಂತೆ ಅಗ್ರಸ್ಥಾನ ಕಾಯ್ದುಕೊಂಡಿದೆ. ಒಟ್ಟು ಬಾಡಿಗೆ ಒಪ್ಪಂದಗಳಲ್ಲಿ ಬೆಂಗಳೂರು ಶೇ. 28ರಷ್ಟು (1.71 ಕೋಟಿ ಚದರ ಅಡಿ) ಪಾಲನ್ನು ಹೊಂದಿದ್ದು, ದೇಶದಲ್ಲೇ ಪ್ರಥಮ ಸ್ಥಾನದಲ್ಲಿದೆ. ದೆಹಲಿ-ಎನ್‌ಸಿಆರ್ (1.07 ಕೋಟಿ ಚದರ ಅಡಿ) ಹಾಗೂ ಹೈದರಾಬಾದ್ (99.3 ಲಕ್ಷ ಚದರ ಅಡಿ) ನಂತರದ ಸ್ಥಾನಗಳಲ್ಲಿವೆ.
ಜಿಸಿಸಿ (GCC) ಪಾಲು ಶೇ. 42.9: ಕಚೇರಿ ಸ್ಥಳಗಳ ಗುತ್ತಿಗೆ ಏರಿಕೆಗೆ ಜಾಗತಿಕ ಸಾಮರ್ಥ್ಯ ಕೇಂದ್ರಗಳು (Global Capability Centres – GCC) ಪ್ರಮುಖ ಚಾಲನಾ ಶಕ್ತಿಯಾಗಿವೆ. ಜನವರಿಯಿಂದ ಸೆಪ್ಟೆಂಬರ್ ಅವಧಿಯಲ್ಲಿ ಜಿಸಿಸಿಗಳು ಒಟ್ಟು 2.62 ಕೋಟಿ ಚದರ ಅಡಿ ಜಾಗವನ್ನು ಬಾಡಿಗೆಗೆ ಪಡೆದುಕೊಂಡಿದ್ದು, ಇದು ಒಟ್ಟು ಗುತ್ತಿಗೆ ವಹಿವಾಟಿನ ಶೇ. 42.9ರಷ್ಟಾಗಿದೆ. ಬ್ಯಾಂಕಿಂಗ್, ಹಣಕಾಸು ಸೇವೆಗಳು, ತಂತ್ರಜ್ಞಾನ ಸಂಶೋಧನೆ ಮತ್ತು ಅಭಿವೃದ್ಧಿ (R&D) ಹಾಗೂ ಏರೋಸ್ಪೇಸ್ ವಲಯಗಳ ಕಂಪನಿಗಳು ಕಚೇರಿ ವಿಸ್ತರಣೆಗೆ ಹೆಚ್ಚು ಆಸಕ್ತಿ ತೋರಿವೆ.

ಮೂರನೇ ತ್ರೈಮಾಸಿಕದಲ್ಲಿ ಭರ್ಜರಿ ಜಿಗಿತ: ಜುಲೈ-ಸೆಪ್ಟೆಂಬರ್ (Q3) ತ್ರೈಮಾಸಿಕದಲ್ಲಿ ಕಚೇರಿ ಸ್ಥಳಗಳ ಬಾಡಿಗೆ ವಹಿವಾಟು ಗಣನೀಯವಾಗಿ ಹೆಚ್ಚಿದ್ದು, ಬರೋಬ್ಬರಿ 2.31 ಕೋಟಿ ಚದರ ಅಡಿ ವಹಿವಾಟು ನಡೆದಿದೆ. ಈ ತ್ರೈಮಾಸಿಕದಲ್ಲೂ ಬೆಂಗಳೂರು ಶೇ. 33.4ರಷ್ಟು ಪಾಲು ಪಡೆಯುವ ಮೂಲಕ ಮಾರುಕಟ್ಟೆಯನ್ನು ಮುನ್ನಡೆಸಿದೆ. ಹೊಸ ಕಟ್ಟಡಗಳ ಪೂರೈಕೆ ಹೆಚ್ಚಾದ ಕಾರಣ ಖಾಲಿ ಇರುವ ಕಚೇರಿ ಸ್ಥಳಗಳ ಪ್ರಮಾಣ (Vacancy) ಶೇ. 14.8ಕ್ಕೆ ತಲುಪಿದ್ದರೂ, ಬೇಡಿಕೆಯ ವೇಗವು ಭಾರತೀಯ ರಿಯಲ್ ಎಸ್ಟೇಟ್ ಮೇಲಿನ ಜಾಗತಿಕ ಕಂಪನಿಗಳ ವಿಶ್ವಾಸವನ್ನು ಎತ್ತಿಹಿಡಿದಿದೆ. (ಮಾಹಿತಿ ಮೂಲ: ಎಎನ್ಐ)

















