ಬೆಂಗಳೂರು, ಅ.28 www.bengaluruwire.com: ರಾಜಧಾನಿಯ ಜೀವನಾಡಿಯಾಗಿರುವ ನಮ್ಮ ಮೆಟ್ರೋ ರೈಲಿನಲ್ಲಿ ಮಹಿಳೆಯರ ಸುರಕ್ಷತೆ ಕುರಿತು ಸಾರ್ವಜನಿಕರಲ್ಲಿ ಮತ್ತೆ ತೀವ್ರ ಕಳವಳ ಮೂಡಿದೆ.
ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಯುವತಿಯೊಬ್ಬರ ವಿಡಿಯೋವನ್ನು ಆಕೆಯ ಅನುಮತಿಯಿಲ್ಲದೆ ಅಕ್ರಮವಾಗಿ ಚಿತ್ರೀಕರಿಸಿದ್ದಲ್ಲದೆ, ಅದನ್ನು ರೆಡ್ಹ್ಯಾಂಡಾಗಿ ಹಿಡಿದು ಪ್ರಶ್ನಿಸಿದ್ದಕ್ಕೆ ಆಕೆಯ ಮೊಬೈಲ್ ಕಿತ್ತುಕೊಂಡು ಆರೋಪಿಯೊಬ್ಬ ಪರಾರಿಯಾಗಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ಘಟನೆಯ ವಿವರ:
ಸೌಪಿಕಾ ಎಂಬ ಹೆಸರಿನ ಯುವತಿ ವೈಟ್ಫೀಲ್ಡ್ ಮಾರ್ಗದ ಮೆಟ್ರೋ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಈ ಘಟನೆ ನಡೆದಿದೆ. ಅಪರಿಚಿತ ವ್ಯಕ್ತಿಯೊಬ್ಬ ಆಕೆಗೆ ಅರಿವಿಲ್ಲದಂತೆ ತನ್ನ ಮೊಬೈಲ್ ಕ್ಯಾಮೆರಾದಲ್ಲಿ ವಿಡಿಯೋ ರೆಕಾರ್ಡ್ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಇದನ್ನು ತಕ್ಷಣವೇ ಗಮನಿಸಿದ ಯುವತಿ, ಆತನನ್ನು ಪ್ರಶ್ನಿಸಿದ್ದಾರೆ.

ಮೊಬೈಲ್ ಕಸಿದು ಪರಾರಿ:
ಯುವತಿ ಪ್ರಶ್ನಿಸುತ್ತಿದ್ದಂತೆ ಆತ ತಪ್ಪಿಸಿಕೊಳ್ಳಲು ಯತ್ನಿಸಿದ್ದು, “ನಾನೇನೂ ಮಾಡಿಲ್ಲ” ಎಂದು ಸಬೂಬು ನೀಡಿದ್ದಾನೆ. ಅಷ್ಟೇ ಅಲ್ಲದೆ, ವಿಷಯವನ್ನು ಗಂಭೀರವಾಗಿ ಪ್ರಶ್ನಿಸಿದಾಗ ದಿಢೀರನೆ ಯುವತಿಯ ಕೈಯಲ್ಲಿದ್ದ ಮೊಬೈಲ್ ಫೋನ್ ಅನ್ನೇ ಬಲವಂತವಾಗಿ ಕಿತ್ತುಕೊಂಡು, ಪಟ್ಟಂದೂರು ಅಗ್ರಹಾರ ಮೆಟ್ರೋ ನಿಲ್ದಾಣದಲ್ಲಿ ರೈಲು ನಿಲ್ಲುತ್ತಿದ್ದಂತೆ ಪರಾರಿಯಾಗಿದ್ದಾನೆ.
ಘಟನೆಗೆ ಸಂಬಂಧಿಸಿದಂತೆ ಯುವತಿ ಮೆಟ್ರೋ ಲಿಫ್ಟ್ ಬಳಿ ಆತನನ್ನು ಹಿಡಿದು ತರಾಟೆಗೆ ತೆಗೆದುಕೊಂಡಿದ್ದ ದೃಶ್ಯಗಳನ್ನು ಒಳಗೊಂಡ ವಿಡಿಯೋವನ್ನು ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ, “ಕ್ಷಮೆ ಕೇಳುತ್ತಿದ್ದೀಯಾ ಅಂದರೆ ವಿಡಿಯೋ ಮಾಡಿದ್ದನ್ನು ಒಪ್ಪಿಕೊಳ್ಳುತ್ತೀಯಾ? ಮೊಬೈಲ್ ಅನ್ಲಾಕ್ ಮಾಡು” ಎಂದು ಯುವತಿ ಪಟ್ಟುಹಿಡಿದಿರುವುದು ಕಂಡುಬಂದಿದೆ.
ಪೊಲೀಸರ ಸ್ಪಂದನೆ, ಎಫ್ಐಆರ್ ದಾಖಲು
ಈ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಬೆಂಗಳೂರು ನಗರ ಪೊಲೀಸರು ಯುವತಿಯನ್ನು ಸಂಪರ್ಕಿಸಿ ಮಾಹಿತಿ ಪಡೆದಿದ್ದಾರೆ. ನಂತರ ಸಂತ್ರಸ್ತೆ ಕಾಡುಗೋಡಿ ಪೊಲೀಸ್ ಠಾಣೆಗೆ ತೆರಳಿ ಅಧಿಕೃತ ದೂರು ನೀಡಿದ್ದು, ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಮೆಟ್ರೋ ನಿಲ್ದಾಣ ಹಾಗೂ ರೈಲಿನ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿರುವ ಪೊಲೀಸರು, ಪರಾರಿಯಾಗಿರುವ ಆರೋಪಿಯ ಪತ್ತೆಗೆ ತನಿಖೆ ಚುರುಕುಗೊಳಿಸಿದ್ದಾರೆ.


















