ಬೆಂಗಳೂರು, ಅ.27 www.bengaluruwire.com: ರಾಜ್ಯದ ಸರ್ಕಾರಿ ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಲ್ಲಿ ಕಲಿಕೆಯ ಗುಣಮಟ್ಟ ನಿರೀಕ್ಷಿತ ಮಟ್ಟದಲ್ಲಿಲ್ಲ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ (ಕೆಡಿಎ) ನಡೆಸಿರುವ ಸಮಗ್ರ ಅಧ್ಯಯನ ವರದಿ ತಿಳಿಸಿದೆ.
ಕೇವಲ ಬೋಧನಾ ಮಾಧ್ಯಮವನ್ನು ಇಂಗ್ಲಿಷ್ಗೆ ಬದಲಾಯಿಸುವುದರಿಂದಲೇ ಭಾಷಾ ಪ್ರಾವೀಣ್ಯ ಸಾಧ್ಯವಿಲ್ಲ; ಮಾತೃಭಾಷೆಯ ಬಲವಾದ ಅಡಿಪಾಯವಿಲ್ಲದೆ ಇಂಗ್ಲಿಷ್ ಕಲಿಯುವುದು ಕಷ್ಟಕರ ಎಂದು ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಎಚ್ಚರಿಸಿದ್ದಾರೆ.
2019-20ನೇ ಶೈಕ್ಷಣಿಕ ಸಾಲಿನಲ್ಲಿ ಇಂಗ್ಲಿಷ್ ಮಾಧ್ಯಮ ಆರಂಭಿಸಲಾದ ಆಯ್ದ ಸರ್ಕಾರಿ ಶಾಲೆಗಳ 6 ಮತ್ತು 7ನೇ ತರಗತಿ ವಿದ್ಯಾರ್ಥಿಗಳನ್ನು ಈ ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಶಿಕ್ಷಣ ತಜ್ಞರಾದ ಡಾ. ಜಿ. ಎಸ್. ಜಯದೇವ ಹಾಗೂ ಡಾ. ಕೃಷ್ಣಮೂರ್ತಿ ಹನೂರು ಅವರ ಸಹಯೋಗದಲ್ಲಿ ಆಲಿಸುವಿಕೆ, ಮಾತನಾಡುವಿಕೆ, ಓದುವಿಕೆ ಮತ್ತು ಬರವಣಿಗೆ (LSRW) ಕೌಶಲಗಳನ್ನು ಆಧರಿಸಿ ಈ ಮೌಲ್ಯಮಾಪನ ಸಿದ್ಧಪಡಿಸಲಾಗಿದೆ.
ಕೆಡಿಎ ವರದಿಯ ಪ್ರಮುಖ ಮುಖ್ಯಾಂಶಗಳು:

ಸಂವಹನ ಹಾಗೂ ಆತ್ಮವಿಶ್ವಾಸದ ಕೊರತೆ: ತರಗತಿಯ ಹೊರಗೆ ಇಂಗ್ಲಿಷ್ ಒಡನಾಟವಿಲ್ಲದ ಕಾರಣ ಮಕ್ಕಳು ಕೇವಲ ಒಂದೇ ಪದದಲ್ಲಿ ಉತ್ತರಿಸುತ್ತಿದ್ದಾರೆ. ಸ್ವತಂತ್ರ ವಾಕ್ಯ ರಚನೆ, ಸರಳ ಸಂಭಾಷಣೆ ಮತ್ತು ವೈಯಕ್ತಿಕ ಅನುಭವ ಹಂಚಿಕೊಳ್ಳುವಲ್ಲಿ ಹಿನ್ನಡೆ ಕಂಡುಬಂದಿದೆ.
ಕಾಗುಣಿತ ಹಾಗೂ ಬರವಣಿಗೆ ದೋಷ: ಚಿತ್ರಗಳನ್ನು ನೋಡಿ ಸಾಮಾನ್ಯ ವಸ್ತುಗಳ ಹೆಸರನ್ನು ಕಾಗುಣಿತ ದೋಷವಿಲ್ಲದೆ ಬರೆಯಲು 7ನೇ ತರಗತಿ ವಿದ್ಯಾರ್ಥಿಗಳೂ ಹೆಣಗಾಡುತ್ತಿದ್ದಾರೆ.
ಗ್ರಹಿಕೆಯಿಲ್ಲದ ಕಂಠಪಾಠ: ಪಠ್ಯವನ್ನು ಗಟ್ಟಿಯಾಗಿ ಓದಬಲ್ಲರಾದರೂ, ಅದರ ಅರ್ಥವನ್ನು ಗ್ರಹಿಸಿ ಸ್ವಂತವಾಗಿ ಉತ್ತರಿಸುವ ಸಾಮರ್ಥ್ಯ ಮಕ್ಕಳಲ್ಲಿ ಬೆಳೆದಿಲ್ಲ. ಕಲಿಕೆಯು ಕೇವಲ ಕಂಠಪಾಠಕ್ಕೆ ಸೀಮಿತವಾಗಿದೆ.
ಮಾತೃಭಾಷೆಯೇ ಶಿಕ್ಷಣಕ್ಕೆ ಮೂಲಾಧಾರ:
“ಮಾತೃಭಾಷೆಯಲ್ಲಿ ಶಿಕ್ಷಣ ನೀಡುವುದೇ ಅತ್ಯುತ್ತಮ ಮಾದರಿ. ಪರಿಚಿತ ಭಾಷೆಯಲ್ಲಿ ಗಟ್ಟಿಯಾದ ತಳಹದಿ ಇದ್ದಾಗ ಮಾತ್ರ ಇತರ ಭಾಷೆಗಳನ್ನು ಸುಲಭವಾಗಿ ಕಲಿಯಲು ಸಾಧ್ಯ. ವಾಸ್ತವ ಹೀಗಿರುವಾಗ ಮಾಧ್ಯಮವನ್ನೇ ಬದಲಾಯಿಸುವುದು ಆತ್ಮಹತ್ಯಾಕಾರಕ ನಿರ್ಧಾರ” ಎಂದು ಡಾ. ಪುರುಷೋತ್ತಮ ಬಿಳಿಮಲೆ ಪ್ರತಿಪಾದಿಸಿದ್ದಾರೆ.
ಪ್ರಾಧಿಕಾರವು ಈ ವರದಿಯನ್ನು ಈಗಾಗಲೇ ಸರ್ಕಾರಕ್ಕೆ ಸಲ್ಲಿಸಿದೆ. ಶಿಕ್ಷಣ ಇಲಾಖೆಯು ಇಂಗ್ಲಿಷ್ ಬೋಧಿಸುವ ಶಿಕ್ಷಕರಿಗೆ ತರಬೇತಿ ನೀಡಲು ಮುಂದಾಗುತ್ತಿದ್ದು, ಮಕ್ಕಳ ಕೇಂದ್ರಿತ ಹಾಗೂ ಸಂವಹನಾಧಾರಿತ ಬೋಧನಾ ವಿಧಾನಗಳು ಜಾರಿಗೆ ಬಂದರೆ ಮಾತ್ರ ಗುಣಮಟ್ಟ ಸುಧಾರಣೆ ಸಾಧ್ಯ ಎಂದು ವರದಿ ಸ್ಪಷ್ಟಪಡಿಸಿದೆ.


















