ಬೆಂಗಳೂರು, ಅ.31 www.bengaluruwire.com: ಐಟಿ ರಾಜಧಾನಿ ಬೆಂಗಳೂರು ಹಾಗೂ ಆರ್ಥಿಕ ರಾಜಧಾನಿ ಮುಂಬೈ ನಡುವೆ ಬಹುನಿರೀಕ್ಷಿತ ವಂದೇ ಭಾರತ್ ಸ್ಲೀಪರ್ ಎಕ್ಸ್‌ಪ್ರೆಸ್ (27651/27652) ಸೇವೆ ನ.1 ರಂದು ಉದ್ಘಾಟನೆಯಾಗಲಿದ್ದು, ಅಧಿಕೃತವಾಗಿ ನವೆಂಬರ್ 2 ರಿಂದ ವಾಣಿಜ್ಯ ಸಂಚಾರ ಆರಂಭವಾಗುತ್ತಿದೆ.
ಉದ್ಯಾನ ನಗರಿ ಮತ್ತು ವಾಣಿಜ್ಯ ನಗರಿಯ ನಡುವಿನ ಅಂತರವನ್ನು ಗಂಟೆಗಳ ಲೆಕ್ಕದಲ್ಲಿ ಕರಗಿಸುವ ಈ ರೈಲು, ಹಳಿಗಳ ಮೇಲೆ ವೇಗದ ಕ್ರಾಂತಿಯ ಭರವಸೆಯನ್ನೇನೋ ಹೊತ್ತು ತಂದಿದೆ. ಆದರೆ, ಹೊಳೆಯುವ ಕೋಚ್‌ಗಳು, ಹೈಟೆಕ್ ತಂತ್ರಜ್ಞಾನದ ಅಬ್ಬರದ ನಡುವೆ ಈ ರೈಲು ಸಾಮಾನ್ಯ ಜನರ ಕೈಗೆಟುಕಲಿದೆಯೇ ಅಥವಾ ಕೇವಲ ಮೇಲ್ವರ್ಗದ ಶೋಕಿಯ ಸರಕಾಗಲಿದೆಯೇ ಎಂಬ ತೀಕ್ಷ್ಣ ಪ್ರಶ್ನೆಗಳು ಈಗ ಮುನ್ನೆಲೆಗೆ ಬಂದಿವೆ.
22 ಗಂಟೆಯ ಯಾತನೆಗೆ ಮುಕ್ತಿ: ಪುಣೆಗೆ ಬರೀ 12 ಗಂಟೆ:
ಹಳೆಯ ಉದ್ಯಾನ್ ಎಕ್ಸ್‌ಪ್ರೆಸ್ ಅಥವಾ ಇತರ ಸಾಂಪ್ರದಾಯಿಕ ರೈಲುಗಳಲ್ಲಿ ಮುಂಬೈ ತಲುಪಲು ಸರಾಸರಿ 22 ರಿಂದ 24 ಗಂಟೆ ಬೇಕಾಗುತ್ತಿತ್ತು. ಪ್ರಯಾಣಿಕರಿಗೆ ಇಡೀ ದಿನ ರೈಲಿನಲ್ಲೇ ಕಳೆದುಹೋಗುವ ಪರಿಸ್ಥಿತಿ ಇತ್ತು. ಆದರೆ ಹೊಸ ವಂದೇ ಭಾರತ್ ಸ್ಲೀಪರ್ 1,118 ಕಿಲೋಮೀಟರ್ ದೂರವನ್ನು ಕೇವಲ 15 ಗಂಟೆ 45 ನಿಮಿಷದಿಂದ 16 ಗಂಟೆಗಳಲ್ಲಿ ಕ್ರಮಿಸಲಿದೆ.

ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ (SMVT) ನಿಂದ ರಾತ್ರಿ 7:45ಕ್ಕೆ ಹೊರಟರೆ ಮರುದಿನ ಮಧ್ಯಾಹ್ನ 11:55ಕ್ಕೆ ಮುಂಬೈನ CSMT ತಲುಪಬಹುದು. ಇನ್ನು ಪುಣೆಗೆ ಪ್ರಯಾಣದ ಅವಧಿ 12 ಗಂಟೆಗೆ ಇಳಿಕೆಯಾಗಿದ್ದು, ಮಹಾರಾಷ್ಟ್ರ-ಕರ್ನಾಟಕ ನಡುವಿನ ಪ್ರಯಾಣಿಕರಿಗೆ ಸಮಯದ ಉಳಿತಾಯದ ದೃಷ್ಟಿಯಿಂದ ಇದು ಖಂಡಿತವಾಗಿಯೂ ದೊಡ್ಡ ರಿಲೀಫ್.
ಸಾಮಾನ್ಯ ಪ್ರಯಾಣಿಕರ ಕಡೆಗಣನೆ: ವಿಮಾನ ದರಕ್ಕೆ ಸಡ್ಡು ಹೊಡೆಯುವ ರೈಲ್ವೆ ಟಿಕೆಟ್!:
ವೇಗವೇನೋ ಸಿಕ್ಕಿತು, ಆದರೆ ಬೆಲೆ? 16 ಕೋಚ್‌ಗಳ ಈ ರೇಕ್‌ನಲ್ಲಿ ಸಾಮಾನ್ಯ ದರ್ಜೆಯ (General) ಅಥವಾ ಸ್ಲೀಪರ್ (Non-AC) ಬೋಗಿಗಳೇ ಇಲ್ಲ. ಸಂಪೂರ್ಣ ಎಸಿ ವ್ಯವಸ್ಥೆಯುಳ್ಳ ಈ ರೈಲಿನಲ್ಲಿ 3-ಟೈಯರ್ ಎಸಿ (₹2,684 ರಿಂದ ₹3,000 ಅಂದಾಜು), 2-ಟೈಯರ್ ಎಸಿ (₹3,466 ರಿಂದ ₹3,600) ಹಾಗೂ ಫಸ್ಟ್ ಎಸಿ ದರ ₹4,250 ರಿಂದ ₹5,000 ಗಡಿ ದಾಟುವ ನಿರೀಕ್ಷೆಯಿದೆ (ಜಿಎಸ್‌ಟಿ ಮತ್ತು ಊಟದ ಶುಲ್ಕ ಪ್ರತ್ಯೇಕ).
ಮುಂಗಡವಾಗಿ ಬುಕ್ ಮಾಡಿದರೆ ವಿಮಾನದ ದರವೇ ₹3,500 ರಿಂದ ₹4,500 ಆಸುಪಾಸಿನಲ್ಲಿ ಸಿಗುವಾಗ, ರೈಲಿನಲ್ಲಿ ಅಷ್ಟೇ ಹಣ ತೆತ್ತು 16 ಗಂಟೆ ಕಳೆಯಬೇಕೆ ಎಂಬ ಲೆಕ್ಕಾಚಾರ ಮಧ್ಯಮ ವರ್ಗದವರನ್ನು ಕಾಡುತ್ತಿದೆ.
ರೈಲ್ವೆಯೆಂದರೆ ಜನಸಾಮಾನ್ಯರ ಜೀವನಾಡಿ ಎಂಬ ಪರಿಕಲ್ಪನೆಯನ್ನು ಬದಿಗೊತ್ತಿ, ಭಾರತೀಯ ರೈಲ್ವೆ ಕ್ರಮೇಣ ಬಡ ಮತ್ತು ಕೆಳ ಮಧ್ಯಮ ವರ್ಗದ ಜನರನ್ನು ಹೊರಗಿಡಲು ಯತ್ನಿಸುತ್ತಿದೆಯೇ ಎಂಬ ಆಕ್ರೋಶ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿದೆ.
ಪ್ರಮುಖ ನಿಲ್ದಾಣಗಳಿಗಷ್ಟೇ ಮಣೆ: ಮಧ್ಯವರ್ತಿ ಜಿಲ್ಲೆಗಳಿಗೆ ನಿರಾಸೆ:
ರೈಲಿನ ವೇಗ ಕಾಪಾಡಿಕೊಳ್ಳುವ ನೆಪದಲ್ಲಿ ಕೇವಲ ಎಂಟು ಪ್ರಮುಖ ನಿಲ್ದಾಣಗಳಿಗೆ (ಅನಂತಪುರ, ಗುಂತಕಲ್, ರಾಯಚೂರು, ಯಾದಗಿರಿ, ಕಲಬುರಗಿ, ಸೋಲಾಪುರ, ಪುಣೆ, ಕಲ್ಯಾಣ್) ಮಾತ್ರ ನಿಲುಗಡೆ ನೀಡಲಾಗಿದೆ.
ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿ, ರಾಯಚೂರಿಗೆ ನಿಲುಗಡೆ ನೀಡಿರುವುದು ಸಮಾಧಾನಕರವಾದರೂ, ಉತ್ತರ ಕರ್ನಾಟಕದ ಇತರೆ ಜಿಲ್ಲೆಗಳು ಮತ್ತು ಮಹಾರಾಷ್ಟ್ರದ ಸಣ್ಣ ಕೈಗಾರಿಕಾ ಪಟ್ಟಣಗಳು ಈ ಸೆಮಿ-ಹೈಸ್ಪೀಡ್ ನೆಟ್‌ವರ್ಕ್‌ನಿಂದ ವಂಚಿತವಾಗಿವೆ. ರೈಲ್ವೆ ಇಲಾಖೆ ಕೇವಲ ಮಹಾನಗರಗಳ ಸಂಪರ್ಕಕ್ಕೆ ಮಾತ್ರ ಆದ್ಯತೆ ನೀಡುತ್ತಿದೆ ಎಂಬ ಆಕ್ಷೇಪವೂ ಕೇಳಿಬಂದಿದೆ.
ವೈಭವದ ಒಳಾಂಗಣ, ಹೈಟೆಕ್ ಭದ್ರತೆ:
ತಂತ್ರಜ್ಞಾನ ಮತ್ತು ಸೌಕರ್ಯದ ದೃಷ್ಟಿಯಿಂದ ರೈಲು ಅತ್ಯಾಧುನಿಕ ಮಟ್ಟದಲ್ಲಿದೆ. ಜೆರ್ಕ್-ಮುಕ್ತ ಪ್ರಯಾಣಕ್ಕೆ ಸೆಮಿ-ಪರ್ಮನೆಂಟ್ ಕಪ್ಲರ್‌ಗಳು, ಸದ್ದು ನಿಯಂತ್ರಿಸುವ ಸೀಲ್ಡ್ ಗ್ಯಾಂಗ್‌ವೇಗಳು, ಯುಎಸ್‌ಬಿ ಚಾರ್ಜಿಂಗ್ ಪೋರ್ಟ್‌ಗಳುಳ್ಳ ಮೆಮೊರಿ-ಫೋಮ್ ಬರ್ತ್‌ಗಳು ಹಾಗೂ ವಿಮಾನ ಮಾದರಿಯ ಬಯೋ-ವ್ಯಾಕ್ಯೂಮ್ ಶೌಚಾಲಯಗಳನ್ನು ಅಳವಡಿಸಲಾಗಿದೆ. ಕವಚ್ ರಕ್ಷಣಾ ವ್ಯವಸ್ಥೆಯೂ ಇದರಲ್ಲಿದೆ.
ಆದರೆ, ಭಾರತೀಯ ರೈಲ್ವೆಗೆ ಇಂದು ಬೇಕಿರುವುದು ಕೇವಲ ಪ್ರೀಮಿಯಂ ಕ್ಲಾಸ್‌ನ ಹೊಳಪಲ್ಲ; ಸಾಮಾನ್ಯ ದಿನಗೂಲಿಗಳು, ಸಣ್ಣ ವ್ಯಾಪಾರಿಗಳು ಗೌರವಯುತವಾಗಿ, ಕಡಿಮೆ ದರದಲ್ಲಿ ಪ್ರಯಾಣಿಸುವ ವ್ಯವಸ್ಥೆ. ವಂದೇ ಭಾರತ್ ಸ್ಲೀಪರ್ ವೇಗ ಮತ್ತು ತಂತ್ರಜ್ಞಾನದಲ್ಲಿ ಜಯಗಳಿಸಿದೆ ನಿಜ, ಆದರೆ ಸರ್ವರಿಗೂ ಸಮಪಾಲು ಎಂಬ ಸಾಮಾಜಿಕ ನ್ಯಾಯದ ಹಳಿಯಲ್ಲಿ ಇದು ಎಷ್ಟು ಜನಸ್ನೇಹಿಯಾಗಿದೆ ಎನ್ನುವುದನ್ನು ಮರುಪರಿಶೀಲಿಸಬೇಕಿದೆ. (File photo credit: Harshul12345, CC BY-SA 4.0, via Wikimedia Commons)


















