ಬೆಂಗಳೂರು, ಅ.29 www.bengaluruwire.com: ರಾಜ್ಯದಲ್ಲಿ ಜನಸಾಮಾನ್ಯರ ದಿನನಿತ್ಯದ ಬದುಕಿನ ಮೇಲೆ ಸರ್ಕಾರ ಮತ್ತೊಂದು ಆರ್ಥಿಕ ಹೊರೆ ಹೇರಿದೆ. ಕೆಎಂಎಫ್ (KMF) ನಂದಿನಿ ಹಾಲಿನ ಬೆಲೆಯನ್ನು ಲೀಟರ್ಗೆ ಬರೋಬ್ಬರಿ ₹8 ರಷ್ಟು ಏಕಾಏಕಿ ಹೆಚ್ಚಳ ಮಾಡುವ ಮೂಲಕ ಇತಿಹಾಸದಲ್ಲೇ ಹಿಂದೆಂದೂ ಕಾಣದ ರೀತಿಯಲ್ಲಿ ಗ್ರಾಹಕರಿಗೆ ಶಾಕ್ ನೀಡಿದೆ.
ಈ ದರ ಏರಿಕೆಯ ಬಿಸಿ ಕೇವಲ ಮನೆಗಳ ಅಡುಗೆ ಮನೆಗಷ್ಟೇ ಸೀಮಿತವಾಗದೆ, ನೇರವಾಗಿ ಹೋಟೆಲ್ ತಿಂಡಿ-ತಿನಿಸುಗಳ ಮೇಲೂ ಬಿದ್ದಿದೆ. ಹಾಲಿನ ಬೆಲೆ ಏರಿಕೆ ಬೆನ್ನಲ್ಲೇ ಹೋಟೆಲ್ಗಳಲ್ಲಿ ಕಾಫಿ, ಟೀ ಸೇರಿದಂತೆ ಹಾಲು ಆಧಾರಿತ ತಿನಿಸುಗಳು ಹಾಗೂ ದಿನಬಳಕೆಯ ಉಪಹಾರಗಳ ದರ ಹೆಚ್ಚಳವಾಗುವುದು ನಿಶ್ಚಿತವಾಗಿದೆ.
₹2 ರಿಂದ ₹3 ಏರಿಕೆಗೆ ಮನವಿ ಮಾಡಿದ್ದೆವು: ಪಿ.ಸಿ. ರಾವ್ ಕಿಡಿ:
ಈ ಕುರಿತು ಕಟುವಾಗಿ ಪ್ರತಿಕ್ರಿಯಿಸಿರುವ ಬೆಂಗಳೂರು ಹೋಟೆಲುಗಳ ಸಂಘದ ಗೌರವಾಧ್ಯಕ್ಷ ಪಿ.ಸಿ. ರಾವ್, “ಇತಿಹಾಸದಲ್ಲೇ ಮೊದಲ ಬಾರಿಗೆ ಹಾಲಿನ ದರವನ್ನು ಲೀಟರ್ಗೆ ₹8 ರಷ್ಟು ಏಕಾಏಕಿ ಹೆಚ್ಚಿಸಲಾಗಿದೆ. ಕೇವಲ ₹2 ರಿಂದ ₹3 ರಷ್ಟು ಹೆಚ್ಚಳ ಮಾಡಿದರೆ ಹೋಟೆಲ್ಗಳಲ್ಲಿ ದರ ಏರಿಕೆಯ ಅಗತ್ಯವಿರಲಿಲ್ಲ. ಆದರೆ ಈ ಭಾರಿ ಪ್ರಮಾಣದ ದರ ಏರಿಕೆಯಿಂದಾಗಿ ಜನಸಾಮಾನ್ಯರ ಮೇಲೆ ಹಾಗೂ ಹೋಟೆಲ್ ಉದ್ಯಮದ ಮೇಲೆ ದೊಡ್ಡ ಹೊರೆ ಬಿದ್ದಿದೆ. ಕಾಫಿ, ಟೀ ಹಾಗೂ ಹಾಲಿನಿಂದ ತಯಾರಾಗುವ ಉತ್ಪನ್ನಗಳ ದರ ಹೆಚ್ಚಿಸುವುದು ಅನಿವಾರ್ಯವಾಗಿದೆ” ಎಂದು ನೇರವಾಗಿ ಎಚ್ಚರಿಸಿದ್ದಾರೆ.

ಅಕ್ಕಿ ಬೆಲೆಯೂ ಗಗನಕ್ಕೆ: ಹೋಟೆಲ್ ಉದ್ಯಮಕ್ಕೆ ಇಕ್ಕಟ್ಟು:
ಹಾಲಿನ ದರ ಮಾತ್ರವಲ್ಲದೆ, ಇತ್ತೀಚಿನ ದಿನಗಳಲ್ಲಿ ಅಕ್ಕಿಯ ಬೆಲೆಯೂ ಕೆಜಿಗೆ ಬರೋಬ್ಬರಿ ₹30 ರಷ್ಟು ಹೆಚ್ಚಾಗಿದೆ. ದಿನಬಳಕೆಯ ಅಗತ್ಯ ಸಾಮಗ್ರಿಗಳ ಬೆಲೆ ನಿಯಂತ್ರಣ ತಪ್ಪಿರುವ ಹಿನ್ನೆಲೆಯಲ್ಲಿ, ಹೋಟೆಲ್ ಮಾಲೀಕರು ತಮ್ಮ ಖರ್ಚು-ವೆಚ್ಚಗಳನ್ನು ಸರಿದೂಗಿಸಲು ತಿಂಡಿ-ತಿನಿಸುಗಳ ಬೆಲೆ ಏರಿಕೆ ಮಾಡುವ ತೀರ್ಮಾನಕ್ಕೆ ಬಂದಿದ್ದಾರೆ. ಸಂಘವು ಯಾವುದೇ ಅಧಿಕೃತ ದರ ಪಟ್ಟಿ ಹೇರದಿದ್ದರೂ, ಸ್ಥಳೀಯ ಮಟ್ಟದಲ್ಲಿ ಆಯಾ ಹೋಟೆಲ್ ಮಾಲೀಕರೇ ವೆಚ್ಚ ಆಧರಿಸಿ ಶೀಘ್ರವೇ ದರ ಪರಿಷ್ಕರಣೆ ಮಾಡಲಿದ್ದಾರೆ ಎಂದು ಪಿ.ಸಿ. ರಾವ್ ಸ್ಪಷ್ಟಪಡಿಸಿದ್ದಾರೆ.
ಸರ್ಕಾರದ ಆಡಳಿತಾತ್ಮಕ ವೈಫಲ್ಯಕ್ಕೆ ಜನರ ಬಲಿಪಶು?:
ಡೈರಿ ಉದ್ಯಮದ ಆಡಳಿತಾತ್ಮಕ ವೆಚ್ಚಗಳನ್ನು ಹದ್ದುಬಸ್ತಿನಲ್ಲಿಟ್ಟು, ರೈತರಿಗೆ ಪ್ರೋತ್ಸಾಹಧನ ನೀಡುವ ಮೂಲಕ ಬೆಲೆ ಏರಿಕೆಯನ್ನು ನಿಯಂತ್ರಿಸಬೇಕಾದ ಸರ್ಕಾರ, ಆಡಳಿತಾತ್ಮಕ ವೈಫಲ್ಯಗಳನ್ನು ಮುಚ್ಚಿಹಾಕಲು ಗ್ರಾಹಕರ ಜೇಬಿಗೆ ಕೈಹಾಕಿದೆ ಎಂಬ ಟೀಕೆ ತೀವ್ರಗೊಂಡಿದೆ. ಪೌಷ್ಟಿಕ ಆಹಾರವಾಗಿ ಹಾಲು ಬಳಸುವ ಗರ್ಭಿಣಿಯರು, ಮಕ್ಕಳು, ಹಿರಿಯ ನಾಗರಿಕರು ಮತ್ತು ಬಡ ಜನಸಾಮಾನ್ಯರ ಮೇಲೆ ಈ ನಿರ್ಧಾರ ಗಂಭೀರ ಆರ್ಥಿಕ ಪರಿಣಾಮ ಬೀರಲಿದೆ. ಬೆಲೆ ಏರಿಕೆಯ ಸುಳಿಗೆ ಸಿಲುಕಿರುವ ಜನಸಾಮಾನ್ಯರಿಗೆ ಈಗ ಹೋಟೆಲ್ನಲ್ಲಿ ಒಂದು ಕಪ್ ಕಾಫಿ ಅಥವಾ ತಿಂಡಿ ಸವಿಯುವುದೂ ದುಬಾರಿಯಾಗಲಿದೆ.


















