ಬೆಂಗಳೂರು,ಅ.29 www.bengaluruwire.com:: ರಾಜ್ಯದಲ್ಲಿ ನಿರಂತರವಾಗಿ ಏರಿಕೆಯಾಗುತ್ತಿರುವ ಕೃಷಿ ಉತ್ಪಾದನಾ ವೆಚ್ಚ, ಕಾರ್ಖಾನೆಗಳ ಅಸಮರ್ಪಕ ತೂಕ ಕಡಿತ ಹಾಗೂ ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ ಕಬ್ಬಿನ ನ್ಯಾಯಯುತ ಮತ್ತು ಲಾಭದಾಯಕ ಬೆಲೆಯನ್ನು (FRP) ಪ್ರತಿ ಟನ್ಗೆ ಕನಿಷ್ಠ ₹4,500ಕ್ಕೆ ನಿಗದಿಪಡಿಸಬೇಕು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘ ಕೇಂದ್ರ ಸರ್ಕಾರವನ್ನು ಆಗ್ರಹಿಸಿದೆ.
ಕೇಂದ್ರ ಸರ್ಕಾರದ ನೀತಿ ಆಯೋಗದ ಸದಸ್ಯರು ಹಾಗೂ ಕಬ್ಬು-ಸಕ್ಕರೆ ಸಮಸ್ಯೆಗಳ ಸಮಿತಿ ಮುಖ್ಯಸ್ಥರಾದ ಡಾ. ರಮೇಶ್ ಚಂದ್ರ ಅವರಿಗೆ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ಸಮಗ್ರ ಒತ್ತಾಯ ಪತ್ರ ಸಲ್ಲಿಸಲಾಗಿದೆ.
ಪ್ರತಿ ಟನ್ ಕಬ್ಬಿಗೆ ₹4,500 ಎಫ್ಆರ್ಪಿ ದರ ನಿಗದಿಗೆ ಒತ್ತಾಯ:
ಕಬ್ಬಿನ ಬಿತ್ತನೆ ಬೀಜ, ರಸಗೊಬ್ಬರ, ಕೃಷಿ ಕೂಲಿ, ನೀರಾವರಿ, ವಿದ್ಯುತ್, ಡೀಸೆಲ್ ಮತ್ತು ಕಟಾವು ಸಾಗಾಣಿಕೆ ವೆಚ್ಚಗಳು ಗಣನೀಯವಾಗಿ ಹೆಚ್ಚಿವೆ. ಕರ್ನಾಟಕ ಸರ್ಕಾರದ ಕಬ್ಬು ಅಭಿವೃದ್ಧಿ ಆಯುಕ್ತರ ವರದಿಯಂತೆ ಪ್ರತಿ ಟನ್ ಕಬ್ಬು ಉತ್ಪಾದನೆಗೆ ₹4,450 ವೆಚ್ಚ ತಗಲುತ್ತದೆ. ಆದ್ದರಿಂದ 10.25% ಸಕ್ಕರೆ ಇಳುವರಿ ಪ್ರಮಾಣಕ್ಕೆ ಕಬ್ಬಿನ ಕನಿಷ್ಠ ಎಫ್ಆರ್ಪಿ ದರವನ್ನು ₹4,500ಕ್ಕೆ ಹೆಚ್ಚಿಸಬೇಕು ಎಂದು ಪತ್ರದಲ್ಲಿ ಪ್ರಮುಖವಾಗಿ ಉಲ್ಲೇಖಿಸಲಾಗಿದೆ.

ವಾಣಿಜ್ಯ ಬಳಕೆಯ ಸಕ್ಕರೆಗೆ ಪ್ರತ್ಯೇಕ ದರ ವ್ಯವಸ್ಥೆ:
ದೇಶದಲ್ಲಿ ಉತ್ಪಾದನೆಯಾಗುವ ಸಕ್ಕರೆಯಲ್ಲಿ ಶೇ. 75ರಷ್ಟು ವಾಣಿಜ್ಯ ಬಳಕೆದಾರರಿಗೆ ಮತ್ತು ಶೇ. 25ರಷ್ಟು ಗೃಹಬಳಕೆಗೆ ಬಳಕೆಯಾಗುತ್ತಿದೆ. ಗೃಹಬಳಕೆಯ ಎಲ್ಪಿಜಿ ಮತ್ತು ವಾಣಿಜ್ಯ ಸಿಲಿಂಡರ್ಗಳಿಗೆ ಪ್ರತ್ಯೇಕ ದರವಿರುವಂತೆ, ತಂಪು ಪಾನೀಯ, ಬೇಕರಿ, ಸಿಹಿ ತಿಂಡಿ ಹಾಗೂ ಆಹಾರ ಸಂಸ್ಕರಣಾ ಕೈಗಾರಿಕೆಗಳಿಗೆ ಹೆಚ್ಚಿನ ಸಕ್ಕರೆ ದರ ನಿಗದಿ ಮಾಡಬೇಕು. ಈ ಮೂಲಕ ಸಿಗುವ ಹೆಚ್ಚುವರಿ ಆದಾಯವನ್ನು ರೈತರ ಎಫ್ಆರ್ಪಿ ದರ ಏರಿಕೆಗೆ ಬಳಸಬೇಕು ಎಂದು ರೈತ ಮುಖಂಡರು ಸಲಹೆ ನೀಡಿದ್ದಾರೆ.
ಉಪ ಉತ್ಪನ್ನಗಳ ಲಾಭ ಹಂಚಿಕೆ ಮತ್ತು ಹೊಲದಲ್ಲೇ ದರ ನಿಗದಿ:
ಸಕ್ಕರೆ ನಿಯಂತ್ರಣ ಕಾಯ್ದೆ 1966ರ ಅನ್ವಯ ಮೊಲಾಸಿಸ್, ಬಗಾಸ್, ಎಥೆನಾಲ್ ಹಾಗೂ ವಿದ್ಯುತ್ ಉತ್ಪಾದನೆಯಿಂದ ಕಾರ್ಖಾನೆಗಳು ಗಳಿಸುವ ಹೆಚ್ಚುವರಿ ಲಾಭವನ್ನು ರೈತರಿಗೆ ಕಡ್ಡಾಯವಾಗಿ ಹಂಚಿಕೆ ಮಾಡಬೇಕು. ಇದರೊಂದಿಗೆ, ಎಫ್ಆರ್ಪಿ ದರವನ್ನು ‘ರೈತರ ಹೊಲದಲ್ಲಿನ ದರ’ (Ex-field Price) ಎಂದು ಪರಿಗಣಿಸಿ, ಕಟಾವು ಮತ್ತು ಸಾಗಾಣಿಕೆ ವೆಚ್ಚವನ್ನು ಕಾರ್ಖಾನೆಗಳೇ ಸಂಪೂರ್ಣವಾಗಿ ಭರಿಸಬೇಕು ಎಂದು ಒತ್ತಾಯಿಸಲಾಗಿದೆ.
ವೈಜ್ಞಾನಿಕ ಇಳುವರಿ ಪರೀಕ್ಷೆ ಹಾಗೂ ಶೇ. 10 ತೂಕ ಕಡಿತಕ್ಕೆ ಬ್ರೇಕ್:
ಪ್ರಸ್ತುತ ಕಾರ್ಖಾನೆಗಳು ಸರಾಸರಿ ಇಳುವರಿ ಲೆಕ್ಕ ಹಾಕಿ ದರ ನೀಡುತ್ತಿರುವುದರಿಂದ ಗುಣಮಟ್ಟದ ಕಬ್ಬು ಬೆಳೆಯುವ ರೈತರಿಗೆ ನಷ್ಟವಾಗುತ್ತಿದೆ. ಹೀಗಾಗಿ ಪ್ರತಿ ರೈತನ ಹೊಲದ ಇಳುವರಿಯನ್ನು ಪ್ರತ್ಯೇಕವಾಗಿ ವೈಜ್ಞಾನಿಕವಾಗಿ ಪರೀಕ್ಷಿಸಿ ದರ ನೀಡಬೇಕು. ಜೊತೆಗೆ ಯಂತ್ರದ ಮೂಲಕ ಕಟಾವು ಮಾಡುವಾಗ ‘ವೇಸ್ಟೇಜ್’ ಹೆಸರಿನಲ್ಲಿ ಶೇ. 8ರಿಂದ 10ರಷ್ಟು ತೂಕ ಕಡಿತ ಮಾಡುವುದನ್ನು ಸಂಪೂರ್ಣ ನಿಷೇಧಿಸಿ, ನಿಯಮ ಉಲ್ಲಂಘಿಸುವ ಕಾರ್ಖಾನೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ತಾಕೀತು ಮಾಡಲಾಗಿದೆ.
14 ದಿನಗಳಲ್ಲಿ ಹಣ ಪಾವತಿಗೆ ಕಟ್ಟುನಿಟ್ಟಿನ ನಿಯಮ:
ಸಕ್ಕರೆ ನಿಯಂತ್ರಣ ಕಾಯ್ದೆಯನ್ವಯ ಕಬ್ಬು ಪೂರೈಸಿದ 14 ದಿನಗಳೊಳಗೆ ರೈತರ ಖಾತೆಗೆ ಹಣ ಪಾವತಿಸದ ಕಾರ್ಖಾನೆಗಳಿಗೆ ಬಡ್ಡಿ ಸಮೇತ ದಂಡ ವಿಧಿಸಬೇಕು. ಬಾಕಿ ವಸೂಲಿಗೆ ಜಿಲ್ಲಾಧಿಕಾರಿಗಳಿಗೆ ಹೆಚ್ಚಿನ ಕಾನೂನು ಅಧಿಕಾರ ನೀಡಿ, ಸತತ ನಿಯಮ ಉಲ್ಲಂಘಿಸುವ ಕಾರ್ಖಾನೆಗಳ ಪರವಾನಗಿ ರದ್ದುಪಡಿಸಬೇಕು.
ಆಕಸ್ಮಿಕ ಬೆಂಕಿ ಬಿದ್ದ ಕಬ್ಬನ್ನು ನುರಿಸುವಾಗ ಶೇ. 25ರಷ್ಟು ದರ ಕಡಿತ ಮಾಡುವ ಪದ್ಧತಿ ರದ್ದುಗೊಳಿಸಿ, ಸಕ್ಕರೆಯನ್ನು ಅಗತ್ಯ ವಸ್ತುಗಳ ಕಾಯ್ದೆಯಿಂದ ಹೊರಗಿಟ್ಟು ಮುಕ್ತ ಮಾರುಕಟ್ಟೆಗೆ ಅವಕಾಶ ನೀಡಬೇಕು ಎಂದು ಪತ್ರದಲ್ಲಿ ಆಗ್ರಹಿಸಲಾಗಿದೆ.



















