ಬೆಂಗಳೂರು, ನ.04 www.bengaluruwire.com: ರಾಜ್ಯ ಸರ್ಕಾರಿ ಸ್ವಾಮ್ಯದ ಸಾರಿಗೆ ನಿಗಮಗಳ ಆಡಳಿತ ವೈಫಲ್ಯ ಮತ್ತು ಆರ್ಥಿಕ ಮುಗ್ಗಟ್ಟಿನ ಅಂತಿಮ ಹೊರೆಯನ್ನು ಕೊನೆಗೂ ಸಾಮಾನ್ಯ ಜನತೆಯ ಹೆಗಲಿಗೇ ವರ್ಗಾಯಿಸಲಾಗಿದೆ.
ಕೇಂದ್ರ ಸರ್ಕಾರದ ಡೀಸೆಲ್ ದರ ಏರಿಕೆಯನ್ನೇ ಗುರಾಣಿಯನ್ನಾಗಿಸಿಕೊಂಡು, ರಾಜ್ಯ ಸರ್ಕಾರ ಕೆಎಸ್ಸಾರ್ಟಿಸಿ ಹಾಗೂ ಬಿಎಂಟಿಸಿ ಬಸ್ ಪ್ರಯಾಣ ದರವನ್ನು ಗಣನೀಯವಾಗಿ ಹೆಚ್ಚಿಸಿದೆ. ಇದು ಪರಿಷ್ಕರಣೆಯ ಹೆಸರಿನಲ್ಲಿ ಜನಸಾಮಾನ್ಯರ ಮೇಲೆ ನಡೆಸಲಾದ ನೇರ ಆರ್ಥಿಕ ದಾಳಿ ಎಂಬ ಆಕ್ರೋಶ ಸಾರ್ವಜನಿಕ ವಲಯದಲ್ಲಿ ಎದ್ದಿದೆ.
ಬುಧವಾರ ಬೆಂಗಳೂರಿನ ಕೆಎಸ್ಸಾರ್ಟಿಸಿ ಕೇಂದ್ರ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸಾರಿಗೆ ಸಚಿವ ಬೈರತಿ ಸುರೇಶ್ ಅವರು ಈ ‘ದರ ಶಾಕ್’ ನೀಡಿದ್ದು, ಬುಧವಾರ ಮಧ್ಯರಾತ್ರಿಯಿಂದಲೇ ನೂತನ ದರಗಳು ಅನ್ವಯವಾಗಲಿವೆ. “ಬಿಎಂಟಿಸಿ ಬಸ್ ಪ್ರಯಾಣ ದರದಲ್ಲಿ 4 ರೂಪಾಯಿಗಳಿಂದ 12 ರೂಪಾಯಿಗಳವರೆಗೆ ಮತ್ತು ಕೆಎಸ್ಸಾರ್ಟಿಸಿ, ಕೆಕೆಆರ್ಟಿಸಿ ಹಾಗೂ ಎನ್ ಡಬ್ಲುಕೆಆರ್ಟಿಸಿ ಬಸ್ ಗಳ ಪ್ರಯಾಣ ದರವನ್ನು 9 ರೂಪಾಯಿಗಳಿಂದ 18 ರೂಪಾಯಿಗಳವರೆಗೆ ಹಂತಗಳಿಗೆ (STAGE) ಅನುಗುಣವಾಗಿ ಹೆಚ್ಚಳ ಮಾಡಲಾಗಿದೆ” ಎಂದು ತಿಳಿಸಿದರು.

ದರ ಏರಿಕೆಯ ಲೆಕ್ಕಾಚಾರ: ಯಾರಿಗೆ ಎಷ್ಟು ಹೊರೆ?

ಸರ್ಕಾರ ಪ್ರಕಟಿಸಿರುವ ಪರಿಷ್ಕೃತ ದರಗಳ ಪ್ರಕಾರ, ನಿಗಮವಾರು ಏರಿಕೆ ಪ್ರಮಾಣ ಹೀಗಿದೆ:
ಬಿಎಂಟಿಸಿ (BMTC): ಶೇಕಡಾ 33 ರಿಂದ 35 ರಷ್ಟು ಹೆಚ್ಚಳ. ಮೊದಲ 2 ಕಿ.ಮೀ.ಗೆ ₹4, 2 ರಿಂದ 4 ಕಿ.ಮೀ.ಗೆ ₹6 ಹಾಗೂ ಹಂತಗಳಿಗೆ ಅನುಗುಣವಾಗಿ ಗರಿಷ್ಠ ₹12 ರವರೆಗೆ ಏರಿಕೆ.
ಕೆಎಸ್ಸಾರ್ಟಿಸಿ, ಕೆಕೆಆರ್ಟಿಸಿ, ಎನ್ ಡಬ್ಲುಕೆಆರ್ಟಿಸಿ: ಶೇಕಡಾ 23 ರಷ್ಟು ಏರಿಕೆ. ಸಾಮಾನ್ಯ ಬಸ್ಗಳಲ್ಲಿ ಮೊದಲ 5 ಹಂತಗಳಿಗೆ ಗರಿಷ್ಠ ₹9 ಮತ್ತು ವೇಗದೂತ ಬಸ್ಗಳಲ್ಲಿ ₹18 ರವರೆಗೆ ಹೆಚ್ಚಳ.
ಕೇವಲ ದೈನಂದಿನ ಕೂಲಿ, ಸಣ್ಣಪುಟ್ಟ ಉದ್ಯೋಗ ನಂಬಿಕೊಂಡು ಬೆಂಗಳೂರಿನ ಬೀದಿಗಳಲ್ಲಿ ಬಿಎಂಟಿಸಿ ಆಶ್ರಯಿಸುವ ಜನಸಾಮಾನ್ಯರಿಗೆ ಶೇ. 35ರವರೆಗಿನ ಹೆಚ್ಚಳ ನಡುಬಗ್ಗಿಸುವ ಹೊಡೆತವಾಗಿದೆ.
ವಿಶ್ಲೇಷಣೆ: ಡೀಸೆಲ್ ಏರಿಕೆಯೋ ಅಥವಾ ಆಡಳಿತಾತ್ಮಕ ದಿವಾಳಿತನವೋ?:
ಮೇ ತಿಂಗಳಿನಿಂದ ಕೇಂದ್ರ ಸರ್ಕಾರ 7 ಬಾರಿ ಡೀಸೆಲ್ ದರ ಹೆಚ್ಚಿಸಿ, ಪ್ರತಿ ಲೀಟರ್ಗೆ ₹10.47 ನಷ್ಟು ಹೊರೆ ಹೆಚ್ಚಿಸಿದೆ ಎಂಬುದು ಸಚಿವರ ಪ್ರಮುಖ ಸಮರ್ಥನೆ. ನಾಲ್ಕೂ ನಿಗಮಗಳು ಒಟ್ಟಾರೆ ₹10,200 ಕೋಟಿ ನಷ್ಟದಲ್ಲಿವೆ ಎಂದು ಸರ್ಕಾರ ಹೇಳುತ್ತಿದೆ. ಆದರೆ, ಈ ನಷ್ಟಕ್ಕೆ ಕೇವಲ ಕೇಂದ್ರದ ಇಂಧನ ಬೆಲೆಯೇ ಕಾರಣವೇ ಎಂಬ ಪ್ರಶ್ನೆ ಮುನ್ನೆಲೆಗೆ ಬಂದಿದೆ.
ನೆಪಗಳ ರಾಜಕೀಯ: ಕೇಂದ್ರ ಸರ್ಕಾರದ ತೆರಿಗೆ ನೀತಿ ಮತ್ತು ಇಂಧನ ಬೆಲೆ ಏರಿಕೆ ಜನವಿರೋಧಿ ಎಂಬುದು ಎಷ್ಟು ಸತ್ಯವೋ, ಅದೇ ನೆಪವನ್ನಿಟ್ಟುಕೊಂಡು ರಾಜ್ಯ ಸರ್ಕಾರ ಸ್ಥಳೀಯ ಪ್ರಯಾಣಿಕರ ಮೇಲೆ ಭಾರಿ ಪ್ರಮಾಣದ ದರ ಏರಿಕೆ ಹೊರಿಸುವುದು ಅಷ್ಟೇ ಹೊಣೆಗೇಡಿತನ.
ಶಕ್ತಿ ಯೋಜನೆ ಮತ್ತು ವಾಸ್ತವದ ಅಂತರ: “ಶಕ್ತಿ ಯೋಜನೆಯಿಂದ ನಿಗಮಗಳಿಗೆ ನಯಾಪೈಸೆಯೂ ನಷ್ಟವಿಲ್ಲ, ಹಣವನ್ನು ಸರ್ಕಾರ ಕಾಲಕಾಲಕ್ಕೆ ಮರುಪಾವತಿಸುತ್ತಿದೆ” ಎಂದು ಸಚಿವರು ವಾದಿಸುತ್ತಾರೆ. ಆದರೆ, ಪ್ರತಿದಿನ ಪ್ರಯಾಣಿಸುವ 124.79 ಲಕ್ಷ ಪ್ರಯಾಣಿಕರಲ್ಲಿ ಬರೋಬ್ಬರಿ 74.40 ಲಕ್ಷ ಮಹಿಳೆಯರು ಉಚಿತವಾಗಿ ಪ್ರಯಾಣಿಸುತ್ತಿರುವಾಗ, ಸಾರಿಗೆ ನಿಗಮಗಳ ನಗದು ಹರಿವು (Cash Flow) ಹಾಗೂ ನಿರ್ವಹಣಾ ವೆಚ್ಚದ ಮೇಲಿನ ಒತ್ತಡ ತೀವ್ರಗೊಂಡಿಲ್ಲವೇ? ಸರ್ಕಾರದ ಮರುಪಾವತಿ ಪ್ರಕ್ರಿಯೆಯಲ್ಲಿನ ವಿಳಂಬ ನಿಗಮಗಳನ್ನು ಸಾಲದ ಕೂಪಕ್ಕೆ ತಳ್ಳಿಲ್ಲವೇ ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರವಿಲ್ಲ.
ಒಂದೇ ವರ್ಷದಲ್ಲಿ ಎರಡನೇ ಹೊರೆ: 2025ರ ಜನವರಿಯಲ್ಲಿ ಶೇ. 15ರಷ್ಟು ದರ ಹೆಚ್ಚಳ ಮಾಡಲಾಗಿತ್ತು. ಅದಾಗಿ ಅಲ್ಪಾವಧಿಯಲ್ಲೇ ಮತ್ತೆ ಶೇ. 23 ರಿಂದ 35ರಷ್ಟು ದರ ಏರಿಸಿರುವುದು ಸಾರಿಗೆ ಸಂಸ್ಥೆಗಳ ಆರ್ಥಿಕ ಯೋಜನೆಗಳ ಸಂಪೂರ್ಣ ಸೋಲನ್ನು ಎತ್ತಿ ತೋರಿಸುತ್ತದೆ.
ತಿವಾರಿ ಸಮಿತಿ ವರದಿ: ರಕ್ಷಣೆಯ ಕವಚ:
ನಿವೃತ್ತ ಐಎಎಸ್ ಅಧಿಕಾರಿ ಅತುಲ್ ಕುಮಾರ್ ತಿವಾರಿ ನೇತೃತ್ವದ ಸಾರ್ವಜನಿಕ ಪ್ರಯಾಣ ದರ ನಿಯಂತ್ರಣ ಸಮಿತಿಯು ಇದಕ್ಕಿಂತಲೂ ಹೆಚ್ಚಿನ ದರ ಹೆಚ್ಚಳಕ್ಕೆ ಶಿಫಾರಸು ಮಾಡಿತ್ತು, ಆದರೆ ಸರ್ಕಾರ ಮಾನವೀಯತೆಯಿಂದ ಕಡಿಮೆ ಮಾಡಿದೆ ಎಂದು ಬಿಂಬಿಸಲಾಗುತ್ತಿದೆ. ಆದರೆ ವಾಸ್ತವದಲ್ಲಿ, ಈಗಾಗಲೇ ಹಣದುಬ್ಬರ, ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಮಧ್ಯಮ ಹಾಗೂ ಕೆಳ ಮಧ್ಯಮ ವರ್ಗದ ಜನರ ಮೇಲೆ ಈ ಹೆಚ್ಚಳ ಗಂಭೀರ ಪರಿಣಾಮ ಬೀರಲಿದೆ.
ಒಟ್ಟಾರೆಯಾಗಿ, ಕೇಂದ್ರದ ಇಂಧನ ಬೆಲೆ ನೀತಿಯನ್ನು ದೂಷಿಸುತ್ತಲೇ, ತನ್ನ ಆರ್ಥಿಕ ಅಸಮತೋಲನವನ್ನು ಸರಿಪಡಿಸಿಕೊಳ್ಳಲು ರಾಜ್ಯ ಸರ್ಕಾರ ಸಾಮಾನ್ಯ ಪ್ರಯಾಣಿಕರ ಜೇಬಿಗೆ ಕೈಹಾಕಿರುವುದು ಸ್ಪಷ್ಟ. ಗ್ಯಾರಂಟಿ ಯೋಜನೆಗಳ ಹೊಳಪಿನ ನಡುವೆ, ಬಸ್ ಹತ್ತುವ ಜನಸಾಮಾನ್ಯ ಮಾತ್ರ ನಿಶ್ಯಬ್ದವಾಗಿ ಬೆಲೆ ತೆರಬೇಕಾಗಿ ಬಂದಿದೆ.

















