ಸೂರತ್: ಕಷ್ಟಪಟ್ಟು ಬೆವರು ಸುರಿಸುವ ಕಾರ್ಮಿಕರ ಶ್ರಮಕ್ಕೆ ಸಿಗುವ ನಿಜವಾದ ಗೌರವ ಹಾಗೂ ಪ್ರೀತಿ ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸುತ್ತದೆ. ಇದಕ್ಕೆ ಸಾಕ್ಷಿಯೆಂಬಂತೆ ಗುಜರಾತ್ನ ಸೂರತ್ನಲ್ಲಿ ಹೃದಯಸ್ಪರ್ಶಿ ಘಟನೆಯೊಂದು ನಡೆದಿದ್ದು, ಜವಳಿ ಉದ್ಯಮಿಯೊಬ್ಬರು ತಮ್ಮ ನೌಕರರಿಗೆ ನೀಡಿದ ಅನಿರೀಕ್ಷಿತ ದೀಪಾವಳಿ ಉಡುಗೊರೆ ಎಲ್ಲರ ಕಣ್ಣಂಚುಗಳನ್ನು ತೇವಗೊಳಿಸಿದೆ.
ಸೂರತ್ನ ಜವಳಿ ಉದ್ಯಮಿ ರಾಮಸ್ವರೂಪ್ ಅವರು ತಮ್ಮಲ್ಲಿ ಕಾರ್ಯನಿರ್ವಹಿಸುವ 20 ನೌಕರರಿಗೆ ತಲಾ 1 ಲಕ್ಷ ರೂಪಾಯಿಗೂ ಅಧಿಕ ನಗದು ಬೋನಸ್ ನೀಡಿ ಅಚ್ಚರಿ ಮೂಡಿಸಿದ್ದಾರೆ. ಕೇವಲ ಹಣ ನೀಡುವುದಷ್ಟೇ ಅಲ್ಲದೆ, ಅದನ್ನು ಅತ್ಯಂತ ಗೌರವಯುತವಾಗಿ ಬೆಳ್ಳಿ ತಟ್ಟೆಯಂತೆ ಅಲಂಕರಿಸಿದ ಪೂಜಾ ತಟ್ಟೆಗಳಲ್ಲಿ ₹10 ರಿಂದ ಹಿಡಿದು ₹500 ಮುಖಬೆಲೆಯ ಹೊಸ ನೋಟಿನ ಕಂತೆಗಳನ್ನು ಜೋಡಿಸಿ ಪ್ರತಿ ನೌಕರನಿಗೂ ಖುದ್ದಾಗಿ ಹಸ್ತಾಂತರಿಸಿದ್ದಾರೆ.
ಕಣ್ಣೀರಾದ ನೌಕರರು, ಹಬ್ಬಿದ ಸಂಭ್ರಮ:
ಸಂಸ್ಥೆಯ ಬೆಳವಣಿಗೆಗೆ ಹೆಗಲುಕೊಟ್ಟು ದುಡಿದ ನೌಕರರಿಗೆ ಈ ದೀಪಾವಳಿ ನಿಜಕ್ಕೂ ಧನಲಕ್ಷ್ಮಿಯ ಆಗಮನದಂತಾಗಿದೆ. ಮಾಲೀಕನ ಈ ಅಪಾರ ಪ್ರೀತಿ, ಕೃತಜ್ಞತಾ ಭಾವ ಹಾಗೂ ಭಾರಿ ಮೊತ್ತದ ಉಡುಗೊರೆಯನ್ನು ಕಂಡ ನೌಕರರು ಆನಂದಭಾಷ್ಪ ಸುರಿಸಿದ್ದಾರೆ. ತಮ್ಮ ಕಷ್ಟ-ಸುಖಗಳಲ್ಲಿ ಜೊತೆಯಾಗಿ ನಿಲ್ಲುವ ಇಂತಹ ಮಾಲೀಕರನ್ನು ಪಡೆದ ತಾವು ಧನ್ಯರೆಂದು ನೌಕರರು ಭಾವುಕರಾಗಿ ನುಡಿದಿದ್ದಾರೆ.

ಕಾರ್ಮಿಕರ ಮುಖದಲ್ಲಿ ನಗು ತರಿಸಿದ ಈ ವಿಶೇಷ ದೀಪಾವಳಿ ಬೋನಸ್ ವಿತರಣೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ನೆಟ್ಟಿಗರು ಉದ್ಯಮಿ ರಾಮಸ್ವರೂಪ್ ಅವರ ದೊಡ್ಡ ಗುಣ ಹಾಗೂ ಮಾನವೀಯತೆಗೆ ಶ್ಲಾಘನೆಗಳ ಸುರಿಮಳೆಗರೆಯುತ್ತಿದ್ದಾರೆ.



















