ಬೆಂಗಳೂರು, ನ.01 www.bengaluruwire.com: ಕನ್ನಡ ರಾಜ್ಯೋತ್ಸವದ ಶುಭ ಸಂದರ್ಭದಲ್ಲಿ ನಾಡಿನ ಹೆಮ್ಮೆಯ ಸಾರ್ವಜನಿಕ ಉದ್ದಿಮೆ ಹೆಚ್‌ಎಂಟಿ (HMT) ಕನ್ನಡಿಗರಿಗೆ ವಿಶೇಷ ಕಾಣಿಕೆ ನೀಡಿದೆ.
ಕೇಂದ್ರ ಸರಕಾರಿ ಸ್ವಾಮ್ಯದ ಹೆಚ್‌ಎಂಟಿ ಸಂಸ್ಥೆ ರೂಪಿಸಿರುವ ನೂತನ ಸರಣಿಯ ‘hmt ಕನ್ನಡಿಗ’ ಕೈಗಡಿಯಾರಗಳನ್ನು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ನವದೆಹಲಿಯಲ್ಲಿ ವಿದ್ಯುಕ್ತವಾಗಿ ನಾಡಿಗೆ ಸಮರ್ಪಿಸಿದರು.
8 ನೂತನ ಆಕರ್ಷಕ ವಿನ್ಯಾಸಗಳು: ಬೆಲೆ ಮತ್ತು ವೈಶಿಷ್ಟ್ಯ:
ಚೈನ್ ಹಾಗೂ ಇಟಲಿಯ ಅಪ್ಪಟ ಚರ್ಮದ ಬೆಲ್ಟ್ (ಸ್ಟ್ರಾಪ್) ಹೊಂದಿರುವ ಒಟ್ಟು 8 ನೂತನ ಮಾದರಿಗಳನ್ನು ಅನಾವರಣಗೊಳಿಸಲಾಗಿದೆ.


ಬೆಲೆ ವಿವರ: ಈ ಕೈಗಡಿಯಾರಗಳ ಆರಂಭಿಕ ಬೆಲೆ ₹3,500 ರಿಂದ ₹3,600 ಇರಲಿದೆ.
ವಿನ್ಯಾಸ ಮತ್ತು ಗುಣಮಟ್ಟ: ಅತ್ಯಾಧುನಿಕ ತಂತ್ರಜ್ಞಾನ, ರೇಡಿಯಂ ಹೊಳಪು ಹಾಗೂ ಅತ್ಯುತ್ಕೃಷ್ಟ ಫಿನಿಶಿಂಗ್ ಹೊಂದಿವೆ. ಬೆಲ್ಟ್ ವಾಚ್‌ಗಳಿಗೆ ₹450 ಮೌಲ್ಯದ ಅಪ್ಪಟ ಇಟಾಲಿಯನ್ ಲೆದರ್ ಬಳಸಲಾಗಿದೆ.
ಲಭ್ಯತೆ: ಶೀಘ್ರದಲ್ಲೇ ಈ ವಾಚ್‌ಗಳು ಹೆಚ್‌ಎಂಟಿ ಶೋರೂಂಗಳು ಹಾಗೂ ಅಧಿಕೃತ ಮಾರಾಟ ಮಳಿಗೆಗಳಲ್ಲಿ ಸಾರ್ವಜನಿಕರಿಗೆ ಖರೀದಿಗೆ ದೊರೆಯಲಿವೆ.
‘ಕರ್ನಾಟಕದ ಅಸ್ಮಿತೆ ಹೆಚ್‌ಎಂಟಿ ಪುನಶ್ಚೇತನಕ್ಕೆ ಪ್ರಾಮಾಣಿಕ ಪ್ರಯತ್ನ’:
ಗಡಿಯಾರಗಳನ್ನು ಬಿಡುಗಡೆ ಮಾಡಿ ಭಾವೋದ್ವೇಗದಿಂದ ಮಾತನಾಡಿದ ಸಚಿವ ಹೆಚ್.ಡಿ. ಕುಮಾರಸ್ವಾಮಿ, “ಒಂದು ಕಾಲದಲ್ಲಿ ‘ಭಾರತದ ಸಮಯಪಾಲಕ’ ಎಂದೇ ಖ್ಯಾತಿ ಪಡೆದಿದ್ದ ಹೆಚ್‌ಎಂಟಿ ಕರ್ನಾಟಕದ ಅಸ್ಮಿತೆಯಾಗಿತ್ತು. ಮೈಸೂರಿನ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದೂರದೃಷ್ಟಿಯಿಂದ 1953 ರಲ್ಲಿ ಬೆಂಗಳೂರಿನಲ್ಲಿ ಸ್ಥಾಪನೆಯಾದ ಈ ಕಾರ್ಖಾನೆ ಲಕ್ಷಾಂತರ ಕುಟುಂಬಗಳಿಗೆ ಬದುಕು ನೀಡಿತ್ತು. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಹೆಚ್‌ಎಂಟಿಗೆ ಹಿಂದಿನ ವೈಭವವನ್ನು ಮರಳಿ ತರಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುತ್ತಿದೆ,” ಎಂದರು.
ಗಣ್ಯರ ಉಪಸ್ಥಿತಿ ಮತ್ತು ಸಂಗೀತ ಸಂಜೆ:
ಕಾರ್ಯಕ್ರಮದಲ್ಲಿ ಹೆಚ್‌ಎಂಟಿ ಸಿಎಂಡಿ ರಮೇಶ್ ಕುಮಾರ್ ಅವರು ನೂತನ ಕೈಗಡಿಯಾರದ ತಾಂತ್ರಿಕ ವಿವರಗಳನ್ನು ಹಂಚಿಕೊಂಡರು. ಸಮಾರಂಭದಲ್ಲಿ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ್, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಸಂಸದ ಡಾ. ಸಿ.ಎನ್. ಮಂಜುನಾಥ್, ಮಾಜಿ ಸಚಿವ ಸಾರಾ ಮಹೇಶ್, ಶಾಸಕರಾದ ಮುನಿರತ್ನ, ಎಂ.ಟಿ. ಕೃಷ್ಣಪ್ಪ, ಟಿ.ಎ. ಶರವಣ, ಎ.ಪಿ. ರಂಗನಾಥ್ ಹಾಗೂ ರಾಜ್ಯದ ಪ್ರಮುಖ ಕನ್ನಡಪರ ಹೋರಾಟಗಾರರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಂಗವಾಗಿ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮತ್ತು ತಂಡದಿಂದ ನಡೆದ ಕನ್ನಡ ಗೀತೆಗಳ ಸಂಗೀತ ಸಂಜೆ ನೆರೆದಿದ್ದವರ ಮನಸೂರೆಗೊಂಡಿತು.

















