ನವದೆಹಲಿ, ನ.02 www.bengaluruwire.com: ಭಾರತದ ಸರಕು ಮತ್ತು ಸೇವಾ ತೆರಿಗೆ (GST) ಸಂಗ್ರಹದಲ್ಲಿ ಅಭೂತಪೂರ್ವ ಏರಿಕೆ ದಾಖಲಾಗಿದೆ.
ಅಕ್ಟೋಬರ್ ತಿಂಗಳಿನಲ್ಲಿ ಒಟ್ಟು ಜಿಎಸ್ಟಿ ಸಂಗ್ರಹವು ವಾರ್ಷಿಕ ಆಧಾರದಲ್ಲಿ ಶೇಕಡಾ 22.9ರಷ್ಟು (ಸುಮಾರು 23%) ಜಿಗಿತ ಕಂಡಿದ್ದು, ₹2.31 ಲಕ್ಷ ಕೋಟಿ ದಾಟಿದೆ. 2017ರಲ್ಲಿ ದೇಶದಲ್ಲಿ ಜಿಎಸ್ಟಿ ವ್ಯವಸ್ಥೆ ಜಾರಿಗೆ ಬಂದ ನಂತರ ದಾಖಲಾದ ಎರಡನೇ ಗರಿಷ್ಠ ಮಾಸಿಕ ಸಂಗ್ರಹ ಇದಾಗಿದೆ.
ಹಬ್ಬದ ಸೀಸನ್ನಲ್ಲಿ ದೇಶೀಯ ವಹಿವಾಟು ಗರಿಗೆದರಿರುವುದು ಹಾಗೂ ಆಮದು ಸುಂಕದ ಹೆಚ್ಚಳವೇ ಈ ದಾಖಲೆಯ ಆದಾಯಕ್ಕೆ ಪ್ರಮುಖ ಕಾರಣವೆಂದು ಕೇಂದ್ರ ಹಣಕಾಸು ಇಲಾಖೆ ತಿಳಿಸಿದೆ. ಕಳೆದ ವರ್ಷದ ಅಕ್ಟೋಬರ್ ಅವಧಿಯಲ್ಲಿ ₹1.88 ಲಕ್ಷ ಕೋಟಿ ಜಿಎಸ್ಟಿ ಸಂಗ್ರಹವಾಗಿತ್ತು.
ಪ್ರಮುಖ ತೆರಿಗೆ ಲೆಕ್ಕಾಚಾರಗಳು:

ಒಟ್ಟು ಜಿಎಸ್ಟಿ ಮೊತ್ತ: ₹2.31 ಲಕ್ಷ ಕೋಟಿ
ಸಿ-ಜಿಎಸ್ಟಿ (CGST): ₹42,935 ಕೋಟಿ
ಎಸ್-ಜಿಎಸ್ಟಿ (SGST): ₹51,340 ಕೋಟಿ
ಐ-ಜಿಎಸ್ಟಿ (IGST): ₹1.37 ಲಕ್ಷ ಕೋಟಿಗೂ ಹೆಚ್ಚು
ನಿವ್ವಳ ಜಿಎಸ್ಟಿ ಆದಾಯ (ರಿಫಂಡ್ಗಳ ನಂತರ): ₹2.03 ಲಕ್ಷ ಕೋಟಿ (25.6% ಹೆಚ್ಚಳ)
ಕರ್ನಾಟಕಕ್ಕೆ ದ್ವಿತೀಯ ಸ್ಥಾನ:
ರಾಜ್ಯವಾರು ಜಿಎಸ್ಟಿ ಸಂಗ್ರಹದಲ್ಲೂ ಪ್ರಮುಖ ರಾಜ್ಯಗಳು ಉತ್ತಮ ಸಾಧನೆ ತೋರಿವೆ. ಮಹಾರಾಷ್ಟ್ರ ರಾಜ್ಯವು ₹35,150 ಕೋಟಿ ಸಂಗ್ರಹದೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಕರ್ನಾಟಕ ರಾಜ್ಯವು ಶೇಕಡಾ 18ರಷ್ಟು ವೃದ್ಧಿ ಸಾಧಿಸಿ ₹15,922 ಕೋಟಿ ಜಿಎಸ್ಟಿ ಸಂಗ್ರಹಿಸುವ ಮೂಲಕ ಎರಡನೇ ಪ್ರಮುಖ ಸ್ಥಾನ ಕಾಯ್ದುಕೊಂಡಿದೆ. ಗುಜರಾತ್ ₹13,516 ಕೋಟಿ ಸಂಗ್ರಹಿಸಿದೆ.

















