ಬೆಂಗಳೂರು, ನ.03 www.bengaluruwire.com: ನೈಋತ್ಯ ರೈಲ್ವೆಯು (SWR) ಸರಕು ಸಾಗಣೆ ಹಾಗೂ ಆದಾಯ ಗಳಿಕೆಯಲ್ಲಿ ಸಾರ್ವಕಾಲಿಕ ದಾಖಲೆ ನಿರ್ಮಿಸಿದೆ. ಅಕ್ಟೋಬರ್ 2026ರ ಅವಧಿಯಲ್ಲಿ ಬರೋಬ್ಬರಿ 5.5 ಮಿಲಿಯನ್ ಟನ್ (MT) ಸರಕುಗಳನ್ನು ಸಾಗಿಸುವ ಮೂಲಕ ರೈಲ್ವೆ ವಲಯ ಸ್ಥಾಪನೆಯಾದ ನಂತರದ ಅತಿ ಗರಿಷ್ಠ ಮಾಸಿಕ ಸರಕು ಸಾಗಣೆಯ ಮೈಲಿಗಲ್ಲು ಸ್ಥಾಪಿಸಿದೆ.
ಇದರೊಂದಿಗೆ ಅಕ್ಟೋಬರ್ ತಿಂಗಳಿನಲ್ಲಿ ಒಟ್ಟು ₹928 ಕೋಟಿ ಆದಾಯ ಸಂಗ್ರಹವಾಗಿದ್ದು, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ. 20ರಷ್ಟು ಪ್ರಗತಿ ದಾಖಲಾಗಿದೆ.
ಸರಕು ಸಾಗಣೆಯಲ್ಲಿ ಶೇ. 31ರಷ್ಟು ಭರ್ಜರಿ ಏರಿಕೆ:
ಹಿಂದಿನ ವರ್ಷದ ಅಕ್ಟೋಬರ್ನಲ್ಲಿ 4.2 ಮಿಲಿಯನ್ ಟನ್ ಸರಕು ಸಾಗಿಸಲಾಗಿತ್ತು. ಈ ಬಾರಿ ಶೇ. 31ರಷ್ಟು ಏರಿಕೆಯೊಂದಿಗೆ 5.5 ಮಿಲಿಯನ್ ಟನ್ಗೆ ತಲುಪಿದೆ. ಪ್ರಮುಖವಾಗಿ ಕಲ್ಲಿದ್ದಲು ಸಾಗಣೆಯಲ್ಲಿ ಭಾರೀ ಹೆಚ್ಚಳ ಕಂಡುಬಂದಿದ್ದು, 0.80 MT ನಿಂದ 1.37 MT ಗೆ (ಶೇ. 71ರಷ್ಟು) ಜಿಗಿತ ಕಂಡಿದೆ.

ಇತರೆ ಪ್ರಮುಖ ಸರಕುಗಳ ಸಾಗಣೆಯ ವಿವರ:
ಕಬ್ಬಿಣ ಮತ್ತು ಸಿದ್ಧ ಉಕ್ಕು: 0.88 MT ನಿಂದ 1.10 MT (ಶೇ. 23.9 ಏರಿಕೆ)
ಖನಿಜ ತೈಲ: 0.17 MT ನಿಂದ 0.23 MT (ಶೇ. 40.4 ಏರಿಕೆ)
ಕಂಟೇನರ್ ಸಾಗಣೆ: 0.07 MT ನಿಂದ 0.10 MT (ಶೇ. 43.1 ಏರಿಕೆ)
ರಸಗೊಬ್ಬರ: 0.12 MT ನಿಂದ 0.15 MT (ಶೇ. 26.9 ಏರಿಕೆ)
ಪ್ರಯಾಣಿಕರ ಸಂಚಾರ ಮತ್ತು ಆದಾಯದಲ್ಲೂ ಗಮನಾರ್ಹ ಏರಿಕೆ:
ಅಕ್ಟೋಬರ್ ತಿಂಗಳಲ್ಲಿ ಕೇವಲ ಸರಕು ಸಾಗಣೆಯಷ್ಟೇ ಅಲ್ಲದೆ, ಪ್ರಯಾಣಿಕರ ದಟ್ಟಣೆಯಲ್ಲೂ ಚೇತರಿಕೆ ಕಂಡುಬಂದಿದೆ. ತಿಂಗಳಲ್ಲಿ ಒಟ್ಟು 1.7 ಕೋಟಿ ಪ್ರಯಾಣಿಕರು ಪ್ರಯಾಣಿಸಿದ್ದು, ಪ್ರಯಾಣಿಕರ ಸಾರಿಗೆಯಿಂದ ₹358 ಕೋಟಿ ಆದಾಯ ಬಂದಿದೆ (ಶೇ. 19ರಷ್ಟು ಹೆಚ್ಚಳ). ಸರಕು ಸಾಗಣೆಯಿಂದ ₹524 ಕೋಟಿ, ಪಾರ್ಸೆಲ್ ಮೂಲಕ ₹17 ಕೋಟಿ ಹಾಗೂ ಟಿಕೆಟ್ ತಪಾಸಣೆಯಿಂದ ₹8.3 ಕೋಟಿ ದಂಡ/ಆದಾಯ ಸಂಗ್ರಹವಾಗಿದೆ. ನಿಗದಿಪಡಿಸಲಾಗಿದ್ದ ₹895 ಕೋಟಿ ಮಾಸಿಕ ಗುರಿಯನ್ನು ಮೀರಿ ರೈಲ್ವೆ ಇಲಾಖೆ ಸಾಧನೆ ಮಾಡಿದೆ.
7 ತಿಂಗಳ ಸಂಚಿತ ಆದಾಯ ₹5,620 ಕೋಟಿ:
ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್ನಿಂದ ಅಕ್ಟೋಬರ್ 2026ರವರೆಗಿನ 7 ತಿಂಗಳ ಅವಧಿಯಲ್ಲಿ ನೈಋತ್ಯ ರೈಲ್ವೆಯು ಒಟ್ಟು ₹5,620 ಕೋಟಿ ಸಂಚಿತ ಆದಾಯ ಗಳಿಸಿದೆ. ಕಳೆದ ಸಾಲಿನ ಇದೇ ಅವಧಿಯ ₹5,282 ಕೋಟಿಗೆ ಹೋಲಿಸಿದರೆ ಇದು ಶೇ. 6.4ರಷ್ಟು ಬೆಳವಣಿಗೆಯಾಗಿದೆ. ಇದೇ ಅವಧಿಯಲ್ಲಿ ಒಟ್ಟು 10.9 ಕೋಟಿ ಪ್ರಯಾಣಿಕರು ಪ್ರಯಾಣಿಸಿದ್ದು, ಒಟ್ಟು 31.56 ಮಿಲಿಯನ್ ಟನ್ ಸರಕುಗಳನ್ನು ಸಾಗಿಸಲಾಗಿದೆ.
ಅಧಿಕಾರಿಗಳು ಹಾಗೂ ಸಿಬ್ಬಂದಿಯ ನಿರಂತರ ಪರಿಶ್ರಮದಿಂದಲೇ ಈ ಐತಿಹಾಸಿಕ ಸಾಧನೆ ಸಾಧ್ಯವಾಗಿದ್ದು ಎಂದು ನೈಋತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕರಾದ ಪಿ. ಅನಂತ್ ಅವರು ಸಂಪೂರ್ಣ ತಂಡದ ಕಾರ್ಯವೈಖರಿಯನ್ನು ಶ್ಲಾಘಿಸಿದ್ದಾರೆ.


















