ಚಿಕ್ಕಬಳ್ಳಾಪುರ, ಅ.24 www.bengaluruwire.com: ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಸುತ್ತಮುತ್ತ ಇಂದು (ಅಕ್ಟೋಬರ್ 24) ಬೆಳಗಿನ ಜಾವ ಲಘು ಭೂಕಂಪನ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 2.9 ರಷ್ಟು ತೀವ್ರತೆ ದಾಖಲಾಗಿದ್ದು, ನಿದ್ದೆಯಲ್ಲಿದ್ದ ಜನರು ಕ್ಷಣಕಾಲ ಆತಂಕಕ್ಕೊಳಗಾಗಿದ್ದಾರೆ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ನೀಡಿರುವ ಅಧಿಕೃತ ಮಾಹಿತಿಯ ಪ್ರಕಾರ, ಇಂದು ಮುಂಜಾನೆ ಸರಿಯಾಗಿ 03:29:53 ಗಂಟೆಗೆ ಭೂಮಿ ಕಂಪಿಸಿದ ಅನುಭವವಾಗಿದೆ. ಗೌರಿಬಿದನೂರು ತಾಲೂಕಿನ ತರಿದಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೋಮಶೆಟ್ಟಿಹಳ್ಳಿ ಗ್ರಾಮದಿಂದ ಪೂರ್ವಕ್ಕೆ 2.0 ಕಿ.ಮೀ ದೂರದಲ್ಲಿ ಹಾಗೂ ಭೂಮಿಯ 5 ಕಿ.ಮೀ ಆಳದಲ್ಲಿ ಭೂಕಂಪನದ ಕೇಂದ್ರಬಿಂದು (Epicentre) ಪತ್ತೆಯಾಗಿದೆ.
ಎಲ್ಲಿಲ್ಲಿ ಕಂಪನದ ಅನುಭವವಾಗಿದೆ?:
ಕೇಂದ್ರಬಿಂದುವಿನಿಂದ ಸುತ್ತಮುತ್ತಲಿನ ಸುಮಾರು 20 ರಿಂದ 30 ಕಿ.ಮೀ ವ್ಯಾಪ್ತಿಯಲ್ಲಿ ಭೂಮಿ ಕಂಪಿಸಿದ ಅನುಭವವಾಗಿರುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಮುಖವಾಗಿ ಈ ಕೆಳಗಿನ ಪ್ರದೇಶಗಳ ಸಮೀಪ ಕಂಪನ ದಾಖಲಾಗಿದೆ:

ಗೌರಿಬಿದನೂರು ತಾಲೂಕಿನ ತರಿದಾಳು ಗ್ರಾಮ ಪಂಚಾಯಿತಿಯಿಂದ ನೈಋತ್ಯಕ್ಕೆ 2.53 ಕಿ.ಮೀ ದೂರದಲ್ಲಿ. ಅಲಿಪುರ ಗ್ರಾಮ ಪಂಚಾಯಿತಿಯಿಂದ ವಾಯುವ್ಯಕ್ಕೆ 4.30 ಕಿ.ಮೀ ದೂರದಲ್ಲಿ.
ಚಿಕ್ಕಬಳ್ಳಾಪುರ ನಗರದಿಂದ ವಾಯುವ್ಯಕ್ಕೆ 33 ಕಿ.ಮೀ ದೂರದಲ್ಲಿ ಭೂಮಿ ಕಂಪಿಸಿದೆ.
ಸಾರ್ವಜನಿಕರು ಭಯಪಡುವ ಅಗತ್ಯವಿಲ್ಲ:
ಈ ಭೂಕಂಪನದ ತೀವ್ರತೆ ತೀರಾ ಕಡಿಮೆ (2.9 ಮ್ಯಾಗ್ನಿಟ್ಯೂಡ್) ಇರುವುದರಿಂದ ಸ್ಥಳೀಯವಾಗಿ ಸಣ್ಣ ಮಟ್ಟದ ಕಂಪನದ ಅನುಭವವಾಗಿದ್ದರೂ, ಇದರಿಂದ ಯಾವುದೇ ರೀತಿಯ ಆಸ್ತಿ-ಪಾಸ್ತಿ ಅಥವಾ ಪ್ರಾಣಹಾನಿ ಸಂಭವಿಸುವುದಿಲ್ಲ.
ಈ ಪ್ರದೇಶವು ಭೂಕಂಪನ ವಲಯ-2 (Seismic Zone II) ರಲ್ಲಿ ಬರುವುದರಿಂದ ಯಾವುದೇ ಗಂಭೀರ ಸ್ವರೂಪದ ಭೌಗೋಳಿಕ ಅಪಾಯಗಳಿಲ್ಲ. ಆದ್ದರಿಂದ ಸಾರ್ವಜನಿಕರು ಯಾವುದೇ ಕಾರಣಕ್ಕೂ ಭಯಭೀತರಾಗುವ ಅಥವಾ ಆತಂಕಪಡುವ ಅಗತ್ಯವಿಲ್ಲ ಎಂದು ಕೆಎಸ್ಎನ್ಡಿಎಂಸಿ (KSNDMC) ನಿರ್ದೇಶಕರು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.


















