ನವದೆಹಲಿ, ಅ.23 www.bengaluruwire.com: ಕನ್ನಡ ನಾಡಿನ ವೀರವನಿತೆ ಕಿತ್ತೂರು ರಾಣಿ ಚೆನ್ನಮ್ಮನವರ ಜಯಂತಿ ಹಾಗೂ ಬ್ರಿಟಿಷರ ವಿರುದ್ಧದ 202ನೇ ವಿಜಯೋತ್ಸವವನ್ನು ನವದೆಹಲಿಯ ಸಂಸತ್ತಿನ ಆವರಣದಲ್ಲಿರುವ ‘ಪ್ರೇರಣಾ ಸ್ಥಳ’ದಲ್ಲಿ ಇಂದು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು. ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವರು ಹಾಗೂ ತುಮಕೂರು ಸಂಸದರಾದ ವಿ. ಸೋಮಣ್ಣ ಅವರ ನೇತೃತ್ವದಲ್ಲಿ ಈ ಐತಿಹಾಸಿಕ ಕಾರ್ಯಕ್ರಮ ಜರುಗಿತು.
ಸಂಸತ್ ಆವರಣದಲ್ಲಿರುವ ರಾಣಿ ಚೆನ್ನಮ್ಮನವರ ಭವ್ಯ ಪ್ರತಿಮೆಗೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಕೇಂದ್ರ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ್ ಸೇರಿದಂತೆ ಹಲವು ಗಣ್ಯರು ಪುಷ್ಪನಮನ ಸಲ್ಲಿಸುವ ಮೂಲಕ ವೀರರಾಣಿಯ ಶೌರ್ಯವನ್ನು ಸ್ಮರಿಸಿದರು.
ಗಣ್ಯರು ಹಾಗೂ ಮಠಾಧೀಶರ ಉಪಸ್ಥಿತಿ:
ಈ ವಿಶೇಷ ಸಮಾರಂಭದಲ್ಲಿ ಸಂಸದರಾದ ಪಿ.ಸಿ. ಮೋಹನ್, ಡಾ. ಕೆ. ಸುಧಾಕರ್, ಮಾಜಿ ಸಚಿವರಾದ ಮುರುಗೇಶ್ ನಿರಾಣಿ, ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ದೆಹಲಿಯ ಮಾಜಿ ವಿಶೇಷ ಪ್ರತಿನಿಧಿ ಶಂಕರಗೌಡ ಪಾಟೀಲ್ ಪಾಲ್ಗೊಂಡಿದ್ದರು.

ಇದೇ ವೇಳೆ ಕೂಡಲಸಂಗಮದ ಪೂಜ್ಯ ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ, ಬೀದರ್ನ ಆಲೂರು ಶ್ರೀ ಸಿದ್ಧಾರೂಢ ಮಠದ ಶ್ರೀ ಶಂಕರಾನಂದ ಸ್ವಾಮೀಜಿ, ಕಕ್ಕಮರಿಯ ಶ್ರೀ ಗುರುದೇವ ಆಶ್ರಮದ ಶ್ರೀ ಆತ್ಮಾರಾಮ ಸ್ವಾಮೀಜಿ ಹಾಗೂ ಚಳಕಾಪುರ ಸಿದ್ಧಾರೂಢ ಮಠದ ಶ್ರೀ ವಿನಾಯಕ ಸ್ವಾಮೀಜಿಗಳು ಸಾನ್ನಿಧ್ಯ ವಹಿಸಿದ್ದರು. ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ನೂರಾರು ಕನ್ನಡಿಗರು ಹಾಗೂ ದೆಹಲಿ ಅನಿವಾಸಿ ಕನ್ನಡಿಗರು ಚೆನ್ನಮ್ಮನವರ ಪ್ರತಿಮೆಗೆ ಗೌರವ ಸಮರ್ಪಿಸಿದರು.
ಚೆನ್ನಮ್ಮ ಅಮರ ಪ್ರತಿರೋಧದ ಸಂಕೇತ: ವಿ. ಸೋಮಣ್ಣ:
ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವ ವಿ. ಸೋಮಣ್ಣ, ದೇಶದ ಜನತೆಗೆ ರಾಣಿ ಚೆನ್ನಮ್ಮ ಜಯಂತಿ ಹಾಗೂ 202ನೇ ವಿಜಯೋತ್ಸವದ ಶುಭಾಶಯಗಳನ್ನು ತಿಳಿಸಿದರು. ಕಾರ್ಯಕ್ರಮಕ್ಕೆ ಆಗಮಿಸಿ ಮೆರುಗು ನೀಡಿದ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಮತ್ತು ಕೇಂದ್ರ ಸಚಿವ ಸಿ.ಆರ್. ಪಾಟೀಲ್ ಅವರಿಗೆ ಸಮಸ್ತ ಕನ್ನಡಿಗರ ಪರವಾಗಿ ಕೃತಜ್ಞತೆ ಸಲ್ಲಿಸಿದರು.
”ಕಿತ್ತೂರು ರಾಣಿ ಚೆನ್ನಮ್ಮ ಕೇವಲ ಯುದ್ಧ ಮಾಡಿದ ರಾಣಿಯಲ್ಲ; ಬದಲಾಗಿ ಸಾಮ್ರಾಜ್ಯಶಾಹಿ ಶಕ್ತಿಗೆ ಸವಾಲು ಹಾಕಿ ಇತಿಹಾಸದಲ್ಲಿ ಅಮರ ಪ್ರತಿರೋಧದ ಸಂಕೇತವಾಗಿ ಉಳಿದವರು. ಇಂತಹ ವೀರ ಮಹಿಳೆಯ ಸಾಧನೆಯನ್ನು ಸಂಸತ್ತಿನ ಪವಿತ್ರ ಸ್ಥಳದಲ್ಲಿ ಆಚರಿಸುತ್ತಿರುವುದು ನಮ್ಮೆಲ್ಲರ ಹೆಮ್ಮೆ. ಚೆನ್ನಮ್ಮನವರ ಶೌರ್ಯ ಮತ್ತು ದೇಶಭಕ್ತಿ ಇಂದು ದೇಶ ಕಾಯುವ ವೀರ ಯೋಧರಿಗೆ ನಿರಂತರ ಸ್ಫೂರ್ತಿಯಾಗಿದೆ. ನಾಡು-ನುಡಿಯ ಮೇಲೆ ಅಭಿಮಾನವಿರುವ ನಾವೆಲ್ಲರೂ ಪ್ರತಿವರ್ಷ ಇಲ್ಲಿ ಒಟ್ಟಾಗಿ ಸೇರಿ ಇಂತಹ ಮಹಾನ್ ಚೇತನಗಳನ್ನು ಸ್ಮರಿಸೋಣ” ಎಂದು ಸೋಮಣ್ಣ ಕರೆ ನೀಡಿದರು.
ಪ್ರಧಾನಿ ಮೋದಿಗೆ ವಿಶೇಷ ಧನ್ಯವಾದ:
ಪ್ರತಿವರ್ಷ ಸಂಸತ್ ಆವರಣದಲ್ಲಿ ಈ ಕಾರ್ಯಕ್ರಮ ಆಯೋಜಿಸಲು ಅನುಮತಿ ನೀಡಿ, ನಿರಂತರ ಪ್ರೇರಣಾ ಶಕ್ತಿಯಾಗಿ ನಿಂತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ವಿ. ಸೋಮಣ್ಣ ಅವರು ಕರ್ನಾಟಕದ ಜನತೆಯ ಪರವಾಗಿ ವಿಶೇಷ ಧನ್ಯವಾದ ಅರ್ಪಿಸಿದರು. ಜೊತೆಗೆ ಸಹಕಾರ ನೀಡಿದ ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ಲೋಕಸಭೆ ಮತ್ತು ರೈಲ್ವೆ ಸಚಿವಾಲಯದ ಅಧಿಕಾರಿಗಳಿಗೂ ಕೃತಜ್ಞತೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಕೂಡಲಸಂಗಮದ ಪೂಜ್ಯ ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ, ಸಂಸತ್ತಿನ ಪ್ರೇರಣಾ ಸ್ಥಳದಲ್ಲಿ ಪ್ರತಿವರ್ಷ ಇಂತಹ ಅರ್ಥಪೂರ್ಣ ಕಾರ್ಯಕ್ರಮವನ್ನು ಆಯೋಜಿಸುತ್ತಿರುವ ಕೇಂದ್ರ ಸಚಿವ ವಿ. ಸೋಮಣ್ಣ ಅವರ ಕಾಳಜಿ ಮತ್ತು ಪ್ರಯತ್ನದ ಬಗ್ಗೆ ತೀವ್ರ ಮೆಚ್ಚುಗೆ ವ್ಯಕ್ತಪಡಿಸಿದರು.


















