ಬೆಂಗಳೂರು, ಅ.26 www.bengaluruwire.com: ಬೆಸ್ಕಾಂ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಮಹತ್ವಾಕಾಂಕ್ಷಿ ಗೃಹ ಜ್ಯೋತಿ ಯೋಜನೆಯ ಮನೆ-ಮನೆ ಸಮೀಕ್ಷೆಗೆ ನೀಡಲಾಗಿರುವ ಕಾಲಾವಕಾಶ ಅಕ್ಟೋಬರ್ 31ಕ್ಕೆ ಮುಕ್ತಾಯಗೊಳ್ಳಲಿದೆ.
ಈ ಹಿನ್ನೆಲೆಯಲ್ಲಿ ಇದುವರೆಗೆ ಸಮೀಕ್ಷೆಗೆ ಒಳಪಡದ ಗ್ರಾಹಕರು ತಕ್ಷಣವೇ ಅಗತ್ಯ ದಾಖಲೆಗಳನ್ನು ಬೆಸ್ಕಾಂ ಉಪ ವಿಭಾಗ ಕಚೇರಿಗೆ ಖುದ್ದಾಗಿ ತೆರಳಿ ಸಲ್ಲಿಸುವಂತೆ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (BESCOM) ಕಟ್ಟುನಿಟ್ಟಿನ ಸೂಚನೆ ನೀಡಿದೆ.
ದಾಖಲಾತಿ ಸಲ್ಲಿಸಲು ಇದು ಕೊನೆಯ ಅವಕಾಶ:
ಕಳೆದ ಮೂರುವರೆ ತಿಂಗಳಿಂದ ನಿರಂತರವಾಗಿ ನಡೆಯುತ್ತಿರುವ ಈ ವಿಶೇಷ ಸಮೀಕ್ಷಾ ಕಾರ್ಯದಲ್ಲಿ ಮನೆಗೆ ಬೀಗ ಹಾಕಿರುವ, ಮನೆ ಖಾಲಿ ಇರುವ ಹಾಗೂ ಸಿಬ್ಬಂದಿ ಭೇಟಿ ನೀಡಿದಾಗ ಸಮೀಕ್ಷೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದ ಗ್ರಾಹಕರಿಗೆ ಸರ್ಕಾರ ಕಚೇರಿಗೆ ತೆರಳಿ ದಾಖಲೆ ನೀಡಲು ಅವಕಾಶ ಕಲ್ಪಿಸಿದೆ. ನಿಗದಿತ ಅಕ್ಟೋಬರ್ 31ರ ಗಡುವಿನ ನಂತರ ಯಾವುದೇ ಕಾರಣಕ್ಕೂ ದಿನಾಂಕ ವಿಸ್ತರಣೆ ಮಾಡುವುದಿಲ್ಲ ಎಂದು ಬೆಸ್ಕಾಂ ಸ್ಪಷ್ಟಪಡಿಸಿದ್ದು, ಅರ್ಹ ಗ್ರಾಹಕರಿಗೆ ಇದು ಅಂತಿಮ ಅವಕಾಶವಾಗಿದೆ.

ಶೇ. 98.49 ರಷ್ಟು ಸಮೀಕ್ಷೆ ಪೂರ್ಣ:
ಬೆಸ್ಕಾಂ ವ್ಯಾಪ್ತಿಯ 8 ಜಿಲ್ಲೆಗಳಲ್ಲಿ ಭಾಗ್ಯ ಜ್ಯೋತಿ, ಕುಟೀರ ಜ್ಯೋತಿ ಹಾಗೂ ಅಮೃತ ಜ್ಯೋತಿ ಫಲಾನುಭವಿಗಳು ಸೇರಿದಂತೆ ಒಟ್ಟು 74,29,773 ಗ್ರಾಹಕರು ಗೃಹ ಜ್ಯೋತಿ ಸೌಲಭ್ಯ ಪಡೆಯುತ್ತಿದ್ದಾರೆ. ಅಕ್ಟೋಬರ್ 22ರ ಅಂಕಿಅಂಶಗಳ ಪ್ರಕಾರ, ಇವರ ಪೈಕಿ ಈಗಾಗಲೇ 73,17,687 ಗ್ರಾಹಕರ ಸಮೀಕ್ಷೆ (ಶೇ. 98.49) ಯಶಸ್ವಿಯಾಗಿ ಪೂರ್ಣಗೊಂಡಿದೆ.
ಬೀಗ ಹಾಕಿರುವ ಹಾಗೂ ಸಿಬ್ಬಂದಿ ಸಂಪರ್ಕಕ್ಕೆ ಸಿಗದ ಮನೆಗಳಿಗೆ ಬೆಸ್ಕಾಂ ನೌಕರರು ಈಗಾಗಲೇ ಮೂರು ಬಾರಿ ಭೇಟಿ ನೀಡಿದ್ದಾರೆ. ಜತೆಗೆ ಗ್ರಾಹಕರ ನೋಂದಾಯಿತ ಮೊಬೈಲ್ ಸಂಖ್ಯೆಗಳಿಗೆ ಸಮೀಕ್ಷೆಯಲ್ಲಿ ಪಾಲ್ಗೊಳ್ಳುವಂತೆ ಸಂದೇಶ (SMS) ಕೂಡ ಕಳುಹಿಸಲಾಗಿದೆ. ಆದಾಗ್ಯೂ ಉಳಿದಿರುವ ಅಲ್ಪ ಪ್ರಮಾಣದ ಗ್ರಾಹಕರು ಅಕ್ಟೋಬರ್ 31ರೊಳಗೆ ಸಮೀಪದ ಬೆಸ್ಕಾಂ ಕಚೇರಿಗೆ ತೆರಳಿ ತಮ್ಮ ವಿದ್ಯುತ್ ಬಿಲ್ ಹಾಗೂ ಆಧಾರ್ ಲಿಂಕ್ ದಾಖಲೆಗಳನ್ನು ನೀಡಿ ಸಮೀಕ್ಷೆ ಪ್ರಕ್ರಿಯೆ ಮುಗಿಸಿಕೊಳ್ಳಬೇಕು ಎಂದು ಪ್ರಕಟಣೆಯಲ್ಲಿ ಕೋರಲಾಗಿದೆ.


















