ಬೆಂಗಳೂರು, ಅ.22 www.bengaluruwire.com: ಮೈಸೂರು ದಸರಾ ಮಹೋತ್ಸವದ ನಂದಿಧ್ವಜ ಪೂಜೆ ಸಂದರ್ಭದಲ್ಲಿ ಸಚಿವರುಗಳಿಗೆ ಪ್ರವೇಶ ನಿರಾಕರಿಸಿದ ಪೊಲೀಸ್ ಅಧಿಕಾರಿಗಳ ನಡೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತೀವ್ರ ಗರಂ ಆಗಿದ್ದಾರೆ.
ಈ ಪ್ರಕರಣದ ಕುರಿತು ಸಮಗ್ರ ವಿಚಾರಣೆ ನಡೆಸಿ ವರದಿ ನೀಡುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಸಿಎಂ ಆದೇಶಿಸಿದ್ದಾರೆ.
ಗುರುವಾರ ನವದೆಹಲಿಗೆ ತೆರಳುವ ಮುನ್ನ ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೈಸೂರು ಅರಮನೆ ಆವರಣದಲ್ಲಿ ನಿನ್ನೆ ನಡೆದ ನಂದಿಧ್ವಜ ಪೂಜೆ ವೇಳೆ ಸಚಿವರಾದ ಬಾಲಕೃಷ್ಣ, ನರೇಂದ್ರ ಸ್ವಾಮಿ ಹಾಗೂ ಬಸವಂತಪ್ಪ ಅವರನ್ನು ಪೂಜಾ ಆವರಣ ಪ್ರವೇಶಿಸದಂತೆ ಪೊಲೀಸ್ ಅಧಿಕಾರಿಗಳು ನಿರ್ಬಂಧಿಸಿದ್ದರು. ಅಧಿಕಾರಿಗಳ ಈ ಉದ್ಧಟತನದ ವರ್ತನೆಯನ್ನು ಗಮನಿಸಿ ಖುದ್ದು ತಾವೇ ಮಧ್ಯಪ್ರವೇಶಿಸಿ ಸಚಿವರ ಪ್ರವೇಶಕ್ಕೆ ಅನುವು ಮಾಡಿಕೊಟ್ಟಿರುವುದಾಗಿ ತಿಳಿಸಿದರು.
”ಮಂತ್ರಿಗಳನ್ನೇ ನಿರ್ಬಂಧಿಸುವ ಮೂಲಕ ಅಧಿಕಾರಿಗಳು ತೋರಿರುವ ಉಡಾಫೆ ಸಹಿಸಲು ಸಾಧ್ಯವಿಲ್ಲ. ವಿಡಿಯೋ ತುಣುಕುಗಳನ್ನು ಪರಿಶೀಲಿಸಿ, ಇದಕ್ಕೆ ಹೊಣೆಗಾರರು ಯಾರು ಎಂಬ ಬಗ್ಗೆ ವಿಚಾರಣೆ ನಡೆಸಿ ವರದಿ ನೀಡುವಂತೆ ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸಿದ್ದೇನೆ. ವರದಿ ಬಂದ ಬಳಿಕ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು” ಎಂದು ಸಿಎಂ ಎಚ್ಚರಿಸಿದ್ದಾರೆ.

ಕಬ್ಬು ಬೆಳೆಗಾರರ ಸಭೆ ಹಾಗೂ ದೆಹಲಿ ಭೇಟಿ: ಮೇಕೆದಾಟು, ಮಹದಾಯಿ ಚರ್ಚೆ:
ಇದೇ ತಿಂಗಳ 26ರಂದು ಕಬ್ಬು ಬೆಳೆಗಾರರ ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕರ ಸಭೆ ಕರೆಯಲಾಗಿದೆ ಎಂದು ಸಿಎಂ ಮಾಹಿತಿ ನೀಡಿದರು. ಈ ಸಭೆಯಲ್ಲಿ ಪಾಲ್ಗೊಳ್ಳಲು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಮೊದಲು ಒಪ್ಪಿಗೆ ಸೂಚಿಸಿದ್ದರು, ಆದರೆ ಅನಿವಾರ್ಯ ಕಾರಣಗಳಿಂದ ಅವರಿಗೆ ಬರಲು ಸಾಧ್ಯವಾಗುತ್ತಿಲ್ಲ. ಇದು ಕೇವಲ ಕರ್ನಾಟಕದ ಸಮಸ್ಯೆ ಮಾತ್ರವಲ್ಲದೆ ಬೇರೆ ರಾಜ್ಯಗಳಿಗೂ ಸಂಬಂಧಿಸಿದ ವಿಚಾರವಾಗಿರುವುದರಿಂದ ಕೇಂದ್ರ ಸರ್ಕಾರದ ಸಂಬಂಧಪಟ್ಟ ಅಧಿಕಾರಿಗಳನ್ನೂ ಸಭೆಗೆ ಆಹ್ವಾನಿಸಲಾಗಿದೆ ಎಂದರು.
ದೆಹಲಿ ಭೇಟಿಯ ಕುರಿತು ಮಾತನಾಡಿದ ಅವರು, ಮೇಕೆದಾಟು ಹಾಗೂ ಮಹದಾಯಿ ಯೋಜನೆಗಳಿಗೆ ಸಂಬಂಧಿಸಿದಂತೆ ಕೆಲವು ಅರಣ್ಯ ಇಲಾಖೆಯ (Forest issues) ತೊಡಕುಗಳಿವೆ. ಈ ಬಗ್ಗೆ ಚರ್ಚಿಸಲು ಕೇಂದ್ರ ಸಚಿವರ ಸಮಯ ಕೇಳಲಾಗಿದೆ. ಕೇರಳ ಹಾಗೂ ಗೋವಾ ಚುನಾವಣೆಗಳು ಸಮೀಪಿಸುತ್ತಿರುವುದರಿಂದ ಕೇಂದ್ರಕ್ಕೆ ನಿರ್ಧಾರ ತೆಗೆದುಕೊಳ್ಳುವುದು ಕಷ್ಟವಾಗಬಹುದು, ಆದರೆ ರೈತರು ಮಹದಾಯಿ ವಿಚಾರವಾಗಿ ಬೇಡಿಕೆ ಇಟ್ಟಿದ್ದಾರೆ.
ಇದರ ಜೊತೆಗೆ ಐಟಿಐ (ITI) ವಿಚಾರವಾಗಿ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರ ಭೇಟಿಗೂ ಸಮಯ ಕೇಳಲಾಗಿದೆ ಎಂದು ತಿಳಿಸಿದರು. ದೆಹಲಿಯಲ್ಲಿ ಎರಡು-ಮೂರು ಗಂಟೆಗಳ ಕಾಲ ಮಾತ್ರ ಇದ್ದು, ಸಂಜೆಯೇ ಬೆಂಗಳೂರಿಗೆ ವಾಪಸ್ ಆಗಲಿದ್ದು, ನಾಳೆ ಪೋಲೆಂಡ್ ಪ್ರಧಾನಮಂತ್ರಿಗಳನ್ನು ಭೇಟಿ ಮಾಡುವ ಕಾರ್ಯಕ್ರಮವಿದೆ ಎಂದರು.
ರಾಜ್ಯದಲ್ಲಿ ಬರಗಾಲ ಮತ್ತು ಕುಡಿಯುವ ನೀರಿನ ಸಮಸ್ಯೆ:
ರಾಜ್ಯದಲ್ಲಿ ಮಳೆಯ ಕೊರತೆಯಿಂದಾಗಿ ಕಾವೇರಿ ಮಾತ್ರವಲ್ಲದೆ ತುಂಗಭದ್ರಾ ಜಲಾಶಯದಲ್ಲೂ ಸಾಕಷ್ಟು ನೀರಿಲ್ಲದಂತಾಗಿದೆ. ಕಾಲುವೆಗಳಿಗೆ ನೀರು ಬಿಡುವ ವಿಚಾರದಲ್ಲಿ ರೈತರಿಂದ ತೀವ್ರ ಬೇಡಿಕೆಯಿದೆ. ಈ ಸಂಬಂಧ ಆಂಧ್ರಪ್ರದೇಶದ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲು ಮನವಿ ಮಾಡಲಾಗಿದ್ದು, ನಾವು ಆಂಧ್ರಕ್ಕೆ ತೆರಳಬೇಕಿದೆ ಅಥವಾ ದೆಹಲಿಯಲ್ಲೇ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಬೇಕಿದೆ ಎಂದರು.
ಬರಗಾಲದ ಹಿನ್ನೆಲೆಯಲ್ಲಿ ಮುಂದಿನ ಕ್ರಿಯಾ ಯೋಜನೆ (Plan of action) ರೂಪಿಸಲು ಹಾಗೂ ಪ್ರಧಾನಮಂತ್ರಿ ಮತ್ತು ಕೇಂದ್ರ ಗೃಹ ಸಚಿವರ ಬಳಿ ಚರ್ಚಿಸಲು ಅಧಿಕಾರಿಗಳ ದೊಡ್ಡ ತಂಡವೊಂದನ್ನು ಸಿದ್ಧಪಡಿಸಲಾಗಿದೆ. ಬೇರೆ ರಾಜ್ಯಗಳ ಬೇಡಿಕೆಗಳೇನು ಎಂಬುದನ್ನು ಪರಿಶೀಲಿಸಿ, ಕೇಂದ್ರದಿಂದ ಮತ್ತೊಂದು ಅಧ್ಯಯನ ತಂಡವನ್ನು ಕಳುಹಿಸಿಕೊಡುವಂತೆ ಮನವಿ ಮಾಡಲಾಗುವುದು. ಕೇಂದ್ರದ ಯೋಜನೆಗಳ ಸಮನ್ವಯಕ್ಕಾಗಿ ಹೊಸ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದು ವಿವರಿಸಿದರು.
ಯಶಸ್ವಿ ದಸರಾ ಆಚರಣೆಗೆ ಕೃತಜ್ಞತೆ; ಶಿವಮೊಗ್ಗ ದಸರಾ ಆನೆ ಘಟನೆ ಒಂದು ಎಚ್ಚರಿಕೆ ಗಂಟೆ:
ವಿಶ್ವವಿಖ್ಯಾತ ಮೈಸೂರು ದಸರಾ ಅತ್ಯಂತ ಯಶಸ್ವಿಯಾಗಿ ಹಾಗೂ ವ್ಯವಸ್ಥಿತವಾಗಿ ಜರುಗಿದೆ ಎಂದು ಸಿಎಂ ಸಂತಸ ವ್ಯಕ್ತಪಡಿಸಿದರು. ಎಲ್ಲಾ ಸಚಿವರಿಗೂ ಒಂದೊಂದು ವಿಭಾಗದ ಜವಾಬ್ದಾರಿ ನೀಡಲಾಗಿತ್ತು. ವಿದೇಶಿ ಗಣ್ಯರ ವ್ಯವಸ್ಥೆಯನ್ನು ಬಸವರಾಜ ರಾಯರೆಡ್ಡಿ ಅವರು ಅಚ್ಚುಕಟ್ಟಾಗಿ ನಿರ್ವಹಿಸಿದ್ದರೆ, ದೀಪಾಲಂಕಾರ (ಲೈಟಿಂಗ್ಸ್), ಕೃಷಿ ಹಾಗೂ ವಸ್ತುಪ್ರದರ್ಶನದ ಜವಾಬ್ದಾರಿಯನ್ನು ಸಚಿವ ಕೆ.ಜೆ. ಜಾರ್ಜ್ ಉತ್ತಮವಾಗಿ ನಿಭಾಯಿಸಿದ್ದಾರೆ. ಸ್ಥಳೀಯ ಸಂಸ್ಥೆಗಳ ಚುನಾವಣೆ ಇದ್ದ ಕಾರಣ ಉಪಮುಖ್ಯಮಂತ್ರಿಗಳು ಸೇರಿದಂತೆ ಅರ್ಧದಷ್ಟು ಸಚಿವರಿಗೆ ಒತ್ತಡ ಹೇರಲಿಲ್ಲ ಎಂದರು.
ದಸರಾ ಯಶಸ್ಸಿಗೆ ಸಹಕರಿಸಿದ ಚಿತ್ರರಂಗದ ಕಲಾವಿದರು, ಜಯಮಾಲಾ, ರಾಕ್‌ಲೈನ್ ವೆಂಕಟೇಶ್ ತಂಡ, ಕ್ರೀಡಾಪಟುಗಳು, ಆಕರ್ಷಕ ಸ್ತಬ್ಧಚಿತ್ರಗಳನ್ನು ಕಳುಹಿಸಿಕೊಟ್ಟ ಬಿಎಚ್‌ಇಎಲ್ (BHEL), ಭಾರತೀಯ ಸೇನೆ, ವಾಯುಪಡೆ, ಎಚ್‌ಎಎಲ್ (HAL), ಎಚ್‌ಎಂಟಿ (HMT) ಸಂಸ್ಥೆಗಳು, ಪೊಲೀಸ್ ಸಿಬ್ಬಂದಿ ಹಾಗೂ ಮಾಧ್ಯಮಗಳಿಗೆ ರಾಜ್ಯದ ಜನತೆಯ ಪರವಾಗಿ ಕೈಮುಗಿದು ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು. ವಿಶೇಷವಾಗಿ ಡ್ರೋನ್ ಶೋ ಹೊಸ ದಾಖಲೆ ಬರೆದಿದ್ದು, ಪಂಜಿನ ಕವಾಯತು ಇಡೀ ಭಾರತದ ವೈಭವವನ್ನು ಎತ್ತಿ ತೋರಿಸಿದೆ. ಇಬ್ಬರು ಬೇರೆ ರಾಜ್ಯಗಳ ಮುಖ್ಯಮಂತ್ರಿಗಳೂ ಆಗಮಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದರು.
ಇದೇ ವೇಳೆ ಶಿವಮೊಗ್ಗ ದಸರಾದಲ್ಲಿ ಆನೆ ಗಲಾಟೆ ಮಾಡಿದ ಘಟನೆ ಕುರಿತು ಪ್ರತಿಕ್ರಿಯಿಸಿದ ಸಿಎಂ, “ಇಂತಹ ಘಟನೆಗಳು ನಡೆಯುವ ಸಾಧ್ಯತೆ ಇರುತ್ತದೆ ಎಂಬ ಅರಿವು ನನಗಿತ್ತು. ಅದಕ್ಕಾಗಿಯೇ ಒಂದು ತಿಂಗಳ ಮುಂಚಿತವಾಗಿಯೇ ಸಚಿವ ರಾಮಲಿಂಗಾ ರೆಡ್ಡಿ ಅವರಿಗೆ ಬಹಳ ಎಚ್ಚರಿಕೆಯಿಂದ ಇರುವಂತೆ ಸೂಚಿಸಿದ್ದೆ. ಬೇರೆ ಆನೆಯನ್ನು ಬಳಸುವ ಬದಲು ಕೊನೆಗೆ ‘ಪ್ರಶಾಂತ್’ ಆನೆಯನ್ನು ಆಯ್ಕೆ ಮಾಡಿಕೊಂಡಿದ್ದರು. ಅಲ್ಲಿ ಸ್ವಲ್ಪ ಯಾಮಾರಿದ್ದಾರೆ, ಆದರೆ ದೈವವಶಾತ್ ಯಾರಿಗೂ ಯಾವುದೇ ತೊಂದರೆಯಾಗಿಲ್ಲ. ಇದು ಮುಂದಿನ ದಿನಗಳಿಗೆ ಒಂದು ಎಚ್ಚರಿಕೆಯ ಗಂಟೆಯಾಗಿದ್ದು, ಮುಂದೆ ಇನ್ನಷ್ಟು ಮುನ್ನೆಚ್ಚರಿಕೆ ವಹಿಸಲಾಗುವುದು” ಎಂದು ಸ್ಪಷ್ಟಪಡಿಸಿದರು.


















