ಬೆಂಗಳೂರು, ಅ.23 www.bengaluruwire.com: ರಾಜಧಾನಿ ಬೆಂಗಳೂರಿನ ಕಸ ವಿಲೇವಾರಿ ವ್ಯವಸ್ಥೆ ಹಾಗೂ ಟೆಂಡರ್ ಪ್ರಕ್ರಿಯೆಯಲ್ಲಿ ಭಾರೀ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ತಮ್ಮ ಅಧಿಕೃತ ಎಕ್ಸ್ (X) ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, “ಕಸದಲ್ಲೂ ಕಾಸು ಹೊಡೆಯುವ ಕಳ್ಳ ದಂಧೆ ರಾಜ್ಯ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರಕ್ಕೆ ಹಿಡಿದ ಕನ್ನಡಿಯಾಗಿದೆ. ಬೆಂಗಳೂರನ್ನು ಕಸದ ತೊಟ್ಟಿಯನ್ನಾಗಿ ಮಾಡಿರುವ ಈ ಅಯೋಗ್ಯ ಸರ್ಕಾರಕ್ಕೆ ನಗರದ ಸ್ವಚ್ಛತೆ ಹಾಗೂ ಜನಸಾಮಾನ್ಯರ ಆರೋಗ್ಯದ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲ” ಎಂದು ಕಿಡಿಕಾರಿದ್ದಾರೆ.
ನಿಯಮ ಗಾಳಿಗೆ ತೂರಿ ಶೇ.14 ರವರೆಗೆ ಟೆಂಡರ್: ಮಣೆ! ಕಸ ವಿಲೇವಾರಿ ಹೆಸರಿನಲ್ಲಿ ಕೆಟಿಪಿಪಿ (KTPP) ಕಾಯ್ದೆಯನ್ನು ರಾಜಾರೋಷವಾಗಿ ಉಲ್ಲಂಘಿಸಿ ಕೋಟ್ಯಂತರ ರೂಪಾಯಿಗಳ ಹಗರಣ ನಡೆಸಿರುವುದು ಈಗ ಬಯಲಾಗಿದೆ. ಆರ್ಥಿಕ ಇಲಾಖೆಯ ಸ್ಪಷ್ಟ ಆದೇಶ ಹಾಗೂ ನಿಯಮಗಳನ್ನು ಗಾಳಿಗೆ ತೂರಿ, ಶೇ.5 ರಷ್ಟು ಪ್ರೀಮಿಯಂ ಮಿತಿಯನ್ನೂ ಮೀರಿ ಗುತ್ತಿಗೆದಾರರಿಗೆ ಶೇ.14 ರವರೆಗೆ ಮಣೆ ಹಾಕಲಾಗಿದೆ. ‘ಬ್ರ್ಯಾಂಡ್ ಬೆಂಗಳೂರು’ ಎನ್ನುತ್ತಲೇ ಕಸದ ಟೆಂಡರ್ಗಳಲ್ಲಿ ಸರ್ಕಾರಿ ಬೊಕ್ಕಸವನ್ನು ಲೂಟಿ ಹೊಡೆಯುವುದೇ ಈ ಸರ್ಕಾರದ ಏಕೈಕ ಸಾಧನೆಯಾಗಿದೆ ಎಂದು ಆರ್. ಅಶೋಕ್ ದೂರಿದ್ದಾರೆ.
ಕಮೀಷನ್ ದಂಧೆಯಲ್ಲಿ ಸರ್ಕಾರ ತಲ್ಲೀನ:

ಇದೇ ವೇಳೆ ಡಿ.ಕೆ. ಶಿವಕುಮಾರ್ ಅವರನ್ನು ಗುರಿಯಾಗಿಸಿ ವಾಗ್ದಾಳಿ ನಡೆಸಿರುವ ಅಶೋಕ್, “ಕೆ.ಆರ್. ಮಾರುಕಟ್ಟೆಯಿಂದ ಹಿಡಿದು ಇಡೀ ಬೆಂಗಳೂರು ನಗರವೇ ಕಸದ ಗುಂಡಿಯಾಗಿ ದುರ್ನಾತ ಬೀರುತ್ತಿದೆ. ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದರೆ, ಭ್ರಷ್ಟ ಕಾಂಗ್ರೆಸ್ ಸರ್ಕಾರ ಮಾತ್ರ ಟೆಂಡರ್ ಕಮೀಷನ್ ದಂಧೆಯಲ್ಲಿ ತಲ್ಲೀನವಾಗಿದೆ. ನಿಮ್ಮ ಈ ಭ್ರಷ್ಟ ಆಡಳಿತಕ್ಕೆ ಜನತೆ ಇನ್ನು ಎಷ್ಟು ದಿನ ಹಿಡಿಶಾಪ ಹಾಕಬೇಕು?” ಎಂದು ಪ್ರಶ್ನಿಸಿದ್ದಾರೆ.
ರೀಲ್ಸ್ ಮಾಡುತ್ತಾ ಕಾಲಹರಣ ಮಾಡುತ್ತಿರುವ ಸಚಿವರು!:
ಸಚಿವ ಕೃಷ್ಣ ಬೈರೇಗೌಡ ಅವರ ಕಾರ್ಯವೈಖರಿಗೂ ಚಾಟಿ ಬೀಸಿರುವ ವಿಪಕ್ಷ ನಾಯಕ, “ಕಸ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲರಾಗಿ, ಕೇವಲ ರೀಲ್ಸ್ ಮಾಡುತ್ತಾ ಕಾಲಹರಣ ಮಾಡುತ್ತಿದ್ದೀರಿ. ಮಳೆಗಾಲದಲ್ಲಿ ಕಸ ಕೊಳೆತು ಸಾಂಕ್ರಾಮಿಕ ರೋಗಗಳು ಹರಡುವ ಭೀಕರ ವಾತಾವರಣವನ್ನು ಸೃಷ್ಟಿಸಿದ್ದೀರಿ. ನಿಮ್ಮ ದುರಾಡಳಿತದ ಫಲವಾಗಿ ಬೆಂಗಳೂರಿನ ಜನತೆ ಈ ಉಸಿರುಗಟ್ಟುವ ವಾತಾವರಣವನ್ನು ಇನ್ನು ಎಷ್ಟು ದಿನ ಸಹಿಸಿಕೊಳ್ಳಬೇಕು?” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಬಿಎ ಚುನಾವಣೆಯಲ್ಲಿ ತಕ್ಕ ಪಾಠ ಗ್ಯಾರೆಂಟಿ: ಕಾನೂನು ಮತ್ತು ನಿಯಮಗಳನ್ನು ಉಲ್ಲಂಘಿಸಿ, ಜನಸಾಮಾನ್ಯರ ತೆರಿಗೆ ಹಣವನ್ನು ಕೊಳ್ಳೆಹೊಡೆಯುತ್ತಿರುವ ಈ ಭ್ರಷ್ಟ ಕಾಂಗ್ರೆಸ್ ಸರ್ಕಾರಕ್ಕೆ ಮುಂಬರುವ ಜಿಬಿಎ (ಗ್ರೇಟರ್ ಬೆಂಗಳೂರು ಪ್ರಾಧಿಕಾರ) ಚುನಾವಣೆಯಲ್ಲಿ ಬೆಂಗಳೂರಿನ ಜನತೆ ತಕ್ಕ ಪಾಠ ಕಲಿಸುವುದು ಗ್ಯಾರೆಂಟಿ ಎಂದು ಆರ್. ಅಶೋಕ್ ಎಚ್ಚರಿಕೆ ನೀಡಿದ್ದಾರೆ.

















