ಬೆಂಗಳೂರು, ಸೆ.11 www.bengaluruwire.com: ಜನರ ತೆರಿಗೆ ಹಣವನ್ನು ನೀರಿನಂತೆ ಪೋಲು ಮಾಡುವುದರಲ್ಲಿ ಬಿಡಿಎ ಅಧಿಕಾರಿಗಳಿಗೆ ಸಾಟಿಯೇ ಇಲ್ಲ ಎಂಬ ಮಾತು ಮತ್ತೊಮ್ಮೆ ಸಾಬೀತಾಗಿದೆ.
ಕೇವಲ ಒಂದೂವರೆ ವರ್ಷದ ಹಿಂದಷ್ಟೇ ಬರೋಬ್ಬರಿ ₹15 ಕೋಟಿ ವೆಚ್ಚದಲ್ಲಿ ನವೀಕರಣಗೊಂಡಿದ್ದ ಕುಮಾರಪಾರ್ಕ್‌ನ ಬಿಡಿಎ ಕೇಂದ್ರ ಕಚೇರಿಯ ಐತಿಹಾಸಿಕ ಕಟ್ಟಡವನ್ನು ನೆಲಸಮ ಮಾಡಿ, ಬಹುಮಹಡಿ ಕಟ್ಟಡ ನಿರ್ಮಿಸಲು ಪ್ರಾಧಿಕಾರ ಸದ್ದಿಲ್ಲದೆ ಅಡ್ಡದಾರಿ ಹಿಡಿದಿದೆ.
ಇನ್ನು 60-70 ವರ್ಷಗಳ ಕಾಲ ಸುಭದ್ರವಾಗಿ ಉಳಿಯಬಲ್ಲ ಈ ಪಾರಂಪರಿಕ ಕಟ್ಟಡವನ್ನು ಉರುಳಿಸುವ ಆಡಳಿತ ಮಂಡಳಿಯ ಈ ಹುಚ್ಚು ನಿರ್ಧಾರದ ವಿರುದ್ಧ ಬಿಡಿಎ ನೌಕರರ ಸಂಘವು ಈಗ ನೇರ ಸಮರ ಸಾರಿದೆ.
ಪಾರಂಪರಿಕ ಕಟ್ಟಡ ಕೆಡವಲು ಚಿತಾವಣೆ:

ಮೈಸೂರು ಮಹಾರಾಜರು ಅಂದಿನ ಸಿಐಟಿಬಿ (CITB) ರೂಪದಲ್ಲಿ ಅಡಿಪಾಯ ಹಾಕಿದ ಈ ಕಟ್ಟಡಕ್ಕೆ ಸುಮಾರು ಎಂಟು ದಶಕಗಳ ಇತಿಹಾಸವಿದೆ. ಬೆಂಗಳೂರಿನ ಬಡಾವಣೆಗಳನ್ನು ರೂಪಿಸಿದ ಹೆಮ್ಮೆಯ ಇತಿಹಾಸ ಹೊತ್ತಿರುವ ಈ ಪಾರಂಪರಿಕ ಆಸ್ತಿಯನ್ನು ‘ಅಭಿವೃದ್ಧಿ’ ಹೆಸರಿನಲ್ಲಿ ಕೆಡವಲು ಇತ್ತೀಚೆಗೆ ನಡೆದ ಬಿಡಿಎ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಇದಷ್ಟೇ ಅಲ್ಲದೆ, ಇದೇ ಸೆಪ್ಟೆಂಬರ್ 25ರ ಒಳಗಾಗಿ ಇಡೀ ಕಚೇರಿಯನ್ನು ಬೇರೆಡೆಗೆ ಖಾಲಿ ಮಾಡಬೇಕೆಂದು ಆಯುಕ್ತರು ಹೊರಡಿಸಿರುವ ಆಂತರಿಕ ಟಿಪ್ಪಣಿ (ಟಿಪ್ಪಣಿ ಸಂಖ್ಯೆ: ಬೆಂಅಪ್ರಾ/ಆಯು/399/2026-27) ಬೆಂಕಿಗೆ ತುಪ್ಪ ಸುರಿದಂತಾಗಿದೆ.
₹100 ಕೋಟಿ ಸಾರ್ವಜನಿಕ ಹಣ ಲೂಟಿಗೆ ರಹದಾರಿ?:
2025-26ನೇ ಸಾಲಿನಿಂದ ಈವರೆಗೆ ಕಟ್ಟಡದ ನವೀಕರಣಕ್ಕಾಗಿಯೇ ₹15 ಕೋಟಿಗೂ ಹೆಚ್ಚು ಹಣ ವ್ಯಯಿಸಲಾಗಿದ್ದು, ಸದ್ಯವೂ ಕಾಮಗಾರಿ ಪ್ರಗತಿಯಲ್ಲಿದೆ. ಹೀಗಿರುವಾಗ ಕಚೇರಿಯನ್ನು ಬೇರೆಡೆಗೆ ಸ್ಥಳಾಂತರಿಸುವುದು, ಹೊಸ ಜಾಗಕ್ಕೆ ನೀಡಬೇಕಾದ ದುಬಾರಿ ಬಾಡಿಗೆ ಹಾಗೂ ನಿರ್ವಹಣಾ ವೆಚ್ಚ ಸೇರಿ ಕನಿಷ್ಠ ₹100 ಕೋಟಿ ರೂಪಾಯಿಗಳಿಗೂ ಹೆಚ್ಚು ಆರ್ಥಿಕ ಹೊರೆ ಪ್ರಾಧಿಕಾರಕ್ಕೆ ಬೀಳಲಿದೆ. ಇಷ್ಟು ಬೃಹತ್ ಮೊತ್ತವನ್ನು ಪೋಲು ಮಾಡುವ ಬದಲು ಸಾರ್ವಜನಿಕ ಉಪಯೋಗಕ್ಕೆ ಬರುವ ವಾಣಿಜ್ಯ ಸಂಕೀರ್ಣ ಅಥವಾ ಸಭಾಂಗಣಗಳನ್ನು ಕಟ್ಟಲು ಬಳಸಬಹುದಲ್ಲವೇ ಎಂಬುದು ನೌಕರರ ನೇರ ಪ್ರಶ್ನೆ.
ಈ ದುಡುಕಿನ ನಿರ್ಧಾರದ ವಿರುದ್ಧ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ನೌಕರರ ಸಂಘವು ಅಧ್ಯಕ್ಷರು ಮತ್ತು ಆಯುಕ್ತರಿಗೆ ಖಡಕ್ ಮನವಿ ಪತ್ರವನ್ನು ಸಲ್ಲಿಸಿದೆ. ನೌಕರರ ಪಾಲಿಗೆ ತಾಯಿಯಂತಿರುವ, ನೂರಾರು ವೃಕ್ಷಗಳ ನೆರಳಿರುವ ಈ ಪಾರಂಪರಿಕ ಜಾಗವನ್ನು ಯಾವುದೇ ಕಾರಣಕ್ಕೂ ನೆಲಸಮ ಮಾಡಲು ಬಿಡುವುದಿಲ್ಲ ಎಂದು ಎಚ್ಚರಿಸಿರುವ ಸಂಘಟನೆ, ಕಚೇರಿ ಸ್ಥಳಾಂತರದ ಆದೇಶವನ್ನು ತಕ್ಷಣವೇ ಹಿಂಪಡೆಯಬೇಕು ಎಂದು ಪಟ್ಟು ಹಿಡಿದಿದೆ.
ರಿಯಲ್ ಎಸ್ಟೇಟ್ ಲಾಬಿಗೆ ಮಣಿದು, ಸುಭದ್ರವಾಗಿರುವ ಪಾರಂಪರಿಕ ಕಟ್ಟಡವನ್ನು ಕೆಡವಿ ಕಮಿಷನ್ ದಂಧೆಗೆ ದಾರಿ ಮಾಡಿಕೊಡಲಾಗುತ್ತಿದೆಯೇ ಎಂಬ ಅನುಮಾನ ಸಾರ್ವಜನಿಕ ವಲಯದಲ್ಲೂ ದಟ್ಟವಾಗಿದೆ.


















