ಬೆಂಗಳೂರು, ಸೆ.19 www.bengaluruwire.com:ರಾಜಧಾನಿಯ ಪ್ರಮುಖ ಸಂಪರ್ಕ ಕೊಂಡಿಯಾಗಿರುವ ಬನ್ನೇರುಘಟ್ಟ ರಸ್ತೆಯ ಅವ್ಯವಸ್ಥೆಗೆ ಮುಕ್ತಿ ಹಾಡಲು ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.
ಜೆ.ಪಿ. ನಗರದಿಂದ ಗೊಟ್ಟಿಗೆರೆ ನೈಸ್ ರಸ್ತೆ ಜಂಕ್ಷನ್‌ವರೆಗಿನ ಇಡೀ ಸ್ಟ್ರೆಚ್ ಅನ್ನು ಶೀಘ್ರವೇ ‘ವೈಟ್‌ಟಾಪಿಂಗ್’ ಮಾಡಲಾಗುವುದು ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಘೋಷಿಸಿದ್ದಾರೆ.
ಗುರುವಾರ ತಡರಾತ್ರಿ ಸುಮಾರು ಎರಡೂವರೆ ಗಂಟೆಗಳ ಕಾಲ ಅಧಿಕಾರಿಗಳೊಂದಿಗೆ ರಸ್ತೆಗಿಳಿದು ವಾಸ್ತವ ಸ್ಥಿತಿ ಪರಿಶೀಲಿಸಿದ ಸಚಿವರು, ನಿರ್ಲಕ್ಷ್ಯ ತೋರಿದ ಎಂಜಿನಿಯರ್‌ಗಳು ಹಾಗೂ ಗುತ್ತಿಗೆದಾರರ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದರು.
ಶೇ. 34 ರಷ್ಟು ಬೀದಿ ದೀಪಗಳು ಆಫ್: ಕತ್ತಲಲ್ಲಿ ರಸ್ತೆಗಳು:

ಜೆ.ಪಿ. ನಗರ ಮೆಟ್ರೋ ನಿಲ್ದಾಣದಿಂದ ನೈಸ್ ರಸ್ತೆ ಜಂಕ್ಷನ್‌ವರೆಗಿನ ಪರಿಶೀಲನೆಯಲ್ಲಿ ಆಘಾತಕಾರಿ ಸತ್ಯ ಬೆಳಕಿಗೆ ಬಂದಿದೆ. ಈ ಮಾರ್ಗದಲ್ಲಿರುವ ಒಟ್ಟು 1,540 ಬೀದಿ ದೀಪಗಳ ಪೈಕಿ ಬರೋಬ್ಬರಿ 530 ದೀಪಗಳು (ಶೇ. 34) ಉರಿಯುತ್ತಿಲ್ಲ. ಹುಳಿಮಾವು, ಕ್ರೈಸ್ಟ್ ಯೂನಿವರ್ಸಿಟಿ ಮುಂಭಾಗ ಹಾಗೂ ವೇಗಾ ಸಿಟಿ ಮಾಲ್ ಬಳಿ ಕತ್ತಲು ಆವರಿಸಿರುವುದನ್ನು ಖುದ್ದು ಪರಿಶೀಲಿಸಿದ ಸಚಿವರು, ಕರ್ತವ್ಯ ಲೋಪ ಎಸಗಿರುವ ಅಧಿಕಾರಿಗಳಿಗೆ ಸುಳ್ಳು ವರದಿ ನೀಡದಂತೆ ಎಚ್ಚರಿಕೆ ನೀಡಿ, ಗುತ್ತಿಗೆದಾರರನ್ನು ಬ್ಲ್ಯಾಕ್‌ಲಿಸ್ಟ್‌ಗೆ ಸೇರಿಸಲು ಸೂಚಿಸಿದರು.
ಪಾದಚಾರಿ ಮಾರ್ಗಗಳ ದುಃಸ್ಥಿತಿ: ಅಧಿಕಾರಿಗಳಿಗೆ ತರಾಟೆ:
ಸ್ಲ್ಯಾಬ್‌ಗಳು ಪಕ್ಕದಲ್ಲೇ ಬಿದ್ದಿದ್ದರೂ ತೆರೆದ ಚರಂಡಿಗಳನ್ನು ಮುಚ್ಚದ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ಗೆ ಸ್ಥಳದಲ್ಲೇ ಕ್ಲಾಸ್ ತೆಗೆದುಕೊಂಡರು.
ಫುಟ್‌ಪಾತ್‌ಗಳ ಮೇಲೆ ಅಕ್ರಮವಾಗಿ ಅಳವಡಿಸಿರುವ ಬೃಹತ್ ಜಾಹೀರಾತು ಫಲಕಗಳು, ಅಪಾಯಕಾರಿ ಬೆಸ್ಕಾಂ ಕೇಬಲ್‌ಗಳು ಹಾಗೂ ಕಟ್ಟಡ ತ್ಯಾಜ್ಯಗಳನ್ನು ತಕ್ಷಣ ತೆರವುಗೊಳಿಸಲು ತಾಕೀತು ಮಾಡಿದರು.
ಹಿರಿಯ ನಾಗರಿಕರು ಮತ್ತು ವಿಶೇಷಚೇತನರಿಗೆ ಅನುಕೂಲವಾಗುವಂತೆ ಸ್ಲೋಪ್‌ಗಳು ಹಾಗೂ ವಾಹನಗಳು ಫುಟ್‌ಪಾತ್ ಏರದಂತೆ ಬೊಲಾರ್ಡ್‌ಗಳನ್ನು ಅಳವಡಿಸಲು ನಿರ್ದೇಶನ ನೀಡಿದರು.
ರಿಯಾಲಿಟಿ ಚೆಕ್ ಮುಖ್ಯಾಂಶಗಳು:
ಒಟ್ಟು ಬೀದಿ ದೀಪಗಳು: 1,540 ಕಾರ್ಯನಿರ್ವಹಿಸುತ್ತಿರುವ ದೀಪಗಳು: 1,010
ಕೆಟ್ಟುಹೋಗಿರುವ ದೀಪಗಳು: 530 (ಶೇ. 34 ರಷ್ಟು ಸ್ಥಗಿತ)
ಪ್ರಮುಖ ನಿರ್ಧಾರ: ಬನ್ನೇರುಘಟ್ಟ ರಸ್ತೆಗೆ ಪೂರ್ಣ ಪ್ರಮಾಣದ ವೈಟ್‌ಟಾಪಿಂಗ್ ಭಾಗ್ಯ.
ರಕ್ಷಣಾ ಕ್ರಮ: ಪಾದಚಾರಿ ಮಾರ್ಗಗಳ ಮರು ಒತ್ತುವರಿ ತಡೆಗೆ ಜಿಬಿಎ ಮತ್ತು ಪೊಲೀಸ್ ಸಮನ್ವಯದಲ್ಲಿ ಶೀಘ್ರವೇ ‘ಜಂಟಿ ಟಾಸ್ಕ್ ಫೋರ್ಸ್’ ರಚನೆ.






















